Advertisement

ಹಿಂಗಾರು ವಿಳಂಬ, ಬತ್ತುತ್ತಿರುವ ಕೆರೆಗಳು, ಹೆಚ್ಚುತ್ತಿರುವ ಬಿಸಿಲ ಧಗೆ

09:36 PM May 21, 2019 | Team Udayavani |

ಸೋಮವಾರಪೇಟೆ: ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ತಾಲೂಕಿನಲ್ಲಿ ಬರದ ಕಾರ್ಮೋಡ ಕವಿದಿದ್ದು, ಕೃಷಿ ಫ‌ಸಲಿನ ಮೇಲೆ ದುಷ್ಪರಿಣಾಮ ಬೀರಿದೆ. ಬಹತೇಕ ನೀರಾವರಿ ಕೆರೆಗಳು, ಹೊಳೆ, ತೊರೆಗಳು ಬತ್ತುತಿದ್ದು ಸಮಸ್ಯೆ ಎದುರಾಗಿದೆ. ಬೋರ್‌ವೆಲ್‌ಗ‌ಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಜನರಲ್ಲಿ ಆತಂಕ ಎದುರಾಗಿದೆ.

Advertisement

ಸೋಮವಾರಪೇಟೆ, ಶನಿವಾರಸಂತೆ, ಶಾಂತಳ್ಳಿ, ಸುಂಟಿಕೊಪ್ಪ, ಕೊಡ್ಲಿಪೇಟೆ, ಕುಶಾಲನಗರ ಸೇರಿದಂತೆ 6 ಹೋಬಳಿಗಳಲ್ಲಿ 40 ಗ್ರಾ.ಪಂ.ಗಳು, 308 ಜನವಸತಿ ಗ್ರಾಮಗಳು, ಸೋಮವಾರಪೇಟೆ ತಾಲೂಕು ಹೊಂದಿದೆ. ತಾಲೂಕಿನಲ್ಲಿ 200 ಸುರಕ್ಷಿತ ಕೆರೆಗಳಿವೆ. ಅಧಿಕೃತವಾಗಿ 2,161 ಕೊಳವೆ ಬಾವಿಗಳಿವೆ.

ಗ್ರಾಮೀಣ ಕೆರೆಗಳು ಬತ್ತುತ್ತಿರುವ ಪರಿಣಾಮ ದನಕರುಗಳಿಗೆ ಕುಡಿ ಯುವ ನೀರಿಗೆ ಸಮಸ್ಯೆಯಾಗಿದೆ. ಕೆಲವು ಗ್ರಾಮಗಳಲ್ಲಿ ಎರಡೆರಡು ಕೆರೆಗಳಿದ್ದು, ಅವುಗಳಲ್ಲಿ ಮೀನು ಸಾಕಾಣಿಕೆ ಮಾಡಿದವರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.

ನೀರು ಬತ್ತುತ್ತಿರುವ ಪರಿಣಾಮ, ಮೀನುಗಳನ್ನು ಹಿಡಿಯಲೇ ಬೇಕಾಗಿದ್ದು, ಕೆಲವರು ಚಿಕ್ಕ ಮೀನುಗಳನ್ನು ಹಿಡಿದು ಅರ್ಧಂಬರ್ಧ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಕೊಡ್ಲಿಪೇಟೆ, ಹಂಡ್ಲಿ. ಕಿತ್ತೂರು, ಬೆಂಬಳೂರು, ಬಿಳಹ, ಗೌಡಳ್ಳಿ, ದೊಡ್ಡಮಳೆ¤, ನೇರುಗಳಲೆ, ಶಾಂತಳ್ಳಿ ಹೋಬಳಿಯ ಕುಂದಳ್ಳಿ, ಕುಮಾರಳ್ಳಿ, ತಾಕೇರಿ, ಕಿರಗಂದೂರು, ಕೂತಿ, ತೋಳೂರುಶೆಟ್ಟಳ್ಳಿ, ಬಾಚಳ್ಳಿ, ಯಡೂರು, ಕಲ್ಕಂದೂರು, ಹೊಸಬೀಡು, ಸುಂಟಿಕೊಪ್ಪ, ಮಾದಾಪುರ, ಐಗೂರು, ಬೇಳೂರು, ಕಾರೇಕೊಪ್ಪ, ನೇಗಳ್ಳೆ ಮುಂತಾದ ಗ್ರಾಮಗಳಲ್ಲಿ ಕಾಳುಮೆಣಸು ಉತ್ತಮ ಫ‌ಸಲಿನ ನಿರೀಕ್ಷೆ ಹುಸಿಯಾಗುತ್ತಿದೆ.

Advertisement

ಮುಂದಿನ ಎರಡು ವಾರಗಳಲ್ಲಿ ಬೀಳುವ ಮಳೆಯ ಪ್ರಮಾಣದ ಮೇಲೆ ಫ‌ಸಲಿನ ಇಳುವರಿ ನಿರ್ಧಾರವಾಗುತ್ತದೆ. ಕೆರೆ, ಕೊಳವೆಬಾವಿಗಳಿಂದ ನೀರು ಹಾರಿಸಲು ಸಾಧ್ಯವಾಗದಿದ್ದರೆ ಸಮಸ್ಯೆ ಎದುರಾಗಬಹುದು ಎಂದು ಕೃಷಿಕರು ಹೇಳಿದರು.

ತಾಲ್ಲೂಕಿನ ನೀರಾವರಿ ಕೆರೆಗಳೆಂದು ಕರೆಸಿಕೊಂಡಿರುವ ಆಲೂರು ಕೆರೆ, ಅಂಕನಳ್ಳಿಯ ದೇವಕೆರೆ, ಶನಿವಾರಸಂತೆಯ ತೋಯಳ್ಳಿ ಕೆರೆ, ಮಾದಾಪುರ ಹಾಡಗೇರಿ ಕೆರೆ, ಗುಡ್ಡೆಹೊಸೂರಿನ ಕಾಟಿಕೆರೆ, ಹರದೂರು ಕೆರೆ, ಕಿತ್ತೂರು ಕೆರೆ, ಕೂಗೂರು ಕೆರೆ, ಹಿರಿಕರ ಗ್ರಾಮದ ದೊಡ್ಡಕೆರೆ, ಗುಡಿಕೆರೆ, ಚನ್ನಾಪುರ ಕೆರೆ, ಕೂಗೇಕೋಡಿ ಕೆರೆ, ನಿಲುವಾಗಿಲು ಎಣ್ಣೆ ಕೆರೆ, ಬೆಸ್ಸೂರು ಕೆರೆ, ಮಾಲಂಬಿ ಕೆರೆ, ಅವರದಾಳು ಕೆರೆ, ಅಳಿಲುಗುಪ್ಪೆ ಕೆರೆಗಳಲ್ಲಿ ನೀರು ತಳಮಟ್ಟದಲ್ಲಿದೆ.

ಮುಂಗಾರು ಬೇಗ ಪ್ರಾರಂಭವಾಗದಿದ್ದರೆ ಎಲ್ಲಾ ಕೆರೆಗಳು ಸಂಪೂರ್ಣ ಬತ್ತಲಿವೆ ಎಂದು ಕೃಷಿ ಹೇಳಿದ್ದಾರೆ.

ಪಾತಾಳಕ್ಕೆ ಇಳಿದ ಬೆಲೆ
ಹಸಿಮೆಣಸು ಹಾಗೂ ತರಕಾರಿಗಳನ್ನು ಬೆಳೆದಿರುವ ರೈತರು ನೀರಿನ ಅಭಾ ವದಿಂದ ಆತಂಕಗೊಂಡಿದ್ದಾರೆ. ಕೆಲ ಗ್ರಾಮಗಳಲ್ಲಿ ಕಾಫಿ ಬೆಳೆಗಾರರು ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ತಾಲೂಕು ಅರೇಬಿಕಾ ಕಾಫಿ ಬೆಳೆಯಲು ಸೂಕ್ತ ಪ್ರದೇಶ ವಾಗಿರುವುದರಿಂದ 23,950ಹೆ. ನಲ್ಲಿ ಅರೇಬಿಕಾ, 5,890ಹೆ.ನಲ್ಲಿ ರೋಬಾಸ್ಟಾ ಬೆಳೆಯಲಾಗುತ್ತಿದೆ. ತಾಲೂಕಿನಲ್ಲಿ ಒಟ್ಟು 4500 ಹೆಕ್ಟೇರ್‌ ಜಾಗದಲ್ಲಿ ಕಾಳುಮೆಣಸನ್ನು ಬೆಳೆಯಾಗುತ್ತಿದೆ. ಕಳೆದ ವರ್ಷದ ಮಹಾ ಮಳೆಯಿಂದ ಫ‌ಸಲು ನಷ್ಟವಾಗಿತ್ತು. ಕಾಯಿಲೆಯಿಂದ ಬಳ್ಳಿಗಳನ್ನು ಕಳೆದುಕೊಂಡರು. ಬೆಲೆಯೂ ಕೂಡ ಪಾತಾಳಕ್ಕೆ ಇಳಿದಿತ್ತು.

 25ಲಕ್ಷ ರೂ.ಬಿಡುಗಡೆ
ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸಮಸ್ಯೆ ಬಗೆಹರಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈಗಾಗಲೆ ಸರಕಾರ‌ದಿಂದ 25ಲಕ್ಷ ರೂ.ಬಿಡುಗಡೆಯಾಗಿದೆ. ಬೋರ್‌ವೆಲ್‌ಗ‌ಳನ್ನು ಆಳ ತೋಡಿಸುವುದು, ಹೂಳು ತೆಗೆಯುವ ಕಾಮಗಾರಿ ನಡೆಯುತ್ತಿವೆ.
 - ರಮೇಶ್‌ ಎ.ಇ.ಇ. ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next