Advertisement

ತೊಡಿಕಾನ ಅಂಗನವಾಡಿ ಕಟ್ಟಡ ಕಾಮಗಾರಿ ಸ್ಥಗಿತ: ಪುಟಾಣಿಗಳಿಗೆ ತೊಂದರೆ

04:32 PM Dec 28, 2017 | Team Udayavani |

ಬೆಳ್ಳಾರೆ: ತೊಡಿಕಾನ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಕಾಮಗಾರಿ ಸ್ಥಗಿತಗೊಂಡು ಮೂರು ವರ್ಷ ಕಳೆಯುತ್ತಿದ್ದು, ಇಲ್ಲಿಯ ಪುಟಾಣಿಗಳು ಸಮಸ್ಯೆಗೊಳಗಾಗಿದ್ದಾರೆ. 2015ರಲ್ಲಿ ಇಲಾಖೆ ಅನುದಾನ 4.18 ಲಕ್ಷ ರೂ. ಹಾಗೂ ತಾಲೂಕು ಪಂಚಾಯತ್‌ ಅನುದಾನ 75 ಸಾವಿರ ರೂ.ಗಳಲ್ಲಿ ಅಂಗವಾಡಿಯ ನೂತನ ಕಟ್ಟಡದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಅಂಗವಾಡಿಯ ಸ್ಲ್ಯಾಬ್, ಕಿಚನ್‌, ಸ್ಟಾಕ್‌ ರೂಂ, ಶೌಚಾಲಯದ ಕೆಲಸ ಮುಗಿದಿದೆ. ಇದಕ್ಕೆ ಟೈಲ್ಸ್‌ ಅಳವಡಿಸುವ ಕೆಲಸ ಬಾಕಿ ಉಳಿದಿದೆ. ಅಂಗನವಾಡಿಯ ಎದುರಿನ ಮಕ್ಕಳ ಕೊಠಡಿಗೆ ಟೈಲ್ಸ್‌ ಹಾಸಲಾಗಿದೆ. ಇನ್ನೂ ಕಿಟಕಿ – ಬಾಗಿಲುಗಳ ಕೆಲಸ, ವಿದ್ಯುತ್‌ ಸಂಪರ್ಕದ ಕೆಲಸ ಬಾಕಿ ಇವೆ. ಅನುದಾನ ಸಾಕಾಗುತ್ತಿಲ್ಲ ಎಂಬ ನೆಲೆಯಲ್ಲಿ ಎರಡು ವರ್ಷಗಳ ಹಿಂದೆಯೇ ಕಾಮಗಾರಿ ಸ್ಥಗಿತಗೊಳಿಸಲಾಗಿದೆಯ

Advertisement

ನಾದುರಸ್ತಿಯಲ್ಲಿ ಹಳೆ ಕಟ್ಟಡ
ಅಂಗವಾಡಿಗೆ ನಿತ್ಯ 30 ಮಕ್ಕಳು ಬರುತ್ತಿದ್ದು, ಇವರೆಲ್ಲರೂ ಹಳೆಯ ಹಾಗೂ ನಾದುರಸ್ತಿಯಲ್ಲಿರುವ ಕಟ್ಟಡದಲ್ಲೇ ಆತಂಕದಿಂದ ಕಾಲ ಕಳೆಯುವ ಸ್ಥಿತಿ ಇದೆ. ವಿದ್ಯಾರ್ಥಿಗಳಿಗೆ ಅಪಾಯವಾಗುವ ಸಾಧ್ಯತೆ ಇದ್ದರೂ ಬೇರೆ ಕಟ್ಟಡದ ವ್ಯವಸ್ಥೆಯಿಲ್ಲ. ಅಂಗವಾಡಿ ತೊಡಿಕಾನ ಸರಕಾರಿ ಶಾಲೆಯ ಜಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕುಡಿಯುವ ನೀರು ಹಾಗೂ ಇತರ ದಿನ ನಿತ್ಯದ ಕೆಲಸಗಳಿಗೆ ಶಾಲೆಯ ಸೌಲಭ್ಯಗಳನ್ನೇ ಅವಲಂಬಿಸಿದೆ.

ಕಾರ್ಯಕರ್ತೆಯರಿಂದ ಗ್ಯಾಸ್‌ ವೆಚ್ಚ
ಅಡುಗೆ ಅನಿಲ ಪೂರೈಕೆಗಾಗಿ ಅಂಗನವಾಡಿಗೆ ಇಲಾಖೆ ವತಿಯಿಂದ ವರ್ಷಕ್ಕೆ 200 ರೂ. ನೀಡಲಾಗುತ್ತಿದೆ. ಇದು ಸಾಕಾಗುತ್ತಿಲ್ಲ. ಎರಡು ತಿಂಗಳಿಗೆ ಒಂದು ಸಿಲಿಂಡರ್‌ ಗ್ಯಾಸ್‌ ಬೇಕಾಗುತ್ತದೆ. ಇದರಲ್ಲಿ ಗ್ಯಾಸ್‌ಗೆ ಹಣ ನೀಡಬೇಕು, ಸಾಗಾಟ ವೆಚ್ಚವನ್ನೂ ಭರಿಸಬೇಕಾಗುತ್ತದೆ. ಹಲವು ಸಲ ಅಂಗನವಾಡಿ ಕಾರ್ಯಕರ್ತೆಯರೇ ಇದಕ್ಕೆ ಖರ್ಚು ಮಾಡುತ್ತಾರೆ.

ಕ್ರೀಡಾಂಗಣದ ಸಮಸ್ಯೆ
ಅಂಗವಾಡಿ ಮಕ್ಕಳಿಗೆ ಈಗ ಕ್ರೀಡಾಂಗಣದ ಸಮಸ್ಯೆಯೂ ಎದುರಾಗಿದೆ. ನೂತನ ಕಟ್ಟಡದ ಕೆಲಸ ಮುಗಿಯದಿರುವ ಕಾರಣ ಕ್ರೀಡಾಂಗಣ ಇಲ್ಲದಂತಾಗಿದೆ. ನೂತನ ಕಟ್ಟಡ ಪೂರ್ಣಗೊಂಡು, ಹಳೆಯ ಕಟ್ಟಡ ಕೆಡವಿದರೆ ಕ್ರೀಡಾಂಗಣಕ್ಕೆ ಜಾಗ ದೊರೆಯುತ್ತದೆ. ಸ್ಥಗಿತಗೊಂಡ ಅಂಗವಾಡಿ ಕಟ್ಟಡದ ನೂತನ ಕಟ್ಟದ ಕಾಮಗಾರಿ ಮುಂದುವರಿಸುವುದಕ್ಕಾಗಿ ಇನ್ನಷ್ಟು ಅನುದಾನ ಒದಗಿಸಲು ಇಲಾಖೆ ಹಾಗೂ ಜನಪ್ರತಿನಿಧಿಗಳು ಪ್ರಯತ್ನಿಸಬೇಕೆಂದು ಸ್ಥಳೀಯ ಮುಖಂಡ ಜನಾರ್ದನ ಬಾಳೆಕಜೆ ಹಾಗೂ ಮಕ್ಕಳ ಹೆತ್ತವರು ಒತ್ತಾಯಿಸಿದ್ದಾರೆ.

ಅನುದಾನದ ಕೊರತೆ
ಅನುದಾನದ ಕೊರತೆಯಿಂದ ತೊಡಿಕಾನ ಅಂಗವಾಡಿ ಕಟ್ಟಡದ ಕೆಲಸ ಸ್ಥಗಿತಗೊಂಡಿದೆ. ಇದಕ್ಕೆ ಅನುದಾನ ಒದಗಿಸಿ ಕೊಡುವಂತೆ ಶಾಸಕರನ್ನು ಕೇಳಿಕೊಳ್ಳಲಾಗಿದೆ.
– ಸರಸ್ವತಿ, ಸಿ.ಡಿ.ಪಿ.ಒ. ಸುಳ್ಯ

Advertisement

ಸಹಕಾರ ನೀಡಿ
ತೊಡಿಕಾನ ಶಾಲಾ ಬಳಿ ಇರುವ ಅಂಗವಾಡಿ ಕಟ್ಟಡದ ಕೆಲಸ ಸ್ಥಗಿತಗೊಂಡು ಮೂರು ವರ್ಷಗಳಾಗುತ್ತಾ ಬಂತು. ಈ ಕಾಮಗಾರಿಯನ್ನು ಮುಂದುವರಿಸಬೇಕು ಇದಕ್ಕೆ ಜನಪ್ರತಿನಿಧಿಗಳು ಇಲಾಖೆಯವರು ಸಹಕಾರ ನೀಡಬೇಕು.
– ಜನಾರ್ದನ ಬಾಳೆಕಜೆ,ಸ್ಥಳೀಯ ನಿವಾಸಿ

ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next