ಅಂಕೋಲಾ : ನನ್ನ ಮೇಲೆ ಪತ್ರಿಕೆಯಲ್ಲಿ ಭ್ರಷ್ಟಾಚಾರದ ಆರೋಪ ಮಾಡಿದವರಿಗೆ ನ್ಯಾಯಾಲಯದಲ್ಲಿ ಪುರಾವೆ ಒದಗಿಸಲು ಸಾಧ್ಯವಾಗಿಲ್ಲವೇಕೆ? ಇವರೆಲ್ಲ ಪತ್ರಿಕೆಯಲ್ಲಿ ಹೀರೋ, ನ್ಯಾಯಾಲಯದಲ್ಲಿ ಜೀರೋ ಎಂದು ಶಾಸಕಿ ರೂಪಾಲಿ ನಾಯ್ಕ ವ್ಯಂಗ್ಯವಾಡಿದ್ದಾರೆ.
ಶನಿವಾರ ಸಂಜೆ ಬಿಜೆಪಿಯ ವಿಜಯ ಸಂಕಲ್ಪ ಅಭಿಯಾನದ ಹಿನ್ನೆಲೆಯಲ್ಲಿ ಬೇಳಾಬಂದರದ ವೀರಭದ್ರದೇವಸ್ಥಾನದ ಬಳಿ ಜರುಗಿದ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಮತ್ತು ಕ್ಷೇತ್ರದ ಸಾಧನೆಗಳ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದರು.
ನನ್ನ ಶಾಸಕತ್ವದ ಅವಧಿಯಲ್ಲಿ ಎರಡು ವರ್ಷ ನೆರೆಯಲ್ಲಿ ತೊಂದರೆಯಾದರೆ, ಒಂದು ವರ್ಷ ಕೊರೋನಾ ಭಾದಿಸಿದೆ. ಇರುವ ಅವಧಿಯಲ್ಲಿ ಸರ್ಕಾರದ ಮಟ್ಟದಲ್ಲಿ, ಸಚಿವರ ಮೇಲೆ ಒತ್ತಡ ಹಾಕಿ ಅನುದಾನ ತಂದು ಅಭಿವೃದ್ದಿ ಮಾಡಿದ್ದೇನೆ. ನಾನು ತಂದ ಅನುದಾನಕ್ಕೆ ಕರಪತ್ರ ಬಿಡುಗಡೆ ಮಾಡಿದ್ದೇನೆ. ಆದರೂ ವಿನಾಕಾರಣ ಪತ್ರಿಕೆಯಲ್ಲಿ ನನ್ನ ಮೇಲೆ ಶೇ. 40 ರ ಭ್ರಷ್ಟಾಚಾರದ ಆರೋಪ ಮಾಡಿ ನನ್ನನ್ನು ಕುಗ್ಗಿಸುವ ಹುನ್ನಾರ ನಡೆಸಿದ್ದಾರೆ. ಆದರೆ ಇವರಿಗೆ ನ್ಯಾಯಾಲಯದಲ್ಲಿ ಇನ್ನೂ ಪುರಾವೆ ಒದಗಿಸಲು ಸಾಧ್ಯವಾಗಿಲ್ಲ ಎಂದರು. ಯಾವುದೇ ಆರೋಪದ ಬಗ್ಗೆ ನಾನು ತಲೆಕೆಡಿಸಿಕೊಳ್ಳಲಾರೆ. ಮನಸಾಕ್ಷಿಗೆ ಬದ್ಧಳಾಗಿ ಕೆಲಸ ಮಾಡುತ್ತಿದ್ದೇನೆ. ಬಿಜೆಪಿ ಕಾರ್ಯಕರ್ತರು ಮನೆಮನೆಗೆ ಹೋಗಿ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ದಿಯನ್ನು ಜನರಿಗೆ ತಲುಪಿಸಬೇಕು ಎಂದರು.
ಹಿಂದುಳಿದ ವಿಭಾಗದ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜೇಂದ್ರ ನಾಯ್ಕ ಮಂಡಲಾಧ್ಯಕ್ಷ ಸಂಜಯ ನಾಯ್ಕ, ಪ್ರಮುಖರಾದ ಜಗದೀಶ ನಾಯಕ ಮೊಗಟಾ, ಸದಾನಂದ ನಾಯಕ, ಅನುರಾಧಾ ನಾಯ್ಕ, ಶಾಂತಾ ಬಾಂದೇಕರ್, ಮಾರುತಿ ಗೌಡ, ರವಿ ನಾಯ್ಕ ಬೇಳ, ಶ್ರೀಧರ ನಾಯ್ಕ, ಹೂವಾ ಖಂಡೇಕರ್ ಮತ್ತಿತರರು ಇದ್ದರು. ರಾಘು ಭಟ್ಟ ನಿರ್ವಹಿಸಿದರು.