Advertisement

ಈ ವರ್ಷವೂ ತಪ್ಪದ ಕುಡಿಯುವ ನೀರಿನ ಗೋಳು

11:19 AM Mar 22, 2020 | mahesh |

ಕಳೆದ ಬೇಸಗೆಯಲ್ಲಿ ತೀವ್ರವಾಗಿ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ “ಉದಯವಾಣಿ’ಯು ಭೇಟಿ ಕೊಟ್ಟು, “ಜೀವಜಲ’ ಎನ್ನುವ ಸರಣಿಯಡಿ ಸಾಕ್ಷಾತ್‌ ವರದಿಗಳನ್ನು ಪ್ರಕಟಿಸಿತ್ತು. ಈ ಬಾರಿಯ ಬೇಸಗೆಯಲ್ಲಿ ನೀರಿನ ಸಮಸ್ಯೆಯ ನಿವಾರಣೆಗೆ ಸ್ಥಳೀಯ ಪಂಚಾಯತ್‌ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವೆಲ್ಲ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದಾರೆ? ಮುಂದೆ ಆಗಬೇಕಾದ ಪ್ರಮುಖ ಕ್ರಮಗಳೆಲ್ಲದರ ಕುರಿತಾದ ಸರಣಿ ಇದು.

Advertisement

ಸಿದ್ದಾಪುರ: ಇಲ್ಲಿನ ಗ್ರಾ.ಪಂ.ನ ಹಲವು ಭಾಗಗಳಲ್ಲಿ ನೀರಿನ ಸಮಸ್ಯೆ ಈ ವರ್ಷವೂ ಭಿನ್ನವಾಗಿಯೇನಿಲ್ಲ. ಕುಡಿಯುವ ನೀರಿನ ಸಮರ್ಥ ಪೂರೈಕೆಗಾಗಿ ಅನೇಕ ಯೋಜನೆಗಳನ್ನು ಹಾಕಿಕೊಂಡರೂ, ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬರಾಜು ಮಾಡಬೇಕಾದ ಲಕ್ಷಣಗಳು ಗೋಚರಿಸುತ್ತಿವೆ.

ನೀರಿನ ಅಭಾವವಿರುವ ಪ್ರದೇಶಗಳು
ಜನತಾ ಕಾಲೋನಿ, ಜನ್ಸಾಲೆ, ಸೋಣು, ತಾರೆಕೊಡ್ಲುಗಳಲ್ಲಿ ನೀರಿನ ಅಭಾವ ಹೆಚ್ಚು. ಬೇಸಗೆಯಲ್ಲಿ ಇಲ್ಲಿನ ನಿವಾಸಿಗಳು ಕಷ್ಟಪಡುತ್ತಾರೆ. ಇಲ್ಲಿ ಪಂಚಾಯತ್‌ನಿಂದ ನಿರ್ಮಿಸಲಾದ ಬಾವಿ, ಕೊಳವೆ ಬಾವಿ ಇದ್ದರೂ, ಎಪ್ರಿಲ್‌-ಮೇ ತಿಂಗಳಲ್ಲಿ ಅಂತರ್ಜಲ ಕಡಿಮೆಯಾಗಿ ನೀರಿನ ಸಮಸ್ಯೆ ಕಾಡುತ್ತದೆ. ಇದರಿಂದ ಕೊನೆಗೆ ಟ್ಯಾಂಕರ್‌ ನೀರು ಗತಿಯಾಗಿದೆ.

ಸಮಸ್ಯೆಗಳು
ಗ್ರಾ.ಪಂ. ವ್ಯಾಪ್ತಿಯಲ್ಲಿ ಬೇಕಾಗುವಷ್ಟು ನೀರಿನ ವ್ಯವಸ್ಥೆ ಇದೆ. ಆದರೆ ಅದರ ನಿರ್ವಹಣೆ ಮತ್ತು ಬಳಕೆಯಲ್ಲಿ ಪಂಚಾಯತ್‌ ಎಡವುತ್ತಿದೆ. ಅನೇಕ ಕಡೆಗಳಲ್ಲಿ ಕೊಳವೆ ಬಾವಿಗಳ ನಿರ್ವಹಣೆ ಸಮರ್ಪಕವಾಗಿಲ್ಲ. ಅಲ್ಲಲ್ಲಿ ನೀರಿನ ಪೈಪ್‌ ಲೈನ್‌ಗಳು ಓಡೆದು, ನೀರು ಪೊಲಾಗುತ್ತಿವೆ. ಬಾವಿ ನಿರ್ವಹಣೆಯೂ ಸರಿಯಾಗಿಲ್ಲ. ಮನೆಗಳಿಗೆ ಮೀಟರ್‌ ಅಳವಡಿಸಿಲ್ಲ.
ಕೆಲವೊಂದು ಕಡೆಗಳಲ್ಲಿ ಪಂಚಾಯತ್‌ ಸರಬರಾಜು ಮಾಡುವ ನೀರನ್ನು ತೋಟಕ್ಕೆ, ಮನೆ ಬಾವಿ ತುಂಬಿಸಲು ಬಳಸಲಾಗುತ್ತಿದೆ ಎಂಬ ಆರೋಪವಿದೆ. ಇದರಿಂದಲೂ ಕೃತಕ ನೀರಿನ ಅಭಾವ ಉಂಟಾಗುತ್ತಿದೆ.

ನೀರಿನ ಅಭಾವ:
ಕೈಗೊಳ್ಳಬೇಕಾದ ಕ್ರಮವೇನು?
ನೀರಿನ ಸಮಸ್ಯೆ ಸರಿಪಡಿಸಲು ಶಾಶ್ವತ ಪರಿಹಾರ ಅಗತ್ಯ. ಸಿದ್ದಾಪುರ ಕಾಶಿಕಲ್ಲು ಕೆರೆಗೆ ವಾರಾಹಿ ನೀರು ಹಾಯಿಸಬೇಕಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಾಕಾರವಾಗಬೇಕು. ಗ್ರಾಮದ ಸುತ್ತಲು ಹರಿಯುವ ನದಿಗಳಿಗೆ ವೆಂಟೆಂಡ್‌ ಡ್ಯಾಂ ನಿರ್ಮಾಣಗೊಳ್ಳಬೇಕು.
ಈ ಬೇಡಿಕೆಗಳು ಸಾಕಾರಗೊಂಡಲ್ಲಿ ಗ್ರಾಮದ ನೀರಿನ ಸಮಸ್ಯೆಗಳಿಗೆ ಸಂಪೂರ್ಣ ಮುಕ್ತಿ ಸಿಗಲಿದೆ.

Advertisement

ಸುತ್ತಲೂ ನೀರಿನ ಮೂಲಗಳಿದ್ದರೂ, ಬೇಸಗೆಯಲ್ಲಿ ನೀರಿಲ್ಲದೆ ಸಿದ್ದಾಪುರ ಪರಿತಪಿಸುತ್ತಿದೆ. ಜಲಮೂಲಗಳ ಸಮರ್ಥ ನಿರ್ವಹಣೆ, ಅಂತರ್ಜಲ ಮಟ್ಟ ಹೆಚ್ಚಿಸಲು ಪೂರಕ ಕ್ರಮಗಳಿಂದ ಇಲ್ಲಿನ ನೀರಿನ ಸಮಸ್ಯೆ ಬಗೆಹರಿಸಬಹುದಾಗಿದೆ.

ಲಕ್ಷಗಟ್ಟಲೆ ರೂ. ವೆಚ್ಚ
ನೀರಿಗಾಗಿ ಪಂಚಾಯತ್‌ ವರ್ಷವೂ ಲಕ್ಷಗಟ್ಟಲೆ ರೂ. ವ್ಯಯಿಸುತ್ತಿದೆ. 2017-18ನೇ ಸಾಲಿನಲ್ಲಿ ಟ್ಯಾಂಕರ್‌ ನೀರು ಸರಬರಾಜಿಗೆ 5.92 ಲಕ್ಷ ರೂ. ವೆಚ್ಚಮಾಡಲಾಗಿದೆ. 2018-19ನೇ ಸಾಲಿನಲ್ಲಿ 7 ಲಕ್ಷ ರೂ. ವೆಚ್ಚ ಮಾಡಲಾಗಿದೆ.

ಯೋಜನೆಗಳು ಜಾರಿಯಲ್ಲಿ
ಹೊಳೆ ಶಂಕರನಾರಾಯಣ ರಸ್ತೆಯ ಹತ್ತಿರ ಜಿ.ಪಂ. ನಿಧಿಯಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ನೆಲದಡಿ ನೀರಿನ ಟ್ಯಾಂಕ್‌ ನಿರ್ಮಿಸಲು ಟೆಂಡರ್‌ ಆಗಿದೆ. ಪೈಪ್‌ ಲೈನ್‌ಗಾಗಿ 24 ಲಕ್ಷ ರೂ. ಮೀಸಲಿರಿಸಲಾಗಿದೆ. ಇದರಿಂದ ಗ್ರಾಮದ ನೀರಿನ ಸಮಸ್ಯೆ ಬಗೆಹರಿಯಲಿದೆ.
-ರವೀಂದ್ರ ರಾವ್‌, ಪಿಡಿಒ

ಸತೀಶ ಆಚಾರ್‌ ಉಳ್ಳೂರು

Advertisement

Udayavani is now on Telegram. Click here to join our channel and stay updated with the latest news.

Next