ಅಬ್ಟಾ! ಅದೆಷ್ಟು ಬೇಗ ಮೂರು ವರುಷ ಕಳೆದುಹೋಯ್ತು, ಗೊತ್ತೇ ಆಗಲಿಲ್ಲ. ಆಗ ಮಳೆಗಾಲ. ಫರ್ಸ್ಡ್ ಟೈಮ್ ನಾನು ಹಾಸ್ಟೆಲಿಗೆ ಸೇರುವಾಗ “ಇಲ್ಲಿ ಇರಬೇಕಲ್ಲ’ ಅಂತ ಕಣ್ಣಂಚಿನಲ್ಲಿ ನೀರು ತುಂಬಿಕೊಂಡ್ರೆ, ಇವತ್ತು ಈ ಮನೆಯನ್ನು ಬಿಟ್ಟುಹೋಗಬೇಕಲ್ಲ ಅಂಥ ದುಃಖವಾಗುತ್ತಿದೆ. ಮನೆಯೇ ಪ್ರಪಂಚ ಅಂತ ಬೆಳೆದ ನನಗೆ ಹಾಸ್ಟೆಲ್ ಅನ್ನೋದು ಒಂದು ಹೊಸದಾದ ಜಗತ್ತು. ಯಾರ ಪರಿಚಯವು ಇಲ್ಲದೆ, ಎಲ್ಲರೂ ಅಪರಿಚಿತರಾಗಿ, ಮನೆಯ ನೆನಪು ತುಂಬಾನೆ ಕಾಡುತ್ತಿದ್ದ ದಿನಗಳು, ಪದೇ ಪದೇ ನೆನಪಾಗುತ್ತಿದ್ದ ಅಮ್ಮನ ಕೈರುಚಿ, ನಗುವಿಗಷ್ಟೇ ಸೀಮಿತವಾಗಿದ್ದ ಸ್ನೇಹಿತರ ಮೌನದ ಮಾತುಗಳು, ವಾರ್ಡನ್‌ಗೆ ಭಯಪಟ್ಟು ಪುಸ್ತಕ ಓದುವ ನಾಟಕಗಳು, ಬೆಳಗ್ಗೆ ಬೇಗ ಏಳುವ ಹವ್ಯಾಸಗಳು… ಇವೆಲ್ಲ ಹಾಸ್ಟೆಲಿನ ಮೊದಮೊದಲ ದಿನಗಳು. ಇವೆಲ್ಲ ಹಾಸ್ಟೆಲ್ ಅನ್ನೋ ಹೊಸ ಜಗತ್ತಿಗೆ ನಾವು ಹೊಂದಿಕೊಳ್ಳೋ ತನಕ. ಆದರೆ, ಆ ಬದುಕಿಗೆ ನಾವು ಹೊಂದಿಕೊಂಡ ಮೇಲೆ ಅಲ್ಲಿ ಕಳೆದ ಪ್ರತಿಯೊಂದು ಕ್ಷಣಗಳು ಬದುಕಿನ ಸವಿ ಸವಿ ನೆನಪುಗಳು. ಮುಗಿಯದ ಸ್ನೇಹಿತರ ಮಾತುಗಳು, ಹಾಸ್ಯ ಚಟಾಕಿಗಳು, ವಾರ್ಡನ್ ಎದುರಿಗೆ ಇದ್ದರೂ ತೆರೆಯದ ಪುಸ್ತಕಗಳು, ಗಂಟೆ ಎಂಟಾದರೂ ಹೊಡೆಯದ ಅಲಾರಮ್‌ಗಳು, ಮತ್ತೇ ಪದೆ ಪದೆ ನೆನಪಾಗುವ ಅಮ್ಮನ ಕೈ ರುಚಿ. ಇದು ಹಾಸ್ಟೆಲಿನ ನಂತರದ ದಿನಗಳು.
ನನ್ನ ಜೀವನದ ಪುಸ್ತಕದಲ್ಲಿ ಹಾಸ್ಟೆಲ್ ಜೀವನ ಹೊಸದೊಂದು ಅಧ್ಯಾಯ. ನೋವು ನಲಿವಿನ ಮಿಶ್ರಣ. ಫ್ರೆಂಡ್ಸ್ ಗ್ಯಾಂಗ್, ಕದ್ದು ಮಾಡಿದ ಸರ್‌ಪ್ರೈಸ್ ಬರ್ತ್‌ಡೇ, ಇಸ್ತ್ರಿ ಪೆಟ್ಟಿಗೆಯಲ್ಲಿ ಮಾಡಿದ ಮ್ಯಾಗಿ, ಸ್ಟಡಿ ಟೈಮ್‌ನಲ್ಲಿ ಆಡಿದ ಸೆಟ್, ಲೂಡೋ ಆಟ, ಒಂದು ತೊಟ್ಟೆಯಲ್ಲಿ ನಾಲ್ಕು ಜನ ಊಟ ಮಾಡಿದ ನೆನಪು, ಆರಾಮ ಇಲ್ಲದೆ ಇರೋವಾಗ ಆರೈಕೆ ಮಾಡಿರೋ ಗೆಳೆಯರು, ಗಂಟೆಗಳಾದರೂ ಮುಗಿಯದ ಹರಟೆ, ಎಂಡ್‌ಲೆಸ್ ಸೆಲ್ಫಿ, ಇದರ ಜೊತೆಗೆ ಚಿಕ್ಕ ಚಿಕ್ಕ ವಿಷಯಗಳಿಗೆ ಜಗಳ ಮುನಿಸು, ಭಿನ್ನಾಭಿಪ್ರಾಯ. ಇವೆಲ್ಲ ಹಾಸ್ಟೆಲ್ ಜೀವನ ಕಟ್ಟಿಕೊಟ್ಟ ನೆನಪಿನ ಬುತ್ತಿ. ನನಗಂತೂ ಹಾಸ್ಟೆಲ್ ಜೀವನ ಅದೆಷ್ಟೋ ಪಾಠಗಳನ್ನು ಕಲಿಸಿದೆ. ಬದುಕನ್ನು ಅರ್ಥ ಮಾಡಿಸಿಕೊಟ್ಟಿದೆ. ನನ್ನಲ್ಲಿ ಅದೆಷ್ಟೋ ಬದಲಾವಣೆಗಳನ್ನು ತಂದಿದೆ. ನನ್ನ ಬದುಕಿನ ಪಯಣದಲ್ಲಿ ಒಂದು ಅದ್ಭುತ ನಿಲ್ದಾಣ ನನ್ನ ಹಾಸ್ಟೆಲ್ ಜೀವನ.
ವೈ. ಭೂಮಿಕಾ
ಆಳ್ವಾಸ್ ಕಾಲೇಜು, ಮೂಡಬಿದ್ರೆ