Advertisement

Yugadi: ಯುಗದ ಆರಂಭದ ಮುನ್ನುಡಿ ಈ ಯುಗಾದಿ

02:51 PM Apr 24, 2024 | Team Udayavani |

ನಮ್ಮ ಭಾರತ ದೇಶವು ಸಂಸ್ಕೃತಿ, ಸಂಪ್ರದಾಯ ಆಚಾರ ವಿಚಾರಗಳ ನೆಲೆಬೀಡಾಗಿದೆ. ಸನಾತನ ಕಾಲದಿಂದಲೂ ನಮ್ಮ ನಾಡು ಸಂಸ್ಕೃತಿಮಯವಾಗಿದೆ. ಭಾರತದಂತೆಯೇ ನಮ್ಮ ಕರ್ನಾಟಕ, ಕನ್ನಡ ನಾಡು ಸಹ ಸಂಸ್ಕೃತಿಯಿಂದ ಮೆರೆಯುವ ಸಿರಿನಾಡಾಗಿದೆ.

Advertisement

ಅನಾದಿ ಕಾಲದಿಂದಲೂ ನಮ್ಮ ಪೂರ್ವಿಕರು ಕಾಲಕ್ಕೆ ತಕ್ಕಂತೆ ಹಲವಾರು ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದಾರೆ. ಪ್ರತಿಯೊಂದು ಹಬ್ಬದಲ್ಲೂ ಒಂದೊಂದು ವಿಶೇಷತೆಗಳಿರುತ್ತದೆ. ಅದರಂತೆಯೇ ನಮಗೆಲ್ಲಾ ಹೊಸವರ್ಷದ ಆರಂಭದ ಕಾಲ, ಯುಗಾರಂಭದ ಕಾಲದ ಹಬ್ಬವೇ, ನಾವೆಲ್ಲಾ ಸಡಗರ ಸಂಭ್ರಮದಿಂದ ಆಚರಿಸುವ ಯುಗಾದಿ ಹಬ್ಬ.

ಯುಗಾದಿ ಎಂಬ ಪದವು ಯುಗ ಮತ್ತು ಆದಿ ಎಂಬ ಎರಡು ಪದಗಳಿಂದ ಸೃಷ್ಟಿಯಾಗಿದೆ. “ಯುಗ’ ಎಂದರೆ ಹೊಸ ಕಾಲ ಎಂದೂ “ಆದಿ’ ಎಂದರೆ ಆರಂಭ ಎಂತಲೂ ಹೊಸ ಕಾಲದ ಹೊಸ ಯುಗದ ಆರಂಭದ ಕಾಲವಾಗಿ ಈ ಯುಗಾದಿ ಹಬ್ಬವನ್ನು ಆಚರಿಸುತ್ತೇವೆ.

ಈ ಹಬ್ಬವನ್ನು ನಮ್ಮ ಹಿಂದೂ ಧರ್ಮದವರು ಹೊಸ ವರ್ಷವೆಂದೂ ಕರೆಯುತ್ತೇವೆ, ಹೀಗೆ ಕರೆಯಲು ಕಾರಣಗಳೂ ಇವೆ. ಪ್ರಕೃತಿಯಲ್ಲಿ ಆಗುವ ನೂತನ ಬದಲಾವಣೆಗಳು. ಎಲ್ಲಿ ಕಣ್ಣರಳಿಸಿ ನೋಡಿದರೂ ಸುತ್ತಮುತ್ತಲಿನ ವಾತಾವರಣವೆಲ್ಲವೂ ಹಸುರು ಚಿಗುರಿನಿಂದ ಕಂಗೊಳಿಸುತ್ತಿರುತ್ತದೆ. ಮರಗಿಡ ಬಳ್ಳಿಗಳೆಲ್ಲವೂ ಚಿಗುರೊಡೆದು ಸಂತಸದಿ ನಲಿವ ಹಾಗೆ ಕಾಣುತ್ತದೆ.

ಯುಗಾದಿಯು ಜೀವನದಲ್ಲಿ ನೋವು, ನಲಿವು, ಕಷ್ಟ ಸುಖಗಳು ಬರುವುದು ಸರ್ವೇ ಸಾಮಾನ್ಯ. ಕಷ್ಟ ಬಂದಾಗ ಕುಗ್ಗದೆ ಸುಖ ಬಂದಾಗ ಹಿಗ್ಗದೆ ಜೀವನದಲ್ಲಿ ಬರುವ ಎಲ್ಲ ಸವಾಲುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬ ಸಂದೇಶವನ್ನು ಸಾರುವ ದ್ಯೋತಕವಾಗಿದೆ.

Advertisement

ಹಾಗೆಯೇ ನಮ್ಮ ಸಂಪ್ರದಾಯ, ಆಚಾರ, ವಿಚಾರಗಳೆಲ್ಲವೂ ಭದ್ರಬುನಾದಿ ತಳಪಾಯದ ಮೇಲೆ ಅಂತಸ್ತು ಕಟ್ಟಿದ ಹಾಗೆ ಅವು ನಮ್ಮ ಹಿರಿಯರು ಮಾಡಿರುವ ಮೌಲ್ಯಯುತವಾದ ಸಾಧಕಗಳಾಗಿವೆ. ಅವರು ಅನುಸರಿಸಿಕೊಂಡು ಬಂದಿರುವ ಸಂಪ್ರದಾಯ ಆಚಾರ ವಿಚಾರಗಳನ್ನು ನಾವೂ ಪಾಲಿಸುತ್ತಾ ನಮ್ಮ ಮುಂದಿನ ಪೀಳಿಗೆಯವರಿಗೂ ಉಳಿಸಿ ಕಲಿಸಿಕೊಡಬೇಕಾಗಿದೆ. ಏಕೆಂದರೆ ನಮ್ಮ ಯಾವುದೇ ಸಂಪ್ರದಾಯ ಆಚಾರ ವಿಚಾರಗಳನ್ನು ವೈಜ್ಞಾನಿಕ ದೃಷ್ಟಿಯಿಂದ ಪರಿಶೀಲಿಸಿದಾಗ ಅವು ನಮ್ಮ ಆರೋಗ್ಯದ ದೃಷ್ಟಿಯಿಂದ ಮತ್ತು ಜೀವನ ನಿರ್ವಹಿಸುವ ದೃಷ್ಟಿಯಿಂದ ಉತ್ತಮವಾದವುಗಳಾಗಿವೆ. ಅದರಲ್ಲೂ ಈ ಯುಗಾದಿ ಹಬ್ಬದಿಂದ ತಿಳಿದು ಬರುವ ಅಂಶಗಳೆಂದರೆ, ಮಾವು – ಬೇವುಗಳ ಸಮ್ಮಿಲನವು ನಮ್ಮ ಜೀವನದಲ್ಲಿ ಪರಿಸ್ಥಿತಿಗಳು ಏರುಪೇರಾದಾಗಲೂ ಒಂದೇ ರೀತಿಯಲ್ಲಿ ಸಮನಾಗಿ ಸರಿದೂಗಿಸಿಕೊಂಡು ಹೋಗಬೇಕೆನ್ನುವ ಜೀವನ ಸಂದೇಶವನ್ನು ತಿಳಿಸಿಕೊಡುತ್ತದೆ. ಹಾಗೆಯೇ ಬೇವು – ಬೆಲ್ಲದ ಮಿಶ್ರಣವನ್ನು ತಿನ್ನುವುದರಿಂದ ನಮಗೆ ಅಪಾರ ಪ್ರಯೋಜನಗಳಿವೆ.

ಬೇವು ಸೊಪ್ಪು ಸೇವನೆಯಿಂದ ನಮ್ಮ ದೇಹದೊಳಗಿರುವ ಕೆಟ್ಟ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಬೇವು ನಮ್ಮ ಆಯುರ್ವೇದದಲ್ಲಿ ಅತೀಹೆಚ್ಚು ಔಷಧೀಯ ಗುಣಗ ಳನ್ನು ಹೊಂದಿರುವ ವಸ್ತುವಾಗಿದೆ. ಹಾಗೇ ಬೆಲ್ಲವೂ ಸಹ ಕ್ಯಾಲ್ಸಿಯಂ ಮೆಗ್ನಿàಷಿಯಂ ಅಂಶಗಳನ್ನು ಹೆಚ್ಚಾಗಿ ಹೊಂದಿದ್ದು, ನಮ್ಮ ದೇಹದ ಉಷ್ಣಾಂಶವನ್ನು ಸುಸ್ಥಿತಿಯಲ್ಲಿಟ್ಟು ನಮ್ಮ ಆರೋಗ್ಯವನ್ನೂ ಸುಸ್ಥಿರವಾಗಿ ಕಾಪಾಡಿಕೊಳ್ಳಲು ಉತ್ತಮ ಔಷಧವಾಗಿದೆ.

ಹಬ್ಬ ಎಂದರೆ ಏನು ಸಡಗರ ಏನು ಸಂಭ್ರಮ. ಮನೆಯ ಬಾಗಿಲಿಗೆ ಮಾವು ಬೇವಿನ ತಳಿರು ತೋರಣದ ಸಿಂಗಾರ, ಬಾಗಿಲ ಮುಂದೆ ಅಲಂಕೃತಗೊಂಡ ರಂಗೋಲಿ, ತಿನ್ನಲು ಸಿಹಿತಿನಿಸುಗಳ ತಯಾರಿ. ಅದರಲ್ಲೂ ಒಬ್ಬಟ್ಟಿನ ಊಟ ವಿಶೇಷವಾದುದು. ಯುಗಾದಿಯು ಮನೆ ಮಂದಿ ಬಂಧು ಬಳಗದವರೆಲ್ಲ ಒಟ್ಟಾಗಿ ಸೇರಿ ಸಂತಸದಿಂದ ಆಚರಿಸುವ ಹಬ್ಬವಾಗಿದೆ.

ಇಂದಿನ ಆಧುನಿಕತೆ ಬದುಕಲ್ಲಿ ಜನರು ಒಟ್ಟಾಗಿ ಸೇರಿ ಹಬ್ಬ ಆಚರಿಸುವಲ್ಲಿ ವಿಫ‌ಲರಾಗುತ್ತಿದ್ದಾರೆ. ಹಬ್ಬದ ನೆಪದÇÉಾದರೂ ಬಂಧು ಬಾಂಧವರು ಒಟ್ಟಿಗೆ ಸೇರೋಣ ಸಂತಸವ ಹಂಚಿಕೊಳ್ಳೋಣ. ಮನದ ನೋವು ಸಂಕಟಗಳನ್ನು ಮರೆತು ಒಂದಾಗಿ ಬೆರೆತು ಸಂತಸದಲ್ಲಿ ಮಿಂದು ಏಳ್ಳೋಣ.

ಯುಗಾದಿ ಮತ್ತೆ ಮತ್ತೆ ಬರುತಿರಲಿ ಸಡಗರವ ಹೊತ್ತು ಹೊತ್ತು ತರುತಿರಲಿ. ಹೊಸ ವರುಷವು ಎಲ್ಲರಲ್ಲೂ ಹೊಸ ತನವನ್ನು ತಂದು ಹೊಸ ದಾರಿಗೆ ಹೊಸ ಯಶಸ್ಸಿಗೆ ಮುನ್ನುಡಿ ಬರೆಯುವಂತಾಗಲಿ.

-ಭಾಗ್ಯ ಜೆ.

ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next