Advertisement
“ಈ ಚಿತ್ರ ಮಾಡೋಕೆ ಸಾಕಷ್ಟು ಕಷ್ಟಪಟ್ಟಿದ್ದೇವೆ. ಅನೇಕ ಅಡಚಣೆಗಳ ನಡುವೆಯೂ ಒಂದೊಳ್ಳೆಯ ಸಿನಿಮಾ ಮಾಡಿದ ತೃಪ್ತಿ ನಮ್ಮದು. ಚಿತ್ರ ತಡವಾಗಿದೆ. ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕು ವರ್ಷಗಳ ಕಾಲ ತಡವಾಗಿ ಈ ಚಿತ್ರ ತೆರೆಗೆ ಬರುತ್ತಿದೆ. ತಡವಾಗೋಕೆ ಹಲವು ಕಾರಣಗಳು. ಮೊದಲೇ ಹೇಳಿದಂತೆ ಇದೊಂದು ಭಾರತೀಯ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಹಾಗೂ ನಿಗೂಢ ಕಣ್ಮರೆ ಸುತ್ತ ನಡೆಯುವ ಕಥೆ. ಬಹುತೇಕ ಅಮೆರಿಕದಲ್ಲಿ ಚಿತ್ರೀಕರಿಸಿದ್ದೇವೆ. ವಿಜಯ್‌ಚೆಂಡೂರ್ ಮತ್ತು ಇಂದ್ರಸೇನ ನನ್ನೊಂದಿಗೆ ಕಥೆ, ಚಿತ್ರಕಥೆಗೆ ಸಹಾಯ ಮಾಡಿದ್ದಾರೆ. ಅಮೆರಿಕದಲ್ಲಿ ಚಿತ್ರೀಕರಿಸುವ ವೇಳೆ ಪ್ರಿಯಾಭಾರತಿ, ಸತೀಶ್ ಅವರು ಸಾಕಷ್ಟು ಸಹಾಯ ಮಾಡಿದ್ದರಿಂದಲೇ ಚಿತ್ರ ಚೆನ್ನಾಗಿ ಮೂಡಿಬರಲು ಸಾಧ್ಯವಾಗಿದೆ. ಮೈನಸ್ 10 ಡಿಗ್ರಿಯಲ್ಲಿ ಚಿತ್ರೀಕರಿಸಿದ್ದೇವೆ. 28 ದಿನಗಳ ಕಾಲ ಅಲ್ಲಿನ ವೈಟ್‌ಹೌಸ್, ಕ್ಯಾಪಿಟಲ್ ಬಿಲ್ಡಿಂಗ್ ಸುತ್ತಮುತ್ತ ಚಿತ್ರೀಕರಿಸಿದ್ದೇವೆ. ಅಷ್ಟೊಂದು ಚಳಿ ಇದ್ದರೂ, ಐದೈದು ಜಕೀìನ್ ಧರಿಸಿ ಕೆಲಸ ಮಾಡಿದ್ದೇವೆ. ಚಿತ್ರ ನೋಡಿ ಹೊರಬಂದವರಿಗೆ ಒಂದೊಳ್ಳೆಯ ಸಂದೇಶವಂತೂ ಇದೆ. ನಿರ್ಮಾಪಕರ ಪ್ರೋತ್ಸಾಹದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ’ ಅಂದರು ಜನಾರ್ದನ್.
ನಿರ್ಮಾಪಕ ಶೈಲೇಂದ್ರ ಕೆ.ಬೆಲ್ದಾಳ್ ಅವರಿಗೆ ಒಳ್ಳೆಯ ಕಥೆ ಅನಿಸಿದ್ದರಿಂದ ಅವರು ನಿರ್ಮಾಣಕ್ಕೆ ಮುಂದಾದರಂತೆ. ಈಗಿನ ಯೂತ್ಸ್ ಹೇಗೆ ವಿದೇಶದಲ್ಲಿ ಶೋಕಿಗೆ ಬಿದ್ದು ಲೈಫ್ ಹಾಳು ಮಾಡಿಕೊಳ್ಳುತ್ತಾರೆ ಅನ್ನೋದನ್ನು ಹೇಳಲಾಗಿದೆ. ಸಂಕ್ರಾಂತಿಗೆ ಚಿತ್ರ ಬಿಡುಗಡೆಯಾಗಲಿದೆ. ನಿಮ್ಮೆಲ್ಲರ ಸಹಕಾರ ಇರಲಿ ಅಂದರು ಅವರು. ಮತ್ತೂಬ್ಬ ನಿರ್ಮಾಪಕ ದೇವರಾಜ್ ಅವರು, ಆರ್.ಚಂದ್ರು ಜತೆಗೆ ನಿರ್ದೇಶಕರಾಗಬೇಕು ಅಂತ ಇಲ್ಲಿಗೆ ಬಂದರಂತೆ. ಆದರೆ, ಇವರು ಆಗಿದ್ದು ಮಾತ್ರ ನಿರ್ಮಾಪಕ. “ಚಿತ್ರ ತಡವಾಯ್ತು. ಅದಕ್ಕೆ ಕಾರಣಗಳು ಸಾಕಷ್ಟಿವೆ. ಮೊದಲ ಅನುಭವ ಆಗಿದ್ದರಿಂದ ಇಷ್ಟೆಲ್ಲಾ ತಡವಾಗಿದೆ. ಬಜೆಟ್ ಅಂದುಕೊಂಡಿದ್ದಕ್ಕಿಂತ ಜಾಸ್ತಿಯಾಗಿದೆ ಎಂದರು ಅವರು. ತಬಲಾ ನಾಣಿ, ಲಕ್ಕಿ ಶಂಕರ್ ಇಲ್ಲಿ ಹೀರೋ ಜತೆಗೆ ಪತ್ರಕರ್ತರಾಗಿ ಕಾಣಿಸಿಕೊಂಡಿದ್ದಾರಂತೆ. ಇಲ್ಲಿ ಸಂದೇಶ ಇರುವುದರಿಂದ ಪ್ರತಿಯೊಬ್ಬರಿಗೂ ಸಲ್ಲುವ ಚಿತ್ರವಿದು ಅಂದರು ಅವರು. ಕ್ಯಾಮೆರಾಮೆನ್ ನಿರಂಜನ್‌ಬಾಬು, ಸಂಗೀತ ನಿರ್ದೇಶಕ ಇಂದ್ರಸೇನ ಚಿತ್ರದ ಬಗ್ಗೆ ಹೇಳಿಕೊಳ್ಳುವ ಹೊತ್ತಿಗೆ ಮಾತುಕತೆಗೆ ಬ್ರೇಕ್ ಬಿತ್ತು. ಇದಕ್ಕೂ ಮುನ್ನ ಮಾಜಿ ಪೊಲೀಸ್ ಅಧಿಕಾರಿ ನಾಗರಾಜ್ ಟ್ರೇಲರ್ ಬಿಡುಗಡೆ ಮಾಡಿದರೆ, ಗಾಯಕ ಆಲೂರು ನಾಗಪ್ಪ ವೀಡಿಯೋ ಸಾಂಗ್ ಬಿಡುಗಡೆ ಮಾಡಿ ಶುಭಕೋರಿದರು.