Advertisement

ತಂಟೆಗೆ ಬಂದರೆ ಬಿಡೆವು; ಮನ್‌ ಕಿ ಬಾತ್‌ನಲ್ಲಿ ಚೀನಕ್ಕೆ ಪ್ರಧಾನಿ ನೇರ ಎಚ್ಚರಿಕೆ

02:35 AM Jun 29, 2020 | Sriram |

ಹೊಸದಿಲ್ಲಿ: ಲಡಾಖ್‌ ಮೇಲೆ ಕಣ್ಣು ಹಾಕಿದವರಿಗೆ ಭಾರತ ಪಾಠ ಕಲಿಸಿದೆ. ನಮ್ಮ ವೀರಯೋಧರು ಭಾರತ ಮಾತೆಗೆ ಅವಮಾನ ಎಸಗಲು ಬಂದವರನ್ನು ಸುಮ್ಮನೆ ಬಿಟ್ಟಿಲ್ಲ, ಬಿಡುವುದೂ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಚೀನಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.

Advertisement

ಗಡಿ ಉಲ್ಲಂಘಿಸುವವರಿಗೆ ಸೂಕ್ತ ಪ್ರತ್ಯುತ್ತರ ನೀಡುವುದು ಭಾರತಕ್ಕೆ ಚೆನ್ನಾಗಿ ಗೊತ್ತು ಎಂದು 66ನೇ “ಮನ್‌ ಕಿ ಬಾತ್‌’ ನಲ್ಲಿ ಮೋದಿಯವರು ತೀಕ್ಷ್ಣವಾಗಿ ಕುಟುಕಿದರು.

ಸೇನೆ ಸೇರುವ ಉತ್ಸಾಹ
ಹುತಾತ್ಮ ಯೋಧರಿಗೆ ದೇಶ ನಮನ ಸಮರ್ಪಿಸುತ್ತದೆ. ವೀರಪುತ್ರರನ್ನು ಕಳಕೊಂಡ ಪೋಷಕರು ತಮ್ಮ ಇತರ ಮಕ್ಕಳನ್ನೂ ಸೇನೆಗೆ ಕಳುಹಿಸಲು ತುದಿಗಾಲಲ್ಲಿದ್ದಾರೆ. ಇದು ಭಾರತೀಯರ ಉತ್ಸಾಹ ಮತ್ತು ತ್ಯಾಗ ಮನೋಭಾವವನ್ನು ಎತ್ತಿ ತೋರಿಸುತ್ತದೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಹುತಾತ್ಮರಿಗೆ ಗೌರವ
ದೇಶೀಯ ವಸ್ತುಗಳ ಖರೀದಿ ವಿಚಾರದಲ್ಲಿ ದೇಶ ಒಗ್ಗಟ್ಟಾ ಗಿದೆ. ಸ್ವಾವಲಂಬಿ ಭಾರತ ನಿರ್ಮಾಣ ಹುತಾತ್ಮ ಯೋಧರಿಗೆ ಸಲ್ಲಿಸಬಹುದಾದ ನೈಜ ಗೌರವ ಎನ್ನುವ ಮೂಲಕ ಚೀನದ ವಸ್ತುಗಳ ಬಹಿಷ್ಕಾರದ ಕೂಗಿಗೆ ಧ್ವನಿಗೂಡಿಸಿದರು. ಇಂದು ರಕ್ಷಣ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ಮುಂಚೂಣಿ ಯಲ್ಲಿದ್ದು, ಪ್ರಗತಿ ಸಾಧಿಸುತ್ತಿದೆ ಎಂದರು.

ಬಿಆರ್‌ಐ ಪ್ರಾಜೆಕ್ಟ್ಗೆ ಕೋವಿಡ್‌-19 ಆಘಾತ
ಚೀನದಲ್ಲಿಯೇ ಹುಟ್ಟಿಕೊಂಡ ಕೋವಿಡ್‌-19 ಸಾಂಕ್ರಾಮಿಕವು ಚೀನದ ಬಹುಕೋಟಿ ಡಾಲರ್‌ ಮೊತ್ತದ ಮಹತ್ವಾಕಾಂಕ್ಷಿ ಬೆಲ್ಟ್ ಆ್ಯಂಡ್‌ ರೋಡ್‌ (ಬಿಆರ್‌ಐ) ಯೋಜನೆಯ ಮೇಲೆ ಭಾಗಶಃ ದುಷ್ಪರಿಣಾಮ ಬೀರಿದೆ ಎಂಬುದಾಗಿ ಚೀನದ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ಬಿಆರ್‌ಐ ಯೋಜನೆಯಡಿ ಚೀನವು ಆಫ್ರಿಕ, ಏಶ್ಯಾ ಮತ್ತು ಯುರೋಪ್‌ನಲ್ಲಿ ಬಂಡವಾಳ ಹೂಡಿರುವ ಯೋಜನೆಗಳು ಗಂಭೀರ ದುಷ್ಪರಿಣಾಮ ಎದುರಿಸುತ್ತಿವೆ ಎಂದು ಚೀನದ ವಿದೇಶಾಂಗ ಖಾತೆಯ ಅಂತಾರಾಷ್ಟ್ರೀಯ ವ್ಯವಹಾರ ವಿಭಾಗದ ಮಹಾನಿರ್ದೇಶಕ ವಾಂಗ್‌ ಕ್ಸಿಯಾಲೊಂಗ್‌ ಹೇಳಿದ್ದಾರೆ.

Advertisement

ಎರಡೂ ಸಮರಗಳಲ್ಲಿ ನಮ್ಮದೇ ಗೆಲುವು
ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಚೀನ ಜತೆಗಿನ ಘರ್ಷಣೆ ಮತ್ತು ಕೋವಿಡ್‌-19 ವಿರುದ್ಧದ ಹೋರಾಟದಲ್ಲಿ ನಾವೇ ಗೆಲ್ಲಲಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಚೀನ ವಿಚಾರದಲ್ಲಿ ಕೇಂದ್ರ ಸರಕಾರದ ವಿರುದ್ಧ ಟೀಕೆ ನಡೆಸುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನೂ ತರಾಟೆಗೆ ತೆಗೆದುಕೊಂಡಿರುವ ಶಾ, ರಾಹುಲ್‌ ಗಾಂಧಿ ತಮ್ಮ ಹೇಳಿಕೆಗಳಿಂದ ಚೀನ ಮತ್ತು ಪಾಕಿಸ್ಥಾನಗಳನ್ನು ಖುಷಿಪಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂಥ ಸಂದಿಗ್ಧ ಸಮಯದಲ್ಲೂ ರಾಹುಲ್‌ ಗಾಂಧಿಯವರು ಚೀನ – ಪಾಕ್‌ ಇಷ್ಟಪಡುವುದನ್ನೇ ಹೇಳುತ್ತಿದ್ದಾರೆ. ರಾಹುಲ್‌ ಅವರ ಹ್ಯಾಶ್‌ಟ್ಯಾಗ್‌ಗಳನ್ನು ಚೀನ, ಪಾಕ್‌ ಪ್ರೋತ್ಸಾಹಿಸುತ್ತಿರುವುದು ಅತ್ಯಂತ ಕಳವಳಕಾರಿ. ಪೂರ್ವ ಲಡಾಖ್‌ ಗಡಿ ಬಿಕ್ಕಟ್ಟಿನ ಚರ್ಚೆ ನಡೆಸಲು ನಾವು ಸಿದ್ಧರಿದ್ದೇವೆ. ಸಂಸತ್ತಿನ
ಕಲಾಪಕ್ಕೆ ಬನ್ನಿ. ಈ ಬಗ್ಗೆ ಚರ್ಚಿಸೋಣ ಎಂದು ಆಹ್ವಾನಿಸಿದ್ದಾರೆ.

1962ರಿಂದ ಇಲ್ಲಿಯವರೆಗೆ ಚೀನ ಗಡಿಯಲ್ಲಿ ಏನೇನು ನಡೆದಿದೆ ಎಲ್ಲವನ್ನೂ ಚರ್ಚಿಸೋಣ. ಈ ಬಗ್ಗೆ ನೀವು ದಾಖಲೆ ಸಹಿತರಾಗಿಯೇ ಬನ್ನಿ. ಆದರೆ ನಮ್ಮ ವೀರಯೋಧರು ಗಡಿಯಲ್ಲಿ ಹೋರಾಡುತ್ತಿರುವಾಗ ಸರಕಾರ ಈಗಾಗಲೇ ದೃಢ ನಿಲುವು ತೆಗೆದುಕೊಂಡಿದೆ. ಇಂಥ ಸಮಯದಲ್ಲಿ ಎದುರಾಳಿಗಳು ಮೆಚ್ಚುವಂಥ ಹೇಳಿಕೆ ನೀಡುವುದನ್ನು ನಿಲ್ಲಿಸಿ ಎಂದಿದ್ದಾರೆ.

ಕಲ್ಲಿನ ತಡೆಗೋಡೆ ನಿರ್ಮಿಸಿದ ಯೋಧರು
ಚೀನ ಸೈನಿಕರ ಅತಿಕ್ರಮಣ ತಡೆಗಟ್ಟಲು ಭಾರತೀಯ ಯೋಧರು ಗಾಲ್ವಾನ್‌ ತೀರದಲ್ಲಿ ಗಟ್ಟಿಮುಟ್ಟಾದ ಕಲ್ಲಿನ ತಡೆಗೋಡೆ ನಿರ್ಮಿಸಿದ್ದಾರೆ. ಚೀನದ ಹೊಸ ಪೋಸ್ಟ್‌ ಮುಂಭಾಗವೇ ಈ ಗೋಡೆ ಎದ್ದುನಿಂತಿದೆ. ಅಲ್ಲಲ್ಲಿ ತಂತಿ ಬಲೆ ಬೇಲಿಗಳನ್ನೂ ನಿರ್ಮಿಸಲಾಗಿದೆ. ಕೊಲರಾಡೊ ಮೂಲದ ಉಪಗ್ರಹ ಚಿತ್ರಣ ಸಂಸ್ಥೆ ಮ್ಯಾಕ್ಸರ್‌ ಈ ತಡೆಗೋಡೆಯ ಚಿತ್ರಗಳನ್ನು ಸೆರೆಹಿಡಿದಿದೆ. ಎಲ್‌ಎಸಿ ಉದ್ದಕ್ಕೂ ಎರಡೂ ದೇಶಗಳ ರಸ್ತೆ ನಿರ್ಮಾಣವೂ ಚಿತ್ರಗಳಲ್ಲಿ ಸ್ಪಷ್ಟವಾಗಿದೆ.

ಕಾಮೇ ಗೌಡರ ಸಾಧನೆಗೆ ಮೆಚ್ಚುಗೆ
ಮಳವಳ್ಳಿ: ತನ್ನೂರಿ ನ ಸುತ್ತ ಮುತ್ತಲ 16 ಕೆರೆಗಳನ್ನು ಸ್ವಂತ ಖರ್ಚಿನಲ್ಲಿ ಪುನರುಜ್ಜೀವನಗೊಳಿಸಿ “ಜಲರ ಕ್ಷಕ’ನಾಗಿರುವ ಮಂಡ್ಯ ಜಿಲ್ಲೆಯ ದಾಸನ ದೊಡ್ಡಿ ಗ್ರಾಮದ ಕಲ್ಮನೆ ಕಾಮೇಗೌಡರನ್ನು ಪ್ರಧಾನಿ ಮೋದಿ “ಮನ್‌ ಕೀ ಬಾತ್‌’ನಲ್ಲಿ ಕೊಂಡಾಡಿದ್ದಾರೆ.

85 ವರ್ಷದ ಅವರ ಪರಿಶ್ರಮ ದೊಡ್ಡದು ಎಂದಿದ್ದಾರೆ. ಈ ಬಗ್ಗೆ ಕಾಮೇಗೌಡರು ಪ್ರತಿಕ್ರಿಯಿಸಿದ್ದು, ನನ್ನಂಥ ಸಾಮಾನ್ಯ ಪ್ರಜೆಯನ್ನೂ ಗುರುತಿಸುವ ಮೋದಿ ವ್ಯಕ್ತಿತ್ವ ಮೆಚ್ಚುವಂಥದ್ದು ಎಂದಿದ್ದಾರೆ.

ಚೀನ ಸೈನಿಕರಿಗೆ ಸಮರ ಕಲೆ ತರಬೇತಿ
ಗಾಲ್ವಾನ್‌ ಕಣಿವೆಯ ಸಂಘರ್ಷಕ್ಕೂ ಮುನ್ನ ಪೂರ್ವ ಲಡಾಖ್‌ನಲ್ಲಿ ನಿಯೋಜನೆಗೊಂಡಿರುವ ತನ್ನ ಸೈನಿಕರಿಗೆ ಚೀನವು ಮಾರ್ಷಲ್‌ ಆರ್ಟ್ಸ್ ಪಟುಗಳಿಂದ ಸಮರ ಕಲೆ ಕಲಿಸಿತ್ತು. ಈ ಸಮರ ಕಲೆಯ ತರಬೇತಿ ಟಿಬೆಟ್‌ ರಾಜಧಾನಿ ಲಾಸಾದಲ್ಲಿ ನಡೆದಿತ್ತು. ಅಲ್ಲದೆ ಚೀನದ ಪರ್ವತಾರೋಹಿಗಳು ಬೆಟ್ಟ ಏರುವ ಕಲೆ ಹೇಳಿಕೊಟ್ಟಿದ್ದರು ಎಂದು ಚೀನದ ಮಾಧ್ಯಮಗಳು ವರದಿ ಮಾಡಿವೆ.

Advertisement

Udayavani is now on Telegram. Click here to join our channel and stay updated with the latest news.

Next