Advertisement
ಕರೆಂಟು ಹೋದ ಸಮಯ ನಮ್ಮ ಪಾಲಿನ ಅದ್ಭುತ ಕ್ಷಣಗಳು, ಭೂತ ಬರುತ್ತದೆ ಎಂಬ ಅಣ್ಣನ ಮಾತನ್ನ ನಂಬಿ ಅಕ್ಕಿ ಚೀಲದ ಹಿಂದೆ ಬಚ್ಚಿಟ್ಟುಕೊಳ್ಳುತ್ತಿದ್ದುದು. ಕಿಟಕಿ ಎಂದರೆ ಅದೆಂಥದೊ ಭಯ. ಕಿಟಕಿಯ ಸರಳುಗಳೆಡುಕಿನಿಂದ ಭೂತ ನಮ್ಮನ್ನ ಬಾಚಿ ಎತ್ತಿಕೊಂಡು ಹೋಗುತ್ತದೆ ಎಂಬ ಭ್ರಮೆ. ಹಾಗಾಗಿ ಬೆಳಕಿಲ್ಲದ ಕೋಣೆಗೆ ಹೋಗುವುದೆಂದರೆ ಜೀವ ಬಾಯಿಗೆ ಬರುವಷ್ಟು ಭಯ. ಇನ್ನು ಮನೆ ತುಂಬ ಹಾರಾಡುತ್ತಿದ್ದ ಮಿಂಚುಹುಳಗಳನ್ನ ಹಿಡಿದು ಗಾಜಿನ ಬಾಟಲಿಗೆ ಹಾಕಿ ಅಪ್ಪನ ಹಳೆಯ ಬ್ಯಾಟರಿಯಂತೆ ಅದೂ ಒಂದಿಷ್ಟು ಬೆಳಕು ಕೊಡುವುದನ್ನ ಕಂಡು ನಾವೇನೋ ಸಾಧನೆ ಮಾಡಿದ್ದೇವೆ ಎಂದು ಹೆಮ್ಮೆ ಪಡುತ್ತಿದ್ದೆವು. ಬೆಳದಿಂಗಳ ರಾತ್ರಿಗಳನ್ನ ನಾವು ಕಳೆಯುತ್ತಿದ್ದುದು ಅಂಗಳದಲ್ಲೇ. ಹಾಲು ಬೆಳಕಿನಲ್ಲಿ ಕುಣಿಯುತ್ತಿದ್ದೆವು.ಅಂಗನವಾಡಿ ಟೀಚರ್ ಕಲಸಿಕೊಡುತ್ತಿದ್ದ ಉಪ್ಪಿಟ್ಟಿನ ಉಂಡೆಯ ಸವಿ ಇನ್ನೂ ನಾಲಿಗೆಯಲ್ಲೇ ಉಳಿದಿದೆ. ಹಾಗೆಯೇ ಅಣ್ಣನ ಹೆಜ್ಜೆಗಳನ್ನು ಹಿಂಬಾಲಿಸುತ್ತ ಶಾಲೆಯ ಮೆಟ್ಟಿಲು ಹತ್ತಿದ್ದು, ಮೊದಲ ದಿನ ಅಣ್ಣನೊಂದಿಗೆ ನಾಲ್ಕನೇ ಕ್ಲಾಸಿನಲ್ಲಿ ಕುಳಿತು ಬೆರಗುಗಣ್ಣಿನಿಂದ ನೋಡಿದ್ದು, ಅಣ್ಣನ ಬುತ್ತಿಯ ತಟ್ಟೆಯಲ್ಲೇ ಹಂಚಿ ತಿಂದದ್ದು. ಶಾಲೆ ಸೇರಿದ ಮೇಲೆ ಅ, ಆ, ಇ , ಈ ಕಲಿಯುವ ಸಂಭ್ರಮ, ಟೀಚರ್ ಬೆನ್ನ ಹಿಂದೆಯೆ ತಿರುಗುತ್ತಿದ್ದುದು, ಬಿಡಿಸಿದ ಚಿತ್ರಕ್ಕೆ ಯಾವ ಬಣ್ಣ ತುಂಬಲಿ ಎಂಬ ಆಯ್ಕೆಯೇ ಬಹು ಕಷ್ಟಕರವಾಗಿದ್ದು, ಗೆಳೆಯರ ಹುಟ್ಟುಹಬ್ಬಕ್ಕೆ ಸಿಗುತ್ತಿದ್ದ ಚಾಕಲೇಟನ್ನ ಕ್ಲಾಸಿನಲ್ಲಿ ನೋಡಿ ನೋಡಿ ಇಟ್ಟು ಮನೆಗೆ ಬಂದು ಅಣ್ಣನೆದುರೇ ತಿನ್ನುತ್ತಿದ್ದುದು.
ಅಂದು ಕಡಿದ ತೆಂಗಿನ ಮರದಡಿಯಲ್ಲಿ ಸಿಕ್ಕಿ ಬಿದ್ದು ಗಾಯಗೊಂಡಿದ್ದ ಹಕ್ಕಿ ಇಂದಿಗೂ ಕನಸಿನಲ್ಲಿ ಬಂದು ಧನ್ಯವಾದ ಹೇಳುತ್ತದೆ ತನ್ನನ್ನ ಬದುಕಿಸಿದ್ದಕ್ಕೆ. ಊರಿನ ಜಾತ್ರೆಗೆ ಬರುವ ಬಿಳಿ ಮೂತಿಯ ಗೊಂಬೆಯನ್ನ ಆಸೆ ತುಂಬಿದ ಕಣ್ಣುಗಳಿಂದ ನೋಡುತ್ತಿದ್ದು, ಬಸ್ಸಿನಲ್ಲಿ ಹೋಗುವಾಗ ಕಿಟಕಿ ಪಕ್ಕದ ಸೀಟೇ ಬೇಕು ಎಂದು ಅಣ್ಣನೊಂದಿಗೆ ಗುದ್ದಾಡಿದ ಕ್ಷಣಗಳು, ಗೆಳತಿಯ ಗೊಂಬೆಗಾಗಿ ಅಂಗಿ ಹೊಲಿಯುತ್ತಿದ್ದುದು, ನಮಗಿಲ್ಲದ ಶೃಂಗಾರ ಅದಕ್ಕೆ. ನಾವು ಮೀನು ಹಿಡಿದ ತೋಡು- ತೊರೆ. ನಮ್ಮನ್ನ ಜೋಪಾನ ಮಾಡಿದ ಶಾಲೆಯ ಕಾಲು ದಾರಿಯನ್ನಂತೂ ಮರೆಯುವಂತೆಯೇ ಇಲ್ಲ. ದಾರಿಯುದ್ದಕ್ಕೂ ಸಿಗುತ್ತಿದ್ದ ಕಾಡು ಹಣ್ಣುಗಳು, ಅದನ್ನ ಕೊಯ್ಯುವುದಕ್ಕಾಗಿಯೆ ಒಬ್ಬರ ಮೇಲೊಬ್ಬರು ಮುಗಿ ಬೀಳುತ್ತಿದ್ದುದು, ದಾರಿ ತುಂಬ ಮುಗಿಯದಷ್ಟು ಮಾತು, ಕೆಲವೊಮ್ಮೆ ಜಗಳ. ನಮ್ಮ ಶಿಕ್ಷಕರೂ ನಮ್ಮ ಜೊತೆಗೆ ನಡೆದು ಬರುತ್ತಿದ್ದರು. ಮಳೆಗಾಲದ ನೆರೆಯಲ್ಲೂ ಬೇಸಿಗೆಯ ಧಗೆಯಲ್ಲೂ ನಾವು ಆ ದಾರಿಯಲ್ಲೇ ನಡೆಯಬೇಕಿತ್ತು.
ಹೀಗೆ ಬದುಕಿನ ಭಾಗಾಕಾರದಲ್ಲಿ ಬಾಲ್ಯ ಎಷ್ಟು ದೊಡ್ಡ ಸಂಖ್ಯೆಯಿಂದಲೂ ಸಹ ಭಾಗಿಸಲ್ಪಡುವುದಿಲ್ಲ. ನೆನಪಿನ ಶೇಷ ಯಾವತ್ತು ಮನಸ್ಸಿನಲ್ಲಿಯೇ ಉಳಿಯುತ್ತದೆ. ಬದುಕಿನ ಎಲ್ಲ ಹಂತಗಳೂ ಅದರಷ್ಟಕ್ಕೆ ಅದು ಚೆನ್ನಾಗಿಯೇ ಇರುತ್ತದೆ. ಮುಗ್ಧತೆ, ಮಕ್ಕಳಾಟಿಕೆ ಇದೆಲ್ಲ ಬಾಲ್ಯದಲ್ಲಿ ಮಾತ್ರ ಸಾಧ್ಯ. ಚಿಂತೆ, ಸಮಸ್ಯೆ, ನೋವು ಇದನ್ನೆಲ್ಲ ಅನುಭವಿಸುವ ಶಕ್ತಿ ಇಲ್ಲದ ನಾವು ಮಾತ್ರ ಹಳೆಯ ಬದುಕನ್ನ ನೆನೆದು ಅದೇ ಚೆನ್ನಾಗಿತ್ತೆಂದು ಮರುಗುತ್ತೇವೆ. ಇಡೀ ಬಾಲ್ಯವೇ ಕೈಯ್ಯಲ್ಲಿದ್ದಾಗ ವಿಲಿವಿಲಿ ಒದ್ದಾಡಿ ನುಸುಳಿಕೊಂಡು ಸಮುದ್ರಕ್ಕೆ ಹಾರಿದ ಮೀನನ್ನ ಮಗು ಮತ್ತೆ ಬೇಕೆಂದು ಹಟ ಮಾಡಿದಂತಾಗುತ್ತದೆ.
– ದಿಶಾ ಗುಲ್ವಾಡಿ
ತೃತೀಯ ಬಿಎಸ್ಸಿ
ಭಂಡಾರ್ಕಾಸ್ ಕಾಲೇಜು, ಕುಂದಾಪುರ