ಚೆಂಗ್ಡು (ಚೀನ): ಥಾಮಸ್ ಕಪ್ ಮತ್ತು ಉಬೆರ್ ಕಪ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಆಟ ಕ್ವಾರ್ಟರ್ ಫೈನಲ್‌ನಲ್ಲಿ ಕೊನೆಗೊಂಡಿದೆ.
ಕಳೆದ ವರ್ಷ ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದ ಪುರುಷರ ತಂಡ ಆತಿಥೇಯ ಚೀನ ವಿರುದ್ಧ 1-3 ಅಂತರದ ಸೋಲುಂಡು ಹೊರ ಬಿತ್ತು. ಇದಕ್ಕೂ ಮುನ್ನ ಉಬೆರ್ ಕಪ್‌ನಲ್ಲಿ ವನಿತಾ ತಂಡ ಜಪಾನ್ ಕೈಯಲ್ಲಿ 0-3 ಅಂತರದ ಸೋಲನುಭವಿಸಿತು.
ಎಚ್.ಎಸ್. ಪ್ರಣಯ್, ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಸೋಲನುಭವಿಸಿದ ಬಳಿಕ ಲಕ್ಷ್ಯ ಸೇನ್ ಭಾರತವನ್ನು ಹಳಿಗೆ ಏರಿಸಿದರು. ಅವರು 13-21, 21-8, 21-14ರಿಂದ ಲೀ ಶಿ ಫೆಂಗ್ ವಿರುದ್ಧ ಗೆದ್ದು ಬಂದರು. ಆದರೆ ಧ್ರುವ ಕಪಿಲ-ಸಾಯಿ ಪ್ರತೀಕ್ ಜೋಡಿ ಯಶಸ್ಸು ಕಾಣಲಿಲ್ಲ.
ಉಬೆರ್ ಕಪ್‌ನಲ್ಲಿ ಅಶ್ಮಿತಾ ಚಾಲಿಹಾ 11ನೇ ರ್‍ಯಾಂಕಿಂಗ್‌ನ ಅಯಾ ಒಹೊರಿ ವಿರುದ್ಧ ದಿಟ್ಟ ಹೋರಾಟ ನೀಡಿದ್ದೊಂದೇ ಭಾರತದ ಪಾಲಿನ ಸಮಾಧಾನಕರ ಸಂಗತಿ. ಇದನ್ನು ಅಶ್ಮಿತಾ 10-21, 22-20, 15-21ರಿಂದ ಕಳೆದುಕೊಂಡರು. 20 ವರ್ಷದ ಇಶಾರಾಣಿ ಮಾಜಿ ನಂ.1 ಆಟ ಗಾರ್ತಿ ನೊಜೊಮಿ ಒಕುಹಾರ ವಿರುದ್ಧ 15-21, 12-21 ಅಂತರದ ಸೋಲನುಭವಿಸಿದರು. ಡಬಲ್ಸ್ ನಲ್ಲಿ ರಾಷ್ಟ್ರೀಯ ಚಾಂಪಿಯನ್‌ಗಳಾದ ಪ್ರಿಯಾ ಕೆ.-ಶ್ರುತಿ ಮಿಶ್ರಾ 8-21, 9-21ರಿಂದ ವಿಶ್ವದ 4ನೇ ರ್‍ಯಾಂಕಿಂಗ್ ಜೋಡಿಯಾದ ನಾಮಿ ಮಟ್ಸುಯಾಮಾ- ಚಿಹಾರು ಶಿಡಾ ಅವರಿಗೆ ಶರಣಾದರು.
ಸಿಂಧು ಅವರ ಅನುಪಸ್ಥಿತಿಯ ಹೊರ ತಾಗಿಯೂ ಲೀಗ್ ಹಂತದಲ್ಲಿ ಕೆನಡಾ ಮತ್ತು ಸಿಂಗಾಪುರ ವಿರುದ್ಧ ಭಾರತ ಜಯ ಸಾಧಿಸಿತ್ತು. ಆದರೆ ಚೀನಕ್ಕೆ ಅಂತಿಮ ಲೀಗ್ ಪಂದ್ಯದಲ್ಲಿ ಶರಣಾಗಿತ್ತು. ಭಾರತ ಈವರೆಗೆ ಕೇವಲ 3 ಸಲ ಉಬೆರ್ ಕಪ್ ಪಂದ್ಯಾವಳಿಯ ಸೆಮಿಫೈನಲ್ ತಲುಪಿದೆ. ಕೊನೆಯ ಸಲ ಉಪಾಂತ್ಯ ಕಂಡದ್ದು 2016ರಲ್ಲಿ. ಇದಕ್ಕೂ ಮುನ್ನ 1957 ಮತ್ತು 2014ರಲ್ಲಿ ಸೆಮಿಫೈನಲ್ ತನಕ ಸಾಗಿತ್ತು.