Advertisement

ನಿರೀಕ್ಷೆಯಷ್ಟು ಅಭಿವೃದ್ಧಿಗೊಂಡಿಲ್ಲ ಈ ವಾರ್ಡ್‌!

10:07 PM Oct 04, 2019 | mahesh |

ಮಹಾನಗರ: ಒಂದು ಕಾಲದಲ್ಲಿ ಕುದುರೆ ಗಾಡಿಗಳ ಚೌಕವಾಗಿದ್ದ ಮಣ್ಣಗುಡ್ಡ ದಲ್ಲಿಂದು(ಗುರ್ಜಿ) ಐಷಾರಾಮಿ ಗಾಡಿಗಳು ಓಡಾಡುತ್ತಿವೆ. ಕ್ರೀಡಾಂಗಣ, ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಕ್ಷೇತ್ರಗಳು, ಆಸ್ಪತ್ರೆಗಳು ಸಹಿತ ಉತ್ತಮ ಮೂಲಸೌಕರ್ಯಗಳನ್ನು ಹೊಂದುವ ಮೂಲಕ ಮಂಗಳೂರಿನ ಪ್ರತಿಷ್ಠಿತ ವಾರ್ಡ್‌ಗಳ ಪೈಕಿ ಒಂದಾಗಿ ಗುರುತಿಸಿಕೊಂಡಿದೆ ಮಣ್ಣಗುಡ್ಡ.

Advertisement

ಈ ವಾರ್ಡ್‌ನ ಪ್ರಮುಖ ಜಂಕ್ಷನ್‌ಮಣ್ಣಗುಡ್ಡದಲ್ಲಿ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಒಂದೆಡೆ ಕುದ್ರೋಳಿ, ಉರ್ವ ಮಾರುಕಟ್ಟೆ, ಲೇಡಿಹಿಲ್‌, ಲಾಲ್‌ಬಾಗ್‌ನಿಂದ ಸೇರಿ ಒಟ್ಟಾರೆ ನಾಲ್ಕು ಕಡೆಯಿಂದಲೂ ರಸ್ತೆ ಸಂಪರ್ಕವಿದ್ದು, ಮುನ್ನೆಚ್ಚರಿಕೆ ದೃಷ್ಟಿಯಿಂದ ಯಾವುದೇ ವೃತ್ತ ಗಳಿಲ್ಲ. ಇದರಿಂದಾಗಿ ವಾಹನ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಮಿಷನ್‌ ಗೋರಿ ರಸ್ತೆಯ ವಿಸ್ತರಣೆ, ಒಳಚರಂಡಿ, ಫುಟ್‌ಪಾತ್‌ ಕೆಲಸಗಳು ಬಾಕಿ ಇವೆ. ಕೆನರಾ ಹೈಸ್ಕೂಲ್‌- ಲಾಲ್‌ಬಾಗ್‌ ರಸ್ತೆ ಚರಂಡಿ, ಫುಟ್‌ಪಾತ್‌ ಕಾಮಗಾರಿಗಳು ನಡೆಯಬೇಕಿದೆ. ಮಣ್ಣಗುಡ್ಡೆಯ ಸ್ಥಳೀಯ ನಿವಾಸಿಯೊಬ್ಬರು ಹೇಳುವ ಪ್ರಕಾರ, ಮಣ್ಣಗುಡ್ಡೆ ರಸ್ತೆಯ ಅಕ್ಕ-ಪಕ್ಕದಲ್ಲಿ ಬೀದಿ ವ್ಯಾಪಾರಿಗಳು ತಳ್ಳು ಗಾಡಿಗಳನ್ನು ಇಟ್ಟಿದ್ದಾರೆ. ವ್ಯಾಪಾರಿಗಳು ಗಾಡಿಯಲ್ಲಿ ಉಳಿದ ತ್ಯಾಜ್ಯವನ್ನು ಅಲ್ಲೇ ಬೀಳಿಸುತ್ತಿದ್ದು, ಸ್ವತ್ಛತೆ ಕಾಪಾಡುತ್ತಿಲ್ಲ ಎಂದು ದೂರಿದ್ದಾರೆ.

ನಗರದಲ್ಲಿ ಜೋರಾಗಿ ಮಳೆ ಸುರಿದರೆ ಈ ವಾರ್ಡ್‌ನ
ವಿಶಾಲ್‌ ಆಸ್ಪತ್ರೆ ಪಕ್ಕದ ರಸ್ತೆಯಲ್ಲಿ ಕೃತಕ ನೆರೆ ತುಂಬಿ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ. ಈ ಭಾಗದಲ್ಲಿ ಒಳಚರಂಡಿ ವ್ಯವಸ್ಥೆ ಅಲ್ಲದೆ ನೀರು ಹರಿಯಲು ಸಮರ್ಪಕ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣ.

ವಿಶಾಲ್‌ ಆಸ್ಪತ್ರೆಯ ಬಳಿ ಎಳನೀರು ಮಾರುವವರೊಬ್ಬರನ್ನು ವಾರ್ಡ್‌ನ ಬಗ್ಗೆ “ಸುದಿನ’ ಮಾತನಾಡಿಸಿದಾಗ “ವಾರ್ಡ್‌ನಲ್ಲಿ ರಸ್ತೆಗಳ ಕಾಮಗಾರಿ ನಡೆಯುತ್ತಿದೆ. ಹೆಚ್ಚಿನ ರಸ್ತೆಗಳಿಗೆ ಕಾಂಕ್ರೀಟ್‌ ಹಾಕಲಾಗಿದೆ. ಆದರೆ ನೂತನವಾಗಿ ನಿರ್ಮಿಸಿದ ಉರ್ವ ಮಾರುಕಟ್ಟೆ ಉಪಯೋಗವಾಗುತ್ತಿಲ್ಲ. ಈ ಬಗ್ಗೆ ಗಮನಹರಿಸಬೇಕಿದೆ’ ಎನ್ನುತ್ತಾರೆ.

ಪ್ರಮುಖ ಕಾಮಗಾರಿ
– ವಿಶಾಲ್‌ ನರ್ಸಿಂಗ್‌ ಹೋಂ ಬಳಿ ಒಳಚರಂಡಿ ಕಾಮಗಾರಿ
– ಭಗವತಿ ನಗರದ ಬಳಿ ಬೃಹತ್‌ ಚರಂಡಿಗೆ ತಡೆಗೋಡೆ
– ಭಗವತಿ ನಗರ ಕಟ್ಟೆಪುಣಿ ಬಳಿ ಎಸ್‌ಸಿ ಎಸ್‌ಟಿ ಮನೆ ಬಳಿ ಚರಂಡಿಗೆ ತಡೆಗೋಡೆ ಮತ್ತು ಅಲ್ಲಿನ ಮನೆಗೆ ವಿದ್ಯುತ್‌ ಸಂಪರ್ಕ
– ಬರ್ಕೆ ಬ್ರಿಡ್ಜ್ನಿಂದ ಕಾಂತರಾಜ ಶೆಟ್ಟಿ ಪ್ರದೇಶದವರೆಗಿನ ಚರಂಡಿಗೆ ತಡೆಗೋಡೆ
– ಗಾಂಧೀನಗರ ಅಂಚೆಕಚೇರಿ ಮುಂಭಾಗ ಇಂಟರ್‌ಲಾಕ್‌ ಅಳವಡಿಕೆ
– ಮಿಶನ್‌ಗೊರಿ ರಸ್ತೆಯ ವಿಸ್ತರಣೆ, ಮಿಶನ್‌ಗೊರಿ ರಸ್ತೆಯ ಕಿರು ಸೇತುವೆ ಬಳಿ ಚರಂಡಿಗೆ ತಡೆಗೋಡೆ ನಿರ್ಮಾಣ
– ಗಾಂಧೀನಗರ ಪಾರ್ಕ್‌ನ ಹಿಂಭಾಗ ಆವರಣ ಗೋಡೆ ನಿರ್ಮಾಣ
– ಉರ್ವ ಮಾರುಕಟ್ಟೆ ನವೀಕರಣ

Advertisement

ಉರ್ವ ಮಾರುಕಟ್ಟೆ ಉಪಯೋಗಿಸುವವರಿಲ್ಲ
ಜನವರಿ ತಿಂಗಳಿನಲ್ಲಿ ಉದ್ಘಾಟನೆಗೊಂಡ ಉರ್ವ ಮಾರುಕಟ್ಟೆಯ ಹೊಸ ಕಟ್ಟಡ ಈಗ ಸದ್ಬಳಕೆಯಾಗುತ್ತಿಲ್ಲ. 12.29 ಕೋಟಿ ರೂ. ನಲ್ಲಿ ನಿರ್ಮಿಸಿದ ಸಂಕೀರ್ಣದ ಮಳಿಗೆಗಳು ಏಲಂ ಮಾಡದೆ ಹಾಗೇ ಇವೆ. ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಮನಪಾ ಅಧೀನದಲ್ಲಿದ್ದ ಮಾರುಕಟ್ಟೆಯನ್ನು ಮುಡಾಕ್ಕೆ ಹಸ್ತಾಂತರಿಸಲಾಗಿತ್ತು. ಅನೇಕ ತಿಂಗಳು ಕಳೆದರೂ, ವಾಣಿಜ್ಯ ಸಂಕೀರ್ಣದ ಕೊಠಡಿಗಳನ್ನು ಉಪಯೋಗಕ್ಕೆ ಬಿಡದಿರುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಈ ಬಗ್ಗೆ ಪಾಲಿಕೆ ನಿ.ಪೂ. ಸದಸ್ಯೆ ಜಯಂತಿ ಆಚಾರ್‌ ಪ್ರತಿಕ್ರಿಯಿಸಿ, ಉರ್ವ ಮಾರುಕಟ್ಟೆ ಹೊಸ ಕಟ್ಟಡ ಮೂಡಾ ಅಧೀನದಲ್ಲಿದೆ. ಈ ಬಗ್ಗೆ ಶಾಸಕರು, ಜಿಲ್ಲಾಧಿಕಾರಿಗಳ ಬಳಿ ಚರ್ಚೆ ನಡೆಸಿದ್ದು ಸದ್ಯದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದಿದ್ದಾರೆ.

ಮಣ್ಣಗುಡ್ಡ ವಾರ್ಡ್‌
ವಾರ್ಡ್‌ನ ಭೌಗೋಳಿಕ ವ್ಯಾಪ್ತಿ: ಲೇಡಿಹಿಲ್‌-ಮಠದ ಕಣಿ ರಸ್ತೆ, ಬೊಕ್ಕಪಟ್ಣ ಶಾಲೆಯ ಒಳಗಡೆ, ದುರ್ಗಾಮಹಲ್‌ ಎದುರು ಭಾಗ, ವಿಶಾಲ್‌ ನರ್ಸಿಂಗ್‌ ಹೋಂ ರಸ್ತೆ, ಜನತಾ ಡಿಲಕ್ಸ್‌ ರಸ್ತೆಯ ಅರ್ಧ ಭಾಗ, ರತ್ನಾಕರ ಲೇಔಟ್‌ ಮುಂತಾದ ಪ್ರದೇಶ.

ಒಟ್ಟು ಮತದಾರರು 8000
ನಿಕಟಪೂರ್ವ ಕಾರ್ಪೊರೇಟರ್‌- ಜಯಂತಿ ಆಚಾರ್‌ (ಬಿಜೆಪಿ)


ವಿವಿಧ ಅಭಿವೃದ್ಧಿ ಕಾಮಗಾರಿ
ನಾನು ಪಾಲಿಕೆ ಸದಸ್ಯೆಯಾಗಿದ್ದ ಅವಧಿಯಲ್ಲಿ ಮಣ್ಣಗುಡ್ಡೆ ವಾರ್ಡ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ.
ಮುಂದಿನ ಅವಧಿಯಲ್ಲಿ ಯಾರೇ ಚುನಾ ವಣೆಯಲ್ಲಿ ಗೆದ್ದು ಬಂದರೂ ಈಗಾಗಲೇ ನಡೆಯುತ್ತಿರುವ ಕಾಮಗಾರಿಗಳನ್ನು ಮುಂದುವರಿಸಬೇಕು.
-ಜಯಂತಿ ಆಚಾರ್‌

- ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next