Advertisement

ಮಾತಿನಲ್ಲೇ ಮನೆ ಕಟ್ಟಿದವರು, ಮಂಡ್ಯದಲ್ಲಿ ಮನೆ ಮಾಡಲಿಲ್ಲ

11:20 PM May 04, 2019 | Team Udayavani |

ಮಂಡ್ಯ: ಚುನಾವಣಾ ಪೂರ್ವದಲ್ಲಿ ಮಂಡ್ಯದಲ್ಲೇ ಮನೆ ಕಟ್ಟಿಸುತ್ತೇವೆ, ಜಮೀನು ಖರೀದಿಸಿ ತೋಟದ ಮನೆಯಲ್ಲೇ ವಾಸ ಮಾಡುವೆ ಎಂದೆಲ್ಲಾ ಜನರಿಗೆ ಭರವಸೆಗಳನ್ನು ನೀಡಿದ್ದ ರಾಜಕಾರಣಿಗಳೆಲ್ಲರೂ ಇದೀಗ ಜಿಲ್ಲೆಯಿಂದಲೇ ನಾಪತ್ತೆಯಾಗಿದ್ದಾರೆ. ಚುನಾವಣಾ ಸಮಯದಲ್ಲಿ ಮಾತಿನಲ್ಲೇ ಮನೆ ಕಟ್ಟಿದವರು ಈಗ ಎಲ್ಲಿ ಹೋದರು ಎನ್ನುವುದು ಜನಸಾಮಾನ್ಯರ ವಲಯದಲ್ಲಿ ಕೇಳಿ ಬರುತ್ತಿರುವ ಪ್ರಶ್ನೆಯಾಗಿದೆ.

Advertisement

ಚುನಾವಣೆಗೂ ಮುನ್ನ “ನಾನು ಮಂಡ್ಯದ ಸೊಸೆ, ಈ ಮಣ್ಣಿನ ಮಗಳು’ ಎಂಬೆಲ್ಲಾ ಡೈಲಾಗ್‌ ಹೊಡೆದಿದ್ದ ಪಕ್ಷೇತರ ಅಭ್ಯರ್ಥಿ ಸುಮಲತಾ, ಮಂಡ್ಯದಲ್ಲಿ ಬಾಡಿಗೆ ಪಡೆದಿರುವ ಮನೆಯಲ್ಲಿ ಒಂದು ದಿನವೂ ಬಂದು ಉಳಿದುಕೊಳ್ಳಲಿಲ್ಲ. ಚುನಾವಣಾ ಪ್ರಚಾರ ಸಮಯದಲ್ಲಿ ನಿತ್ಯವೂ ಕಾಣಿಸಿಕೊಳ್ಳುತ್ತಿದ್ದವರು, ಈಗ ಜಿಲ್ಲೆಯ ಯಾವ ಮೂಲೆಯಲ್ಲೂ ಕಾಣ ಸಿಗುತ್ತಿಲ್ಲ.

ಇನ್ನು, ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್‌ಕುಮಾರಸ್ವಾಮಿ, “ನಿಮ್ಮ ಗುಲಾಮನಾಗಿ ಕೆಲಸ ಮಾಡುತ್ತೇನೆ. ನಿಮ್ಮೂರಿನಲ್ಲೇ ಕಚೇರಿ ತೆರೆಯುತ್ತೇನೆ. ಮಂಡ್ಯ ಸಮೀಪದಲ್ಲೇ ಜಮೀನು ಖರೀದಿಸಿ ತೋಟದ ಮನೆ ಮಾಡುತ್ತೇನೆ. ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಕಷ್ಟ-ಸುಖಗಳಿಗೆಲ್ಲಾ ಸ್ಪಂದಿಸುತ್ತೇನೆ’ ಎಂದು ಚುನಾವಣೆ ವೇಳೆ ಬಡಾಯಿ ಕೊಚ್ಚಿಕೊಂಡಿದ್ದರು.

ಚುನಾವಣೆ ಮುಗಿದ ಮೇಲೆ ಅವರೂ ನಾಪತ್ತೆಯಾಗಿದ್ದಾರೆ. ಯಾರ ಕೈಗೂ ಸಿಗುತ್ತಿಲ್ಲ. ಜಿಲ್ಲೆಯ ಜನರು ಈಗ ನಿಖಿಲ್‌ ಎಲ್ಲಿದ್ದೀಯಪ್ಪ…! ಎಂದು ಕೇಳುವಂತಹ ಪರಿಸ್ಥಿತಿ ಸೃಷ್ಠಿಯಾಗಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ. ಬಿರುಗಾಳಿ ಮಳೆಗೆ ರೈತರ ಬೆಳೆ ನಷ್ಟವಾಗಿದೆ. ಬರದಿಂದ ರೈತರ ಬದುಕು ದುಸ್ತರವಾಗಿದೆ. ಆದರೆ, ಇವರ ಗೋಳನ್ನು ಈಗ ಕೇಳುವವರು ಯಾರೂ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next