ನಮ್ಮದು ಒಂದು ಹಳ್ಳಿ. ಮನೆಯಿಂದ ಶಾಲೆಗೆ ಸುಮಾರು ಹನ್ನೆರಡು ಕಿ.ಮೀ. ದಾರಿ. ಅದರಲ್ಲಿ ಐದು ಕಿ.ಮೀ. ಎನ್ನುವುದು ಬಸ್, ಆಟೋರಿಕ್ಷಾ ಅಂತಹ ಯಾವುದೇ ಸೌಲಭ್ಯವನ್ನು ಹೊಂದಿಲ್ಲ. ಹೀಗಾಗಿ, ಈ ರಸ್ತೆಯಲ್ಲಿ ನನಗೆ ನನ್ನ ಮುದ್ದು ಅಪ್ಪನೇ ತಮ್ಮ ಬೈಕ್‌ನಲ್ಲಿ ಬಿಡುತ್ತಿದ್ದರು.ಆಗ ನಾನು ಆರನೆಯ ತರಗತಿ. ಇಷ್ಟು ವರ್ಷ ಸ್ಕೂಲಿಗೆ ಅಪ್ಪನ ಬೈಕಲ್ಲಿ “ರೊಂಯ್…’ ಅಂತ ಹೋಗ್ತಿದ್ದೆ. ಈಗ ಸ್ನೇಹಿತರ ಜೊತೆ ನಡೆಯಬೇಕೆಂದು ಅಪ್ಪನ ಹತ್ತಿರ ಹೇಳಿದಾಗ ಅರ್ಧ ದೂರ ಎರಡು ಚಕ್ರದ (ಬೈಕ್‌ನಲ್ಲಿ), ಅರ್ಧ ದೂರ ನಾಲ್ಕು ಚಕ್ರದ (ನಡೆಯುವುದು) ಅನುಭವ ಸಿಕು¤.
ವ್ಹಾವ್! ಐದು ಜನ ಅಕ್ಕ-ತಮ್ಮ, ಸ್ನೇಹಿತರ ಜೊತೆ ನಡೆದುಕೊಂಡು ಹೋಗುವಾಗ ಆಗುವ ಮಜಾನೇ ಬೇರೆ. ಮೊದಮೊದಲು ಅವರ ವೇಗಕ್ಕೆ ನನ್ನ ಕಾಲು ಸುಸ್ತಾಗಿ ನಂತರ ಅವರ ಹಿಂದೆ ಹಿಂದೆ ಓಡುವುದು. ಆದರೆ ಕ್ರಮೇಣ ಸುಧಾರಿಸಿದೆ. ನಮ್ಮ ಗುಂಪಲ್ಲಿ ಹೆಚ್ಚು ಜನ ಹುಡುಗಿಯರೇ ಇರುವುದರಿಂದ ಡ್ರೆಸ್, ಧಾರಾವಾಹಿ ಹೀಗೆ ಹಲವು ವಿಷಯಗಳ ಬಗ್ಗೆ ಮಾತನಾಡುತ್ತಾ ನಡೆಯುತ್ತಿದ್ದೆವು. ಮಾತಿನ ಮಧ್ಯೆ ಜಗಳ ಬಂತೆಂದರೆ ಆಮೇಲೆ ಅವರವರ ದಾರಿ ಅವರಿಗೆ.
ನಮ್ಮ ಬಸ್ ಬೆಳಿಗ್ಗೆ ಎಂಟು ಗಂಟೆಗೆ ಬಿಟ್ಟರೆ ಮತ್ತೆ ಹತ್ತು ಗಂಟೆಗೆ. ಹಾಗಾಗಿ ಎಲ್ಲರೂ ವಾಚ್ ನೋಡುತ್ತಾ ಓಡೋಡಿ ಹೋಗುವುದು. ಕೆಲವೊಮ್ಮೆ ಓಡಿ ಹೋಗಿ ಹಿಂದೆ ಇದ್ದವರಿಗೆ “ಬಸ್ ಬಂತು’ ಅಂತ ಗೂಬೆ ಮಾಡಿದ್ದೂ ಉಂಟು. ಅಯ್ಯೋ… ಆಗ ಅವರ ಅವಸ್ಥೆ ನೋಡ್ಬೇಕು, ಕಾಲಿಗೆ ಚಕ್ರ ಕಟ್ಟಿದಂತೆ ಓಡೋಡಿ ಬರುವವರು.
ಮಳೆಗಾಲದಲ್ಲಂತೂ ಕೇಳ್ಳೋದೇ ಬೇಡ. ಎಷ್ಟೇ ಬೇಗ ಮನೆಯಿಂದ ಹೊರಟರೂ ಕೆಸರನ್ನು ದಾಟಿ ಬಸ್‌ಸ್ಟಾಂಡ್‌ಗೆ ಹೋಗುವಾಗ ಲೇಟಾಗಿರುತ್ತೆ. ಕೊಡೆ ಹಿಡೊªàರ ಅವಸ್ಥೆ ಅಂದ್ರೆ ಜೋರಾಗಿ ಗಾಳಿ ಬಂದ್ರೆ ಕೊಡೆ ಮಾಯ. ಪುಸ್ತಕವನ್ನೆಲ್ಲಾ ಪ್ಲಾಸ್ಟಿಕ್‌ನಲ್ಲಿ ಹಾಕಿದ್ರೂ ಒದ್ದೆಯಾಗಿರುತ್ತೆ. ಬಸ್ಸಿನಲ್ಲೂ ಕುಳಿತವರಿಗೆ ಬೇರೆಯವರ ಬ್ಯಾಗ್, ಒದ್ದೆಯಾದ ಕೊಡೆ ಹಿಡಿಯೋ ಕೆಲಸ. ಇನ್ನು ನಿಲ್ಲೋಣ ಅಂದರೆ, ಜನಜಂಗುಳಿಯಿಂದ ಎಲ್ಲಿ ಹಿಂದೆ ನಿಂತವರು ಮೈಮೇಲೆ ಬೀಳ್ತಾರೇನೋ ಎನ್ನೋ ಕಿರಿಕಿರಿ. ಇಷ್ಟೆಲ್ಲಾ ಆದರೂ ಅದರಲ್ಲಿಯೇ ಏನೋ ಮಜಾ.
ನನ್ನ ಹತ್ತಿರ ರೈನ್‌ಕೋಟ್ ಇದ್ದ ಕಾರಣ ಅದನ್ನು ಹಾಕಿಕೊಂಡು ನಡೆದದ್ದು ಇದೆ. ಆದರೆ, ಕೆಲವೊಮ್ಮೆ ಆಟದಲ್ಲಿ ಗೆಲ್ಲಬೇಕೆಂದು ಓಡುವ ಹುಡುಗರ ರೀತಿ ಸಮಯಕ್ಕೆ ಮುಂಚಿತವಾಗಿ ಬಸ್ ಬಂದಿದ್ದರೆ, ಆಗ ರೈನ್‌ಕೋಟ್‌ನ ಗುಂಡಿ ಕೈಗೆ ಬರುವಂತೆ ಎಳೆದು ಕೈಚೀಲಕ್ಕೆ ಹಾಕಿ ಬಸ್ ಹತ್ತಿದ್ದೂ ಉಂಟು. ಇಲ್ಲದಿದ್ದರೆ, “ಮೊದಲೇ ಬಸ್‌ನಲ್ಲಿ ಜಾಗವಿಲ್ಲ, ಅದರಲ್ಲೂ ನಿಮ್ಮ ರೈನ್‌ಕೋಟ್ ಬೇರೆ’ ಎನ್ನುವ ಕಂಡಕ್ಟರ್‌ನ ಮಂಗಳಾರತಿ ಬೇರೆ. ಮತ್ತೆ ಸಂಜೆ ಮಳೆ ಬಂದರೇನೆ ನನಗೆ ರೈನ್‌ಕೋಟ್‌ನ ನೆನಪು.
ಆದರೆ, ಸಂಜೆ ಹಾಗಲ್ಲ. ನಾವು ಎಷ್ಟೇ ಲೇಟಾಗಿ ಹೋದರೂ ಅದೇ ಬೇಗ. ಗದ್ದೆ ಅಂಚಿನಲ್ಲಿ ಕಾಲೊಂದಿಗೆ ಮಾತನಾಡುವ ಸಣ್ಣ ಸಣ್ಣ ಹುಲ್ಲು, ತಂತುರು ಹನಿಯೊಂದಿಗೆ ಆಟವಾಡುತ್ತ, ಗೆಳತಿಯರೊಂದಿಗೆ ಕಥೆ ಹೇಳುತ್ತ, ಶಾಲೆಯಲ್ಲಿನ ಅನುಭವವನ್ನು ಹಂಚುತ್ತ ಮನೆಗೆ ಹೋಗುವುದು. ಮನೆಗೆ ಹೋದವರೆ ಬಿಸಿನೀರನ್ನು ಮೈಮೇಲೆ ಹಾಕಿ, ಬಿಸಿ ಬಿಸಿ ಹಾಲು ಅಥವಾ ಕಾಫಿ-ತಿಂಡಿ ತಿಂದರೇ ಸಮಾಧಾನ.
ಆದರೂ ಆಗಿನ ಮಜಾ ಈಗ ಮನೆಯಿಂದಲೇ ಸ್ಕೂಲ್ ವ್ಯಾನ್‌ನಲ್ಲಿ ಹೋಗುವವರಿಗೆ ಸಿಗುವುದು ಕಷ್ಟ. ಅವರಿಗೆ ಹೀಗೆ ಅನುಭವದ ನೆನಪಲ್ಲಿ ಸಿಹಿ ಸಿಗುವುದು ಕಡಿಮೆ.
ಐ ಮಿಸ್ ದೋಸ್ ಡೇಸ್.
– ನಾಗರತ್ನ ಶೆಣೈ,
ದ್ವಿತೀಯ ಪಿಯುಸಿ
ಎಕ್ಸಲೆಂಟ್ ಪಿಯು ಕಾಲೇಜು, ಸುಣ್ಣಾರಿ