ಒಟ್ಟಾವಾ: ನಮ್ಮ ಹೃದಯ ಬಡಿತ ಒಂದೈದು ಸೆಕೆಂಡ್ ನಿಂತರೂ ನಾವು ಸಾಯುತ್ತೇವೆ. ಅಂಥದ್ದರಲ್ಲಿ 3 ಗಂಟೆ ಹೃದಯ ಬಡಿತವೇ ನಿಂತರೆ ಬದುಕಿ ಬರಲು ಸಾಧ್ಯವೇ? ಹೌದು ಎನ್ನುವ ಘಟನೆ ಕೆನಡಾದ ನೈಋತ್ಯ ಒಂಟಾರಿಯೊದ ಪೆಟ್ರೋಲಿಯಾದಲ್ಲಿ ನಡೆದಿರುವುದು ವರದಿಯಾಗಿದೆ.
ವೇಲಾನ್ ಸೌಂಡರ್ಸ್ ಎಂಬ 20 ತಿಂಗಳ ಮಗುವೊಂದು ಡೇ ಕೇರ್ ನಲ್ಲಿ ಆಡುತ್ತಿರುವಾಗ (ಜ.24 ರಂದು) ಸಿಮ್ಮಿಂಗ್ ಪೂಲ್ ಗೆ ಬಿದ್ದಿದ್ದಾನೆ. 5 ನಿಮಿಷ ನೀರಿನಲ್ಲೇ ಇದ್ದ ಮಗುವಿನ ದೇಹದೊಳಗೆ ಸಂಪೂರ್ಣ ನೀರು ತುಂಬಿಕೊಂಡು, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದೆ. ಆ ಬಳಿಕ ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ದಾಖಲಾದ ಆಸ್ಪತ್ರೆಯಲ್ಲಿ ಮಗುವಿದ್ದ ಸ್ಥಿತಿಗೆ ನೀಡಲು ಸೂಕ್ತವಾದ ಸೌಲಭ್ಯ, ಹಾಗೂ ವೈದ್ಯರು ಇರಲಿಲ್ಲವಾಗಿತ್ತು. ನರ್ಸ್ ನಿಂದ ಹಿಡಿದು, ಯಾರೆಲ್ಲ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಪ್ರಮುಖರಿದ್ದರೋ ಅವರೆಲ್ಲರೂ, ಮಗುವಿನ ಚಿಕಿತ್ಸೆಗೆ ನೆರವಾದರು. ಹೃದಯ ಬಡಿತವೇ ನಿಂತಿದ್ದ ವೇಳೆ 3 ಗಂಟೆ ಪರ್ಯಾಯವಾಗಿ ಮಗುವಿಗೆ ಸಿಪಿಆರ್ ನೀಡಿದ್ದಾರೆ. ಲಂಡನ್ ನಿಂದ ವೈದ್ಯರ ತಂಡವೊಂದು, ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೆ ಮಾರ್ಗದರ್ಶನ ನೀಡುತ್ತಿತ್ತು. ಸಿಪಿಆರ್ ಕೊಟ್ಟ ಪರಿಣಾಮ 20 ತಿಂಗಳ ಮಗು ಕಣ್ಣು ತೆರೆದು ಉಸಿರಾಟವನ್ನು ಆರಂಭಿಸಿದೆ ಎಂದು ವರದಿ ತಿಳಿಸಿದೆ.
ಫೆ.6 ರಂದು ವೇಲಾನ್ ಸೌಂಡರ್ಸ್ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾನೆ. ಆ ದಿನ ಪ್ರತಿಯೊಬ್ಬರು ಒಬ್ಬರಿಗೆ ಒಬ್ಬರು ಸಹಾಯವಾಗಿ ಮಗುವಿನ ಜೀವ ಉಳಿಸಲು ನೆರವಾಗಿದ್ದರಿಂದ ಇಂದು ವೇಲಾನ್ ಸೌಂಡರ್ಸ್ ಬದುಕಿದ್ದಾನೆ ಎಂದು ವೈದ್ಯರು ಹೇಳುತ್ತಾರೆ.
ಅಪ್ಪ – ಅಮ್ಮ ತಮ್ಮ ಮಗುವಿನೊಂದಿಗೆ ಸಂತಸದ ಕಾಲ ಕ್ಷಣವನ್ನು ಕಳೆಯುತ್ತಿದ್ದಾರೆ.