Advertisement

ಈ ಬಾರಿ ಅತ್ಯಾಧುನಿಕ ಇವಿಎಂ ಬಳಕೆ

09:29 PM Sep 22, 2019 | Lakshmi GovindaRaju |

ಹುಣಸೂರು: ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಎಂ-3 ಇವಿಎಂ ಯಂತ್ರಗಳನ್ನು ಬಳಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್‌ ತಿಳಿಸಿದರು.

Advertisement

ನಗರದ ಚುನಾವಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವಿವಿಧ ರಾಜಕೀಯ ಪಕ್ಷಗಳ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆ ವೇಳೆ ಬಳಸಿದ್ದ ಎಂ-2 ಮಾದರಿ ಯಂತ್ರದಲ್ಲಿ 64 ಅಭ್ಯರ್ಥಿಗಳ ಹೆಸರನ್ನು ಮಾತ್ರ ಸೇರಿಸಬಹುದಿತ್ತು.

ಇದೀಗ ಎಂ-3 ಇವಿಎಂ ಯಂತ್ರ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು, ಹ್ಯಾಂಗ್‌ ಆಗುವುದಿಲ್ಲ. ವಿಶೇಷವೆಂದರೆ ಈ ಇವಿಎಂನಲ್ಲಿ 200ಕ್ಕೂ ಹೆಚ್ಚು ಹೆಸರುಗಳನ್ನು ನಮೂದಿಸಬಹುದಾಗಿದೆ. ಯಾವುದೇ ಸಣ್ಣಪುಟ್ಟ ಸಮಸ್ಯೆಗಳು ಬಾರದಂತೆ ಇವಿಎಂ ಯಂತ್ರ ಅಭಿವೃದ್ಧಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮತಪಟ್ಟಿಗೆ ಸೇರ್ಪಡೆಗೆ ಅವಕಾಶ: ಕಳೆದ ಲೋಕಸಭಾ ಚುನಾವಣೆಯಲ್ಲಿ ಬಳಕೆಯಾಗಿದ್ದ ಮತದಾರರ ಪಟ್ಟಿಯನ್ನೇ ಈ ಬಾರಿಯೂ ಬಳಸಲಾಗುವುದು. ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ನಾಮಪತ್ರ ಸಲ್ಲಿಸುವ ಅಂತಿಮ ದಿನದವರೆಗೂ ಮತಪಟ್ಟಿಯಲ್ಲಿ ಸೇರಿಸಲು ಅರ್ಜಿ ಸಲ್ಲಿಸಬಹುದು. ಆದರೆ ಡಿಲೀಟ್‌ ಇನ್ನಿತರ ಯಾವುದೇ ಕಾರ್ಯಕ್ಕೆ ಅವಕಾಶವಿಲ್ಲ ಎಂದರು.

ಸೂಕ್ಷ್ಮವೆಂದು ಘೋಷಿಸಬೇಡಿ: ಜೆಡಿಎಸ್‌ ಮುಖಂಡ, ವಕೀಲ ಪುಟ್ಟರಾಜು ಮಾತನಾಡಿ, ಹುಣಸೂರು ವಿಧಾನಸಭಾ ಕ್ಷೇತ್ರವನ್ನು ಸಂಪೂರ್ಣ ಸೂಕ್ಷ್ಮ ಪ್ರದೇಶವೆಂದು ಘೋಷಿಸಬಾರದು. ಇದರಿಂದ ಸಹಜ ಮತದಾನಕ್ಕೆ ತೊಂದರೆಯಾಗುತ್ತದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅಭಿರಾಂ, ಸೆಕ್ಟರ್‌ ಅಧಿಕಾರಿ ಹಾಗೂ ಪೊಲೀಸರು ಪ್ರತಿಮತಗಟ್ಟೆಯ ಕುರಿತಂತೆ ಮಾಹಿತಿ ಪಡೆದು, ಪೊಲೀಸರ ವರದಿಯನ್ವಯ ಸೂಕ್ಷ್ಮ, ಅತಿಸೂಕ್ಷ್ಮ ಎಂದು ಘೋಷಿಸಲಾಗುವುದು ಎಂದರು.

Advertisement

ಸ್ಟ್ರಾಂಗ್‌ ರೂಂ ಸ್ಥಳ ಪರಿಶೀಲನೆ:ನಗರದ ಮುನೇಶ್ವರ ಕಾವಲ್‌ ಮೈದಾನದ ಬಳಿಯ ನಗರಸಭೆಯ ನೂತನ ಕಟ್ಟಡದ ನೆಲ ಅಂತಸ್ತಿನಲ್ಲಿ ಸ್ಥಾಪಿಸಲಾಗಿರುವ ಸ್ಟ್ರಾಂಗ್‌ ರೂಂಗಳನ್ನು ಪರಿಶೀಲನೆ ನಡೆಸಿದರು.

ಇಂದಿನಿಂದ ನಾಮಪತ್ರ ಸಲ್ಲಿಕೆ: ಸೆ.23 ಸೋಮವಾರದಿಂದ ಸೆ.30ರ ವರೆಗೆ ನಾಮಪತ್ರ ಸಲ್ಲಿಕೆ, ಅಕ್ಟೋಬರ್‌ 1ಕ್ಕೆ ನಾಮಪತ್ರಗಳ ಪರಿಶೀಲನೆ, 3 ರಂದು ನಾಮಪತ್ರ ವಾಪಸ್‌ಗೆ ಕಡೇದಿನ, ಅ.21 ಸೋಮವಾರ ಮತದಾನ ನಡೆಯಲಿದ್ದು, ಅ.24ಕ್ಕೆ ಫಲಿತಾಂಶ ಪ್ರಕಟವಾಗಲಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್‌, ಉಪವಿಭಾಗಾಧಿಕಾರಿ ಬಿ.ಎನ್‌.ವೀಣಾ, ತಹಶೀಲ್ದಾರ್‌ ಬಸವರಾಜು, ಡಿವೈಎಸ್ಪಿ ಕೆ.ಎಸ್‌.ಸುಂದರರಾಜ್‌, ವೃತ್ತ ನಿರೀಕ್ಷಕ ಕೆ.ಸಿ.ಪೂವಯ್ಯ ಹಾಗೂ ನಗರ ಕಾಂಗ್ರೆಸ್‌ ಅಧ್ಯಕ್ಷ ಶಿವಯ್ಯ, ಅಸ್ವಾಳ್‌ ಕೆಂಪೇಗೌಡ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next