Advertisement

ಮಾಸ್ಕ್‌ ಧರಿಸಿ ಇಲ್ಲವೇ ಕೋವಿಡ್‌ ಕೇಂದ್ರದಲ್ಲಿ ಸೇವೆ ಸಲ್ಲಿಸಿ: ಗುಜರಾತ್‌ ಹೈಕೋರ್ಟ್

03:50 PM Dec 02, 2020 | Karthik A |

ಅಹ್ಮದಾಬಾದ್‌: ಕೋವಿಡ್‌ 19 ಸೋಂಕನ್ನು ತಡೆಗಟ್ಟಲು ಸಾಮಾಜಿಕ ಅಂತರ ಸೇರಿದಂತೆ ಮಾಸ್ಕ್‌ ಧರಿಸುವ ನಿಯಮಗಳನ್ನು ಜಾರಿಗೆ ತರಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಅಂತರ ಕಣ್ಮರೆಯಾಗಿದ್ದು ಕನಿಷ್ಠ ಮಾಸ್ಕ್‌ ಅನ್ನೂ ಧರಿಸದೇ ಜನರು ಓಡಾಡುತ್ತಿದ್ದಾರೆ. ಕೋವಿಡ್‌ ಭಯವಿಲ್ಲದೇ ಈ ರೀತಿ ಮಾಸ್ಕ್‌ ಬಿಟ್ಟು ಓಡಾಡುವವರಿಗೆ ಗುಜರಾತ್‌ ಹೈಕೋರ್ಟ್‌ ಶಾಕ್‌ ಕೊಟ್ಟಿದೆ.

Advertisement

ಗುಜರಾತ್‌ನಲ್ಲಿ ಮಾಸ್ಕ್‌ ಧರಿಸದೇ ಓಡಾಡುವವರು ಇನ್ನು ಮುಂದೆ ಅಲ್ಲಿನ ಕೋವಿಡ್‌ ಕೇಂದ್ರಗಳಲ್ಲಿ 5ರಿಂದ 6 ಗಂಟೆಗಳ ಕಾಲ ಸೇವೆ ಸಲ್ಲಿಸಬೇಕಾಗುತ್ತದೆ. ಈ ಸೇವೆಯ ದಿನಗಳನ್ನು 5ರಿಂದ 15ರ ವರೆಗೆ ವಿಸ್ತರಿಸಬಹುದಾಗಿದೆ. ಶಿಕ್ಷೆಯ ರೂಪದಲ್ಲಿ ನೀಡಲಾಗುವ ಈ ಸೇವಾ ದಿನಗಳನ್ನು ಜನರ ವಯಸ್ಸು ಮತ್ತು ವೈದ್ಯಕೀಯ ದಾಖಲೆಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸಲಾಗುತ್ತದೆ.

ದೇಶದ ಕೆಲವು ಭಾಗಗಳಲ್ಲಿ ಎರಡನೇ ತರಂಗದ ಕೋವಿಡ್‌ ಪ್ರಸರಣವಾಗುತ್ತಿದ್ದು ಅದರಲ್ಲಿಯೂ ಗುಜರಾತ್‌ನಲ್ಲಿ ಸೋಂಕು ತೀವ್ರತೆಯನ್ನು ಹೆಚ್ಚಿಸಿಕೊಂಡಿದೆ. ಎರಡನೇ ತರಂಗದಲ್ಲಿರುವಾಗಲೂ ಅನೇಕ ಜನರು ಮಾಸ್ಕ್‌ ಧರಿಸುವುದಿಲ್ಲ. ಹೀಗಾಗಿ ಸೋಂಕಿನ ತೀವ್ರತೆಯನ್ನು ಅರಿಯದೇ ನಿರ್ಲಕ್ಷ್ಯ ತೋರಿಸುವ ಜನರನ್ನು ಕೋವಿಡ್‌ ಕೇಂದ್ರದಲ್ಲಿ ಸೇವೆ ಸಲ್ಲಿಸಲು ಸೂಚಿಸಬೇಕು ಎಂಬ ಅರ್ಜಿಯೊಂದರ ವಿಚಾರಣೆ ನಡೆಸಿದ ಹೈಕೋರ್ಟ್ ಬುಧವಾರ ತೀರ್ಪು ನೀಡಿದೆ. ಇದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಶೀಘ್ರ ಹೊರಡಿಸುವಂತೆ ಸರಕಾರವನ್ನು ಕೇಳಿದೆ.

ಕೇವಲ ದಂಡ ಸಾಕಾಗುವುದಿಲ್ಲ
ಮಾಸ್ಕ್‌ ನಿಯಮ ಉಲ್ಲಂಘನೆಯ ಕುರಿತಾದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರ ನ್ಯಾಯಪೀಠದಲ್ಲಿ ನಡೆಸಲಾಯಿತು. ಮಾಸ್ಕ್‌ ಧರಿಸದವರಿಂದ ದಂಡ ವಸೂಲಿ ಮಾಡಿದರೆ ಸಾಲದು ಎಂದು ನ್ಯಾಯಪೀಠ ಹೇಳಿದೆ. ಹೀಗಾಗಿ ಇಂತಹ ಜನರು ಕೋವಿಡ್‌ ಕೇಂದ್ರದಲ್ಲಿ ಸೇವೆ ಮಾಡುವ ಜವಾಬ್ದಾರಿಯನ್ನು ಹೊರಬೇಕು ಎಂದಿದೆ. ಇದು ಮಹತ್ವದ ವಿಷಯವಾಗಿದೆ, ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಅವಶ್ಯಕ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

108 ಆಂಬ್ಯುಲೆನ್ಸ್ ಸೇವೆ ಮತ್ತು 104 ಫೋನ್ ಕರೆಗಳ ಸೇವೆಯನ್ನು ಜಾರಿಗೆ ತಂದಿದೆ ಎಂದು ರಾಜ್ಯ ಸರಕಾರವು ನ್ಯಾಯಾಲಯದಲ್ಲಿ ಹೇಳಿದೆ. ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಆಮ್ಲಜನಕದ ಕೊರತೆ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಮಾಸ್ಕ್‌ ಧರಿಸದೇ ಸಮಸ್ಯೆಯನ್ನುಂಟು ಮಾಡುವವರ ವಿರುದ್ಧ ಕ್ರಮಕೈಗೊಳ್ಳಲು ಕಠಿನ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಪೊಲೀಸರನ್ನು ನಿಯೋಜಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next