ಅರಂತೋಡು : ತೊಡಿಕಾನ ದೇವಾಲಯದ ಮತ್ಸ್ಯ ತೀರ್ಥ ಹೊಳೆಯಲ್ಲಿ ಕಳೆದ ಕೆಲ ದಿನಗಳಿಂದ ನೀರಿನ ಹರಿವು ಕಡಿಮೆಯಾಗಿದ್ದು, ಇದರಿಂದ ಅಲ್ಲಿನ ದೇವರ ಮೀನುಗಳಿಗೆ ಅಪಾಯ ಕಾದಿತ್ತು. ಇದೀಗ ಅಲ್ಲಿ ಕಿಂಡಿ ಅಣೆಕಟ್ಟಿನಲ್ಲಿ ನೀರು ಶೇಖರಣೆಗೊಳಿಸಿದ ಪರಿಣಾಮ ಮೀನುಗಳು ಸುರಕ್ಷಿತವಾಗಿವೆ.
ಕೆಲ ದಿನಗಳ ಹಿಂದೆ ‘ಉದಯವಾಣಿ’ ಪತ್ರಿಕೆಯಲ್ಲಿ ಮತ್ಸ್ಯ ತೀರ್ಥ ಹೊಳೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು ದೇವರ ಮೀನುಗಳಿಗೆ ಸಮಸ್ಯೆಯಾಗಬಹುದು ಎಂದು ವರದಿ ಮಾಡಲಾಗಿತ್ತು. ಈಗ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ವತಿಯಿಂದ ಶಿಥಿಲಗೊಂಡ ಕಿಂಡಿ ಅಣೆಕಟ್ಟಿನ ಹಲಗೆಯನ್ನು ಪೇರಿಸಿ ಮಧ್ಯೆ ಮಣ್ಣು ಹಾಕಿ ಪ್ಲಾಸ್ಟಿಕ್ ಅಳವಡಿಸಿ ನೀರು ಶೇಖರಣೆ ಮಾಡಲಾಗಿದೆ.
ಸುಳ್ಯದ ಸೀಮೆ ದೇವಾಲಯವಾದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯಕ್ಕೆ ಒಳಪಟ್ಟ ಮತ್ಸ್ಯತೀರ್ಥ ಹೊಳೆಯಲ್ಲಿ ಸಾವಿರಾರು ದೇವರ ಮೀನುಗಳಿವೆ. ಮಹಾವಿಷ್ಣು ಮತ್ಸ್ಯರೂಪ ತಾಳಿದ ಸ್ಥಳ ಇದಾಗಿದ್ದು, ಚರ್ಮ ರೋಗಳಿಗೆ ಹರಕೆ ಹೇಳಿಕೊಂಡು ಮೀನುಗಳಿಗೆ ಆಹಾರ ಹಾಕಿದರೆ ಚರ್ಮ ರೋಗ ವಾಸಿಯಾಗುತ್ತದೆ ಎನ್ನುವ ನಂಬಿಕೆ ಸೀಮೆಯ ಭಕ್ತರಲ್ಲಿದೆ. ಇದರಿಂದ ನೂರಾರು ಭಕ್ತರು ಹರೆಕೆ ಹೊತ್ತು ಮೀನುಗಳಿಗೆ ಆಹಾರ ಹಾಕುತ್ತಾರೆ. ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರೆ ಎ. 13ರಿಂದ ಆರಂಭಗೊಂಡು ಎ. 20ರ ವರೆಗೆ ವಿವಿಧ ಸಾಂಸ್ಕೃತಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತದೆ. ಪ್ರತಿ ವರ್ಷ ಜಾತ್ರಾ ಸಮಯದಲ್ಲಿ ಮತ್ಸ್ಯತೀರ್ಥ ಹೊಳೆಯಲ್ಲಿ ನೀರಿನ ಕೊರತೆಯಾಗಿ ದೇವರ ಮೀನುಗಳು ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದವು. ಈ ಕಾರಣದಿಂದ ಭಕ್ತಾದಿಗಳಿಗೆ ಮೀನಿಗೆ ಆಹಾರ ಹಾಕಲು ದೇಗುಲದ ವತಿಯಿಂದ ಅವಕಾಶ ನೀಡುವುದು ಕಡಿಮೆ.
ದೇಗುಲದಲ್ಲಿ ಮೀನುಗಳಿಗೆ ಹರಕೆ ರೂಪದಲ್ಲಿ ಬಂದ ಆಹಾರ ಸಂಗ್ರಹ ಮಾಡಿಕೊಂಡು ಹೊಳೆಯಲ್ಲಿ ನೀರಿನ ಪ್ರಮಾಣ ಜಾಸ್ತಿಯಾದ ಬಳಿಕ ದೇಗುಲ ಸಿಬಂದಿಗಳು ಮೀನುಗಳಿಗೆ ನಿಗದಿತ ಪ್ರಮಾಣದಲ್ಲಿ ಆಹಾರ ನೀಡುತ್ತಾರೆ.
ತೊಂದರೆ ಇಲ್ಲ
ನಾಲ್ಕು ಇಂಚು ನೀರನ್ನು ದೂರದ ದೇವರ ಗುಂಡಿ ಸಮೀಪದಿಂದ ಪೈಪ್ ಮೂಲಕ ತಂದು ಮೀನಿನ ಗುಂಡಿಗೆ ಬಿಡಲಾಗುತ್ತಿದೆ. ಮೀನುಗಳಿಗೆ ಯಾವುದೇ ತೊಂದರೆ ಇಲ್ಲ ಎಂದು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲದ ಮ್ಯಾನೇಜರ್ ಆನಂದ ಕಲ್ಲಗದ್ದೆ ಅವರು ಹೇಳಿದ್ದಾರೆ.
ಪೈಪ್‌ನಲ್ಲಿ ನೀರು
ಮೀನುಗಳಿಗೆ ನೀರಿನ ಕೊರತೆಯಾದಾಗ ಸುಮಾರು ಎರಡು ಕಿ.ಮೀ.ಗೂ ಅಧಿಕ ದೂರದ ದೇವರ ಗುಂಡಿ ಸಮೀಪದಿಂದ ಕೊಳವೆ ಅಳವಡಿಸಿ ನೀರು ಸಂಗ್ರಹ ಮಾಡಿ ದೇವರ ಮೀನಿನ ಹೊಳೆಗೆ ನೀರು ಹಾಯಿಸಲಾಗುತ್ತಿದೆ. ಈ ಬಾರಿ ಕಿಂಡಿ ಅಣೆಕಟ್ಟಿನ ಹಲಗೆ ಶಿಥಿಲಗೊಂಡ ಪರಿಣಾಮ ಪ್ಲಾಸ್ಟಿಕ್ ಆಳವಡಿಸಿ ನೀರು ಸಂಗ್ರಹ ಮಾಡಲಾಗಿದೆ.