Advertisement
ಕಳೆದ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಆರಂಭವಾಗುವ ಮೊದಲೇ ರಾಜ್ಯ ಸರ್ಕಾರ, ಅತಿಥಿ ಶಿಕ್ಷಕರ ನೇಮಕಾತಿಗೆ ಕ್ರಮ ವಹಿಸಿತ್ತು. ಎರಡು ಹಂತದಲ್ಲಿ 44 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ಶಿಕ್ಷಕರ ಕೊರತೆ ಸಮಸ್ಯೆಗೆ ಪರಿಹಾರ ಕಂಡು ಕೊಂಡಿತ್ತು. ಆದರೆ ಈ ಬಾರಿ ಈವರೆಗೂ ಅತಿಥಿ ಶಿಕ್ಷಕರ ನೇಮಕಾತಿ ವಿಚಾರವಾಗಿ ಯಾವುದೇ ಕ್ರಮ ಆಗಿಲ್ಲ. ಶಾಲಾರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದು ಅಷ್ಟರೊಳಗೇ ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದರೆ ಮಕ್ಕಳಿಗೆ ವರ್ಷಾರಂಭದಿಂದಲೇ ಗುಣಮಟ್ಟದ ಶೈಕ್ಷಣಿಕ ಚಟುವಟಿಕೆ ನಡೆಯಲು ಅವಕಾಶ ಮಾಡಿಕೊಡಬಹುದು ಎಂಬ ಆಶಾಭಾವ ಇಲಾಖೆಯಲ್ಲಿ ಗರಿಗೆದರಿದೆ.
ಕಳೆದ ಶೈಕ್ಷಣಿಕ ವರ್ಷದಲ್ಲಿ ಅತಿಥಿ ಶಿಕ್ಷಕರಾಗಿ ಕೆಲಸ ನಿರ್ವಹಿಸಿದವರ 10 ತಿಂಗಳ ಗುತ್ತಿಗೆ ಅವಧಿ ಮಾರ್ಚ್‌ನಲ್ಲಿಯೇ ಮುಕ್ತಾಯವಾಗಿದ್ದು ಹೊಸದಾಗಿ ಅತಿಥಿ ಶಿಕ್ಷಕರ ನೇಮಕ ಆಗಬೇಕಾಗಿದೆ. ಪ್ರಸ್ತುತ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ನಡೆಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆ-2ಕ್ಕೆ ಅಣಿಗೊಳಿಸುವ ಕಾರ್ಯ ನಡೆದಿದೆ. ಆದರೆ, ಈ ಪರಿಹಾರ ಬೋಧನೆಗೂ ಶಿಕ್ಷಕರ ಕೊರತೆ ಎದುರಾಗಿದೆ. ಹಲವು ಶಾಲೆಗಳಲ್ಲಿ ಮುಖ್ಯವಾಗಿ ಇಂಗ್ಲಿಷ್, ಹಿಂದಿ, ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಅತಿಥಿ ಶಿಕ್ಷಕರನ್ನೇ ಹೆಚ್ಚು ಅವಲಂಬಿಸಲಾಗಿದೆ. ಈಗ ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರೂ ಇಲ್ಲ, ಕಾಯಂ ಶಿಕ್ಷಕರೂ ಸಮರ್ಪಕ ಸಂಖ್ಯೆಯಲ್ಲಿ ಇಲ್ಲ ಎಂಬಂತಾಗಿದ್ದು ಪರಿಹಾರ ಬೋಧನೆ ಕುಂಠಿತವಾಗಿ ಮಕ್ಕಳ ಫಲಿತಾಂಶದ ಮೇಲೆ ಭಾರೀ ದುಷ್ಪರಿಣಾಮ ಬೀರುವ ಆತಂಕ ಎದುರಾಗಿದೆ.
Related Articles
ರಾಜ್ಯದ ಹಲವು ಜಿಲ್ಲೆಗಳಲ್ಲಿ ಅದರಲ್ಲಿಯೂ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಕಳೆದ ವರ್ಷ ಕೆಲಸ ನಿರ್ವಹಿಸಿದ ಅತಿಥಿ ಶಿಕ್ಷಕರನ್ನೇ ಪರಿಹಾರ ಬೋಧನೆಗೂ ಬಳಸಿಕೊಳ್ಳಲಾಗುತ್ತಿದೆ. ಈಗ ನೀವು ಪರಿಹಾರ ಬೋಧನೆ ಮಾಡಿರಿ. ಮುಂದಿನ ವರ್ಷ ಸರ್ಕಾರ ನಿಮ್ಮನ್ನೇ ಮುಂದುವರಿಸಬಹುದು’ ಎಂದು ಕೆಲ ಶಾಲಾ ಮುಖ್ಯಸ್ಥರು ಆಮಿಷವೊಡ್ಡಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಪರಿಹಾರ ಬೋಧನೆಗೆ ಸಂಬಳವೂ ಇಲ್ಲ. ಮುಂದಿನ ವರ್ಷ ತಮ್ಮನ್ನೇ ನೇಮಕ ಮಾಡಿಕೊಳ್ಳುವ ಭರವಸೆಯೂ ಇಲ್ಲದೇ ಕೆಲಸ ಮಾಡುವುದು ಹೇಗೆ ಎಂದು ಕೆಲವರು ನಿರಾಕರಿಸುತ್ತಲೂ ಇದ್ದಾರೆ.
Advertisement
ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ನೀಗಿಸಲು ಕಳೆದ ವರ್ಷದಂತೆ ಈ ವರ್ಷವೂ ಸರ್ಕಾರ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಶೈಕ್ಷಣಿಕ ಚಟುವಟಿಕೆ ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಈಗಲೇ ಅತಿಥಿ ಶಿಕ್ಷಕರ ನೇಮಕಾತಿಗೆ ಕ್ರಮವಹಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.– ಚಂದ್ರಶೇಖರ ನುಗ್ಗಲಿ, ಪ್ರಧಾನ ಕಾರ್ಯದರ್ಶಿ, ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ನೌಕರರ ಸಂಘ ಹಿಂದಿನ ವರ್ಷಗಳಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿದವರನ್ನೇ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೂ ಪರಿಗಣಿಸಬೇಕು. ಪ್ರತಿ ತಿಂಗಳ ಆಯಾ ತಿಂಗಳಲ್ಲೇ ವೇತನ ಸಿಗುವ ವ್ಯವಸ್ಥೆ ಆಗಬೇಕು. ಈಗ ಪ್ರಾಥಮಿಕ ಶಾಲೆ ಅತಿಥಿ ಶಿಕ್ಷಕರಿಗೆ 10,000 ರೂ., ಪ್ರೌಢಶಾಲೆ ಅತಿಥಿ ಶಿಕ್ಷಕರಿಗೆ 10,500 ರೂ. ಮಾಸಿಕ ವೇತನವಿದ್ದು ಇದನ್ನು ಹೆಚ್ಚಿಸಬೇಕು.
– ರಾಜೇಶ್ವರಿ ಕೊಪ್ಪದ, ಅತಿಥಿ ಶಿಕ್ಷಕರು -ಎಚ್.ಕೆ. ನಟರಾಜ