Advertisement

ಈ ಬಾರಿ ದ.ಕ., ಉಡುಪಿ ಜಿಲ್ಲೆಯ 33 ಶಾಲೆಗಳಲ್ಲಿ  ತುಳು ಪಠ್ಯ ಕಲಿಕೆ

03:45 AM Jul 10, 2017 | Harsha Rao |

ಪುತ್ತೂರು: ವರ್ಷದಿಂದ ವರ್ಷಕ್ಕೆ ತುಳು ಪಠ್ಯ ಕಲಿಕೆಯತ್ತ ಆಸಕ್ತಿ ತೋರುವ ಶಾಲೆಗಳ ಮತ್ತು ಮಕ್ಕಳ ಸಂಖ್ಯೆ ಏರುತ್ತಿದೆ. 

Advertisement

ಈ ಬಾರಿ ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ 33 ಶಾಲೆಗಳಲ್ಲಿ ತುಳು ಪಠ್ಯವನ್ನು ತೃತೀಯ ಭಾಷೆಯನ್ನಾಗಿ ಬೋಧಿಸಲಾಗುತ್ತದೆ. ಒಟ್ಟು 13 ಶಾಲೆಗಳು ಈ ಬಾರಿ ಹೊಸದಾಗಿ ಸೇರಿವೆ. 

ಉಡುಪಿ-ದ.ಕ. ಜಿಲ್ಲೆ
ಉಡುಪಿ ಜಿಲ್ಲೆಯಲ್ಲಿ ಕಳೆದ ಬಾರಿ 1 ಶಾಲೆಯಲ್ಲಿ ತುಳು ಪಠ್ಯ ಕಲಿಕೆ ಇತ್ತು. ಈ ಬಾರಿ 3ಕ್ಕೆ ಏರಿದೆ. ದ.ಕ. ಜಿಲ್ಲೆಯಲ್ಲಿ 19 ಶಾಲೆಗಳಿದ್ದವು. ಈ ಬಾರಿ 30ಕ್ಕೇರಿದೆ. 

ಉಡುಪಿ-2, ದ.ಕ. ಜಿಲ್ಲೆಯ ಮಂಗಳೂರು- 2, ಬೆಳ್ತಂಗಡಿ-3, ಪುತ್ತೂರು- 3, ಬಂಟ್ವಾಳ-1, ಸುಳ್ಯದಲ್ಲಿ-2 ಶಾಲೆಗಳಲ್ಲಿ ಈ ಶೈಕ್ಷಣಿಕ ವರ್ಷದಿಂದ ತುಳು ಪಠ್ಯವನ್ನು ಬೋಧನೆಗೆ ಆಯ್ದುಕೊಳ್ಳಲಾಗಿದೆ.

ಹೊಸದಾಗಿ ಸೇರ್ಪಡೆಯಾದ ಶಾಲೆಗಳು
ಉಡುಪಿ ಜಿಲ್ಲೆಯಲ್ಲಿ ಉಚ್ಚಿಲ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆ, ಪಡುಬೆಳ್ಳೆ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ತಾಲೂಕಿನಲ್ಲಿ ಕೋಡಿ ಬೈಲು ಬೆಸೆಂಟ್‌ ಸ್ಕೂಲ್‌, ಹರೇಕಳ ರಾಮಕೃಷ್ಣ ಪ್ರೌಢಶಾಲೆ, ಬೆಳ್ತಂಗಡಿ ತಾಲೂಕಿನಲ್ಲಿ ಎಸ್‌ಡಿಎಂ ಪ್ರೌಢಶಾಲೆ ಧರ್ಮಸ್ಥಳ, ಎಸ್‌ಡಿಎಂ ಹೈಸ್ಕೂಲ್‌ ಉಜಿರೆ, ಬದನಾಜೆ ಸರಕಾರಿ ಪ್ರೌಢಶಾಲೆ, ಪುತ್ತೂರು ತಾಲೂಕಿನಲ್ಲಿ ನೂಜಿಬಾಳ್ತಿಲ ಬೆಥನಿ ಪ್ರೌಢಶಾಲೆ, ಕೊಂಬೆಟ್ಟು ಶ್ರೀ ರಾಮಕೃಷ್ಣ ಪ್ರೌಢ ಶಾಲೆ, ದೋಳ್ಪಾಡಿ ಸರಕಾರಿ ಪ್ರೌಢಶಾಲೆ, ಬಂಟ್ವಾಳ ತಾಲೂಕಿನಲ್ಲಿ ಕರ್ನಾಟಕ ಹೈಸ್ಕೂಲು ಮಾಣಿ, ಸುಳ್ಯ ತಾಲೂಕಿನಲ್ಲಿ  ಕೆ.ಎಸ್‌. ಗೌಡ ಪ್ರೌಢಶಾಲೆ ನಿಂತಿಕಲ್ಲು, ಪಂಜ ಸರಕಾರಿ ಪ್ರೌಢಶಾಲೆ ತುಳು ಪಠ್ಯ ಬೋಧಿಸಲು ಈ ಬಾರಿ ಹೊಸದಾಗಿ ಸೇರ್ಪಡೆಗೊಂಡ ಶಾಲೆಗಳು.

Advertisement

950ರಿಂದ 1,584ಕ್ಕೆ  ಏರಿಕೆ
ಕಳೆದ ವರ್ಷ ಉಭಯ ಜಿಲ್ಲೆಗಳ 20 ಶಾಲೆ ಗಳಲ್ಲಿ 950 ಮಕ್ಕಳಿದ್ದರು. ಈ ಬಾರಿ 33 ಶಾಲೆ ಗಳಲ್ಲಿ 1,584 ಮಕ್ಕಳು ಇದ್ದಾರೆ. ಇನ್ನೂ 4 ಶಾಲೆಗಳು ತುಳು ಕಲಿಕೆ ಕುರಿತಂತೆ ಆಸಕ್ತಿ ಹೊಂದಿವೆ.  ಖಾಸಗಿಯಾಗಿ ಪರೀಕ್ಷೆ ಬರೆಯುವವರೂ ತುಳು ಪಠ್ಯ ಆಯ್ಕೆಗೆ ಒಲವು ಹೊಂದಿದ್ದಾರೆ.

ತರಗತಿವಾರು ಅಂಕಿ-ಅಂಶದ ಪ್ರಕಾರ, 6ನೇ ತರಗತಿಯಲ್ಲಿ-97, 7ನೇ ತರಗತಿಯಲ್ಲಿ-126, 8ನೇ ತರಗತಿಯಲ್ಲಿ-418, 9ನೇ ತರಗತಿ ಯಲ್ಲಿ- 507, 10ನೇ ತರಗತಿಯಲ್ಲಿ-436 ವಿದ್ಯಾರ್ಥಿಗಳು ತುಳು ಪಠ್ಯವನ್ನು ತೃತೀಯ ಭಾಷೆಯನ್ನಾಗಿ ಆಯ್ದು  ಕೊಂಡಿದ್ದಾರೆ. ಒಟ್ಟು ಶಾಲೆಗಳ ಪೈಕಿ ತಾಲೂಕು ವಾರು ಅಂಕಿ-ಅಂಶದಂತೆ ಪುತ್ತೂರು- 15, ಸುಳ್ಯ – 4, ಬೆಳ್ತಂಗಡಿ-5, ಬಂಟ್ವಾಳ- 3, ಮಂಗಳೂರು-  3, ಉಡುಪಿಯಲ್ಲಿ 3 ಶಾಲೆಗಳು ಇವೆ.

ತೃತೀಯ ಭಾಷೆ
2010ರಲ್ಲಿ ತುಳು ಭಾಷೆಯನ್ನು ತೃತೀಯ ಭಾಷಾ ಪಠ್ಯವನ್ನಾಗಿ ಬೋಧನೆಗೆ ಬಳಸಲು ಸರಕಾರ ಆದೇಶ ನೀಡಿತ್ತು. ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ 6ರಿಂದ 10ನೇ ತರಗತಿ ತನಕ ತುಳು ಪಠ್ಯ ಬೋಧನೆಗೆ ಅವಕಾಶ ಕಲ್ಪಿಸಲಾಗಿತ್ತು. 2011ರಲ್ಲಿ ಮಂಗಳೂರಿನ ಉತ್ತರ ತಾಲೂಕಿನ ಪೊಂಪೈ ಶಾಲೆಯಲ್ಲಿ 11 ಮಕ್ಕಳು ತೃತೀಯ ಭಾಷೆಯನ್ನಾಗಿ ತುಳು ಆರಿಸಿಕೊಂಡಿದ್ದರು. ಇದು ತುಳು ಕಲಿಕೆಯ ಪ್ರಥಮ ಹೆಜ್ಜೆ.

ಸಂಖ್ಯೆ ಹೆಚ್ಚಳ
ಪ್ರತಿ ವರ್ಷದ ಅಂಕಿ-ಅಂಶ ಗಮನಿಸಿದರೆ ತುಳು ಪಠ್ಯದ ಬಗೆಗಿನ ಆಸಕ್ತಿ ಹೆಚ್ಚಾಗುತ್ತಿದೆ. ಆರಂಭದ ವರ್ಷದಲ್ಲಿ ಉತ್ತಮ ಪ್ರತಿಕ್ರಿಯೆ ಸಿಗದಿದ್ದರೂ ಈ ವರ್ಷ ಶಾಲೆಗಳೇ ತುಳು ಅಕಾಡೆಮಿಯನ್ನು ಸಂಪರ್ಕಿಸುತ್ತಿವೆ. ಇದು ಆಶಾದಾಯಕ ಬೆಳವಣಿಗೆ. ಕಳೆದ ವರ್ಷ 20ರಷ್ಟಿದ್ದ ಶಾಲಾ ಸಂಖ್ಯೆ ಈ ಬಾರಿ 33ಕ್ಕೆ ಏರಿದೆ. ಇನ್ನೂ ಕೆಲ ಶಾಲೆಗಳು ಆಸಕ್ತಿ ತೋರಿವೆ. ಪಠ್ಯ ಪುಸ್ತಕ ಬೇಕಿದ್ದರೆ, ಶಾಲೆಗಳು ಅಕಾಡೆಮಿಯನ್ನು ಸಂಪರ್ಕಿಸಬಹುದು. ಸರಬರಾಜಿಗೆ ಕ್ರಮ ಕೈಗೊಳ್ಳಲಾಗುವುದು.
– ಚಂದ್ರಹಾಸ ರೈ,
ರಿಜಿಸ್ಟ್ರಾರ್‌, ತುಳು ಅಕಾಡೆಮಿ

ಎಸೆಸೆಲ್ಸಿ ದುಪ್ಪಟ್ಟು…!
ನಾಲ್ಕು ವರ್ಷಗಳ ಲೆಕ್ಕಾಚಾರ ಪರಿಗಣಿಸಿದರೆ. ಈ ವರ್ಷ ಎಸೆಸೆಲ್ಸಿ ಯಲ್ಲಿ   ತುಳು ಪಠ್ಯ ಆಯ್ದು ಕೊಂಡ ವಿದ್ಯಾರ್ಥಿಗಳ ಸಂಖ್ಯೆ ದುಪ್ಪಟ್ಟಾಗಿದೆ. 2014- 15ರಲ್ಲಿ 18, 2015-16ರಲ್ಲಿ 25, 2016- 17ರಲ್ಲಿ 283 ಪರೀಕ್ಷೆ ಬರೆದಿದ್ದರು. 2017-18ರಲ್ಲಿ 436 ಮಂದಿ ಪರೀಕ್ಷೆ ಬರೆ ಯುವರು. ಕಳೆದ 3 ವರ್ಷಗಳಲ್ಲೂ  ಶೇ.100 ಫಲಿತಾಂಶ ದಾಖಲಾಗಿ ರುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next