Advertisement

ಪಾಕಿಸ್ಥಾನದಲ್ಲಿ ಟಿ20 ಸರಣಿ: ತಿಸರ ಪೆರೆರ ಲಂಕಾ ನಾಯಕ

06:50 AM Oct 22, 2017 | |

ಕೊಲಂಬೊ: ನಾಯಕ ಉಪುಲ್‌ ತರಂಗ ಸಹಿತ ಮೊದಲ ಆಯ್ಕೆಯ ಆಟಗಾರರೆಲ್ಲ ಪಾಕಿಸ್ಥಾನದಲ್ಲಿ ಟಿ20 ಪಂದ್ಯ ಆಡಲು ಹಿಂದೆ ಸರಿದುದರಿಂದ “ಹೊಸ ರೂಪ’ದ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದೆ. ಆಲ್‌ರೌಂಡರ್‌ ತಿಸರ ಪೆರೆರ ಈ ತಂಡದ ನಾಯಕರಾಗಿದ್ದಾರೆ. ಈ ಏಕೈಕ ಪಂದ್ಯ ಅ. 29ರಂದು ಲಾಹೋರ್‌ನಲ್ಲಿ ನಡೆಯಲಿದೆ.

Advertisement

“ಯಾರಿಗೂ ಒತ್ತಾಯ ಮಾಡುವುದಿಲ್ಲ. ಪಾಕಿಸ್ಥಾನಕ್ಕೆ ಹೋಗಲು ಮುಂದಾಗಿರುವವರನ್ನಷ್ಟೇ ಆಯ್ಕೆಗೆ ಪರಿಗಣಿಸಲಾಗುವುದು’ ಎಂದು 2 ದಿನಗಳ ಹಿಂದೆ ಶ್ರೀಲಂಕಾ ಕ್ರಿಕೆಟ್‌ ಆಯ್ಕೆ ಸಮಿತಿ ಅಧ್ಯಕ್ಷ ಗ್ರೇಮ್‌ ಲಾಬ್ರೂಯ್‌ ಹೇಳಿದ್ದರು. ಉಪುಲ್‌ ತರಂಗ, ಲಸಿತ ಮಾಲಿಂಗ, ನಿರೋಷನ್‌ ಡಿಕ್ವೆಲ್ಲ, ಚಾಮರ ಕಪುಗೆಡರ, ಅಖೀಲ ಧನಂಜಯ ಮತ್ತು ಸುರಂಗ ಲಕ್ಮಲ್‌ ಪಾಕಿಸ್ಥಾನಕ್ಕೆ ತೆರಳುವುದಿಲ್ಲ ಎಂದೂ ಖಚಿತಪಡಿಸಿದ್ದರು. 2009ರ “ಲಾಹೋರ್‌ ದಾಳಿ’ ವೇಳೆ ಲಕ್ಮಲ್‌ ಮತ್ತು ಕಪುಗೆಡರ ಶ್ರೀಲಂಕಾ ತಂಡದ ಬಸ್ಸಿನಲ್ಲಿದ್ದರು.

ತಿಸರ ಪೆರೆರ ಈ ವರ್ಷ ಶ್ರೀಲಂಕಾ ಕ್ರಿಕೆಟ್‌ ತಂಡದ ನಾಯಕತ್ವ ವಹಿಸಿಕೊಂಡ 7ನೇ ಆಟಗಾರ. ಇತ್ತೀಚೆಗೆ ಲಾಹೋರ್‌ನಲ್ಲಿ ನಡೆದ ವಿಶ್ವ ಇಲೆವೆನ್‌ ಸಿರೀಸ್‌ನಲ್ಲಿ ಪೆರೆರ ಕೂಡ ಆಡಿದ್ದರು. ಟಿ20 ಪಂದ್ಯಕ್ಕಾಗಿ ಪ್ರಕಟಿಸಲಾದ ಲಂಕಾ ತಂಡದಲ್ಲಿ ಕೆಲವು ಹೊಸ ಮುಖಗಳಿದ್ದು, ಆಫ್ಸ್ಪಿನ್ನರ್‌ ಮಹೇಲ ಉದವಟ್ಟೆ ಅವರನ್ನು 8 ವರ್ಷಗಳ ಬಳಿಕ ಕರೆಸಿದ್ದೊಂದು ಅಚ್ಚರಿ.

ಶ್ರೀಲಂಕಾ ಟಿ20 ತಂಡ: ತಿಸರ ಪೆರೆರ (ನಾಯಕ), ದಿಲ್ಶನ್‌ ಮುನವೀರ, ದನುಷ್ಕ ಗುಣತಿಲಕ, ಸದೀರ ಸಮರವಿಕ್ರಮ, ಅಶಾನ್‌ ಪ್ರಿಯಾಂಜನ್‌, ಮಹೇಲ ಉದವಟ್ಟೆ, ದಸುನ್‌ ಶಣಕ, ಮಿನೋದ್‌ ಭಣುಕ (ವಿ.ಕೀ.), ಸಚಿತ ಪತಿರಣ, ವಿಕುಮ್‌ ಸಂಜಯ, ಲಹಿರು ಗಾಮಗೆ, ಸಿಕ್ಕುಗೆ ಪ್ರಸನ್ನ, ವಿಶ್ವ ಫೆರ್ನಾಂಡೊ, ಇಸುರು ಉದಾನ, ಜೆಫ್ರಿ ವಾಂಡರ್ಸೆ, ಚತುರಂಗ ಡಿ ಸಿಲ್ವ.

Advertisement

Udayavani is now on Telegram. Click here to join our channel and stay updated with the latest news.

Next