Advertisement

ವಿರೋಧಿಸುವವರನ್ನು ಶತ್ರುಗಳಂತೆ ಕಾಣುತ್ತಾರೆ- CM ವಿರುದ್ಧ B.K. ಹರಿಪ್ರಸಾದ್‌ ವಾಗ್ಧಾಳಿ

10:15 PM Aug 20, 2023 | Team Udayavani |

ಬೆಂಗಳೂರು: ದೇವರಾಜ ಅರಸು ಅವರು ವಿರೋಧಿಗಳನ್ನೂ ಕರೆದು ಮಾತನಾಡಿಸುತ್ತಿದ್ದರು. ಈಗಂತೂ ಕರೆದು ಮಾತನಾಡುವುದಿರಲಿ, ವಿರೋಧಿಸುವವರನ್ನು ಶತ್ರುಗಳಂತೆ ಕಾಣುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಪರೋಕ್ಷ ವಾಗ್ಧಾಳಿ ನಡೆಸಿದರು.
ರವಿವಾರ ಬೆಂಗಳೂರಿನಲ್ಲಿ ನಡೆದ ಡಿ.ದೇವರಾಜ ಅರಸು ಮತ್ತು ರಾಜೀವ್‌ ಗಾಂಧಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದ ವೇದಿಕೆಯಲ್ಲಿ ಡಿಸಿಎಂ ಶಿವಕುಮಾರ್‌ ಸಮ್ಮುಖದಲ್ಲೇ ಸಿಎಂ ಹಾಗೂ ಡಿಸಿಎಂರನ್ನು ಮಾತಿನಿಂದಲೇ ತಿವಿದರು.

Advertisement

ನಾವು ಅಧಿಕಾರಕ್ಕೆ ಬಂದರೆ ವಿವಿಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆಸುತ್ತೇವೆ ಎಂದು ಮಾತು ಕೊಟ್ಟಿದ್ದೆವು. ಇದುವರೆಗೆ ಚುನಾವಣೆ ನಡೆದಿಲ್ಲ. ಕೆಪಿಸಿಸಿ ಅಧ್ಯಕ್ಷರು ಅಧಿಕಾರಕ್ಕೆ ಬಂದ ಮೇಲೆ ಮರೆತಿದ್ದಾರೆ ಅನಿಸುತ್ತದೆ. ವಿವಿಗಳಲ್ಲಿ ಚುನಾವಣೆ ನಡೆದರೆ ಮಾತ್ರ ನಾಯಕರು ಹುಟ್ಟಿಕೊಳ್ಳುತ್ತಾರೆ. ಎಲ್ಲ ವಿವಿಗಳಲ್ಲಿ ಚುನಾವಣೆ ತನ್ನಿ. ಇಲ್ಲದಿದ್ದರೆ, ನಾಯಕರ ಹಿಂದೆ ಬ್ಯಾಗ್‌ ಹಿಡಿದು ಓಡಾಡುವರೇ ನಾಯಕರಾಗುತ್ತಾರೆ. ಯುವಕರನ್ನು ಗುರುತಿಸಿ ಅವಕಾಶ ಕೊಟ್ಟರೆ ಮಾತ್ರ ಪಕ್ಷವೂ ಬಲವರ್ಧನೆ ಆಗುತ್ತದೆ ಎಂದು ಸಲಹೆ ನೀಡಿದರು.

ಅವಕಾಶ ನೀಡದಿದ್ದರೆ ಪಕ್ಷ ಉಳಿಯದು
ನಾನು, ಬೋಸರಾಜು, ನಜೀರ್‌ ಅಹ್ಮದ್‌, ರೇವಣ್ಣ ಎಲ್ಲರೂ ಅರಸು ಕಾಲದಲ್ಲಿ ರಾಜಕೀಯಕ್ಕೆ ಬಂದವರು. ನನಗೆ ರಾಜೀವ್‌ ಗಾಂಧಿ ವಿಧಾನಸಭೆ ಹಾಗೂ ಲೋಕಸಭೆಯ ಟಿಕೆಟ್‌ ನಿರಾಕರಿಸಿದ್ದರು. ಅನಂತರ ನಿನಗೆ ಬೇಜಾರಾಯಿತಾ ಎಂದು ಕೇಳಿದ್ದರು. ಹೈಕಮಾಂಡ್‌ ನಿರ್ಧಾರ ಗೌರವಿಸುತ್ತೇನೆ ಎಂದಿದ್ದೆ. ನಾನು ಅಧಿಕಾರಕ್ಕೆ ಬಂದ ಬಳಿಕ ರಾಜ್ಯಸಭೆಗೆ ಆಯ್ಕೆ ಮಾಡುತ್ತೇನೆ ಎಂದಿದ್ದರು. ಗೆದ್ದ ಬಳಿಕ ಹಲವರ ವಿರೋಧದ ನಡುವೆಯೂ 1990ರಲ್ಲಿ ರಾಜ್ಯಸಭೆ ಸದಸ್ಯನನ್ನಾಗಿ ಮಾಡಿದರು. ಈಗಲೂ ಆ ರೀತಿಯಲ್ಲಿ ಆಯ್ಕೆಗಳು ನಡೆಯಬೇಕು. ಯಾರೇ ವಿರೋಧಿಸಿದರೂ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಪಕ್ಷ ಉಳಿಯುವುದಿಲ್ಲ ಎಂದರು.

ಹಿಂದುಳಿದ ವರ್ಗವೆಂದರೆ ಒಂದೇ ಜಾತಿಯಲ್ಲ
ಆಹ್ವಾನ ಕೊಟ್ಟ ಕಾರ್ಯಕರ್ತರ ಮದುವೆಗೆ ಹೋಗಲಾಗದಿದ್ದರೆ ತಮ್ಮ ರಾಜಕೀಯ ಕಾರ್ಯದರ್ಶಿ ಮೂಲಕ ಹಣ ಕೊಟ್ಟು ಕಳುಹಿಸುತ್ತಿದ್ದ ಅರಸು ಅವರ ವ್ಯವಸ್ಥೆ ಈಗಲೂ ಇರಬೇಕಿತ್ತು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್‌ ಅಹಮ್ಮದ್‌ ಅವರತ್ತ ನೋಟ ಬೀರಿದರು.

ಅರಸು ಅವರು ಎಲ್ಲ ವರ್ಗದ ಬಗ್ಗೆ ಕಾಳಜಿ ಹೊಂದಿದ್ದರು. 5 ಸಾವಿರ ಜನಸಂಖ್ಯೆ ಇರುವ ಸಮುದಾಯವನ್ನು ಗುರುತಿಸಿ ನಿಗಮ-ಮಂಡಳಿಗಳಲ್ಲಿ ಸ್ಥಾನ ಕೊಡುತ್ತಿದ್ದರು. ಹಿಂದುಳಿದ ವರ್ಗ ಎಂದರೆ ಒಂದೇ ಪ್ರಬಲ ಜಾತಿಯಲ್ಲ. ಅವರನ್ನಷ್ಟೇ ಗುರುತಿಸಿ ಅಧಿಕಾರ ಕೊಡುವುದಲ್ಲ. ನಾವು ಅರಸು ಅವರ ವಿರೋಧಿ ಬಣದಲ್ಲಿದ್ದವರು. ಕರೆದು ಮಾತನಾಡಿಸುತ್ತಿದ್ದರು. ನೀವು ಕಪಿಗಳು, ಕಪಿಚೇಷ್ಟೆ ಮಾಡುತ್ತೀರಿ. ಇದರಿಂದ ವಿಪಕ್ಷಗಳಿಗೆ ಅನುಕೂಲ ಆಗುತ್ತದೆ. ಆದರೂ ನಾನು ನಿಮ್ಮನ್ನು ರಕ್ಷಿಸುತ್ತೇನೆ ಎನ್ನುತ್ತಿದ್ದರು. ಎಲ್ಲರನ್ನು ಜತೆಗೆ ಕರೆದುಕೊಂಡು ಹೋಗಬೇಕು. ಇಲ್ಲದಿದ್ದರೆ ಮನೆಗೆ ಕಳುಹಿಸುತ್ತಾರೆ. ಈಗೆಲ್ಲ ಕರೆದು ಮಾತನಾಡುವುದಿರಲಿ, ವಿರೋಧಿಸುವವರನ್ನ ಶತ್ರುಗಳಂತೆ ನೋಡುತ್ತಾರೆ. ಕಾರ್ಯಕರ್ತರ ರಕ್ಷಣೆ ಮಾಡಬೇಕು ಇಲ್ಲ ಅಂದರೆ ಪಕ್ಷಕ್ಕೆ ಸಂಕಷ್ಟ ಬರಲಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next