ಚಿಕ್ಕಮಗಳೂರು: ಕೇರಳದ ಪಾಲಕ್ಕಾಡ್ ಜಿಲ್ಲೆಯ ಮಂಚಕಟ್ಟಿ ಅರಣ್ಯದಲ್ಲಿ ಆರು ದಿನದ ಹಿಂದೆ ಎಎನ್‌ಎಫ್‌ನ ಥಂಡರ್‌ಬೋಲ್ಟ್ ತಂಡ ನಡೆಸಿದ ದಾಳಿಯಲ್ಲಿ ಮೃತಪಟ್ಟವರು ಚಿಕ್ಕಮಗಳೂರು ಜಿಲ್ಲೆಯವರಲ್ಲ ಎಂಬುದು ದೃಢಪಟ್ಟಿದೆ. ನಕ್ಸಲ್ ಚಳವಳಿಯಲ್ಲಿ ಸಕ್ರಿಯರಾಗಿದ್ದು, ಭೂಗತರಾಗಿದ್ದ ಜಿಲ್ಲೆಯ ನಕ್ಸಲರಿಬ್ಬರು ಕೇರಳದಲ್ಲಿ ಎಎನ್‌ಎಫ್ ತಂಡ ಅ.28ರಂದು ನಡೆಸಿದ ಕಾರ್ಯಾಚರಣೆ ವೇಳೆ ಗುಂಡಿನ ದಾಳಿಗೆ ಹತರಾಗಿದ್ದಾರೆ ಎಂದು ಹೇಳಲಾಗುತ್ತಿತ್ತು.
ಆದರೆ, ಮೃತಪಟ್ಟವರು ಎ.ಎಸ್.ಸುರೇಶ್ ಅಲ್ಲ ಎಂಬುದು ತಿಳಿದು ಬಂದಿದೆ. ಈ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿ ಹರೀಶ್ ಪಾಂಡೆ ಅವರೇ ಮಂಗಳವಾರ ಬೆಳಗ್ಗೆ ಮಾಹಿತಿ ನೀಡಿದ್ದರು. ನಂತರ ಸಂಜೆ ವೇಳೆಗೆ ಸ್ಪಷ್ಟನೆ ನೀಡಿದ್ದ ಅವರು, ಮೃತಪಟ್ಟವರು ಚಿಕ್ಕಮಗಳೂರು ಜಿಲ್ಲೆಯವರಲ್ಲ ಎಂದು ತಿಳಿಸಿದ್ದರು.
ಆದರೂ, ಮೂಡಿಗೆರೆ ತಾಲೂಕು ಅಂಗಡಿ ಗ್ರಾಮದ ಎ.ಎಸ್.ಸುರೇಶ್ ಸಹೋದರ ಮಂಜುನಾಥ್, ಅವರ ಕುಟುಂಬದ ಸ್ನೇಹಿತರಾದ ವಕೀಲ ಹೂವಪ್ಪ ಮತ್ತು ಅಂಗಡಿ ಚಂದ್ರು ಕೇರಳಕ್ಕೆ ತೆರಳಿದ್ದರು. ಅಲ್ಲಿ ಮೃತದೇಹ ಪರಿಶೀಲಿಸಿದ ಬಳಿಕ ಮೃತಪಟ್ಟಿರುವ ವ್ಯಕ್ತಿ ಎ.ಎಸ್.ಸುರೇಶ್ ಅಲ್ಲ ಎಂಬುದು ಖಚಿತವಾಯಿತು ಎಂದು ಕೇರಳಕ್ಕೆ ತೆರಳಿದ್ದ ವಕೀಲ ಹೂವಪ್ಪ
“ಉದಯವಾಣಿ’ಗೆ ತಿಳಿಸಿದ್ದಾರೆ.
ಎ.ಎಸ್.ಸುರೇಶ್ 2004ರಿಂದಲೇ ನಕ್ಸಲ್ ಚಳವಳಿಗೆ ಸೇರ್ಪಡೆಗೊಂಡಿದ್ದರು. ಚಿಕ್ಕಮಗಳೂರಿನಲ್ಲಿ ಈ ಹಿಂದೆ ಪ್ರಗತಿಪರ ಚಳವಳಿಗಳಲ್ಲಿ ಗುರುತಿಸಿಕೊಂಡಿದ್ದು, ನಂತರ ಮಲೆನಾಡಿನಲ್ಲಿ ಸಕ್ರಿಯವಾಗಿದ್ದ ನಕ್ಸಲ್ ಚಳವಳಿ ಸೇರಿ ಭೂಗತರಾಗಿದ್ದರು. ಮಲೆನಾಡಿನಲ್ಲಿ ನಕ್ಸಲ್ ಚಳವಳಿ ಸಕ್ರಿಯವಾಗಿದ್ದ ಸಂದರ್ಭದಲ್ಲಿ ಶ್ರೀಮತಿ ಹಾಗೂ ಸುರೇಶ್ ವಿವಿಧ ತಂಡಗಳಲ್ಲಿ ಗುರುತಿಸಿಕೊಂಡಿದ್ದರು. ಸುರೇಶ್ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 21 ಪ್ರಕರಣಗಳಿವೆ.