Advertisement

ನಂಜನಗೂಡು ನಗರಸಭೆಯಲ್ಲಿ ಈ ಬಾರಿ ಕಮಲ ಅರಳಿಸಿ

09:02 PM May 08, 2019 | Lakshmi GovindaRaj |

ನಂಜನಗೂಡು: ವಿಧಾನಸಭಾ ಕ್ಷೇತ್ರದಲ್ಲಿ ಕಮಲವನ್ನು ಅರಳಿಸಲಾಗಿದ್ದು, ಇದೀಗ ನಡೆಯುವ ನಗರಸಭೆ ಚುನಾವಣೆಯಲ್ಲೂ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಿದೆ. ಇದಕ್ಕಾಗಿ ಕಾರ್ಯಕರ್ತರು ಭಿನ್ನಾಭಿಪ್ರಾಯ ಬದಿಗಿಟ್ಟು ಸಂಘಟಿತ ಹೋರಾಟ ನಡೆಸಬೇಕು ಎಂದು ಶಾಸಕ ಹರ್ಷವರ್ಧನ್‌ ಸಲಹೆ ನೀಡಿದರು.

Advertisement

ನಗರದ ಯಾತ್ರಿ ನಿವಾಸದಲ್ಲಿ ಆಯೋಜಿಸಿದ್ದ ನಗರಸಭಾ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ 20 ವಾರ್ಡ್‌ಗಳನ್ನು ಗೆಲ್ಲುವ ಗುರಿಯೊಂದಿಗೆ ಸಜ್ಜಾಗಬೇಕು. ಈ ಮೂಲಕ ನಗರಸಭೆ ಚುಕ್ಕಾಣಿ ಹಿಡಿಯಬೇಕಿದೆ. ಮೇ 23 ರ ಫ‌ಲಿತಾಂಶ ಬಿಜೆಪಿ ಪರ ಬರುವುದರಿಂದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಮತ್ತಷ್ಟು ಹುಮ್ಮಸ್ಸು ಬರಲಿದೆ ಎಂದು ತಿಳಿಸಿದರು.

ಶುಲ್ಕ ರಹಿತ ಅರ್ಜಿ: ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳು ಪಕ್ಷದ ಕಚೇರಿಯಿಂದ ಅಧಿಕೃತ ಅರ್ಜಿ ಪಡೆದು ಭರ್ತಿ ಮಾಡಿ ನಿಗದಿತ ಅವಧಿಯೊಳಗೆ ಸಲ್ಲಿಸಬೇಕು. ಇದು ಶುಲ್ಕರಹಿತ ಅರ್ಜಿಯಾಗಿದ್ದು, ಇತರೆ ಪಕ್ಷಗಳಂತೆ ನಾವು ಕಾರ್ಯಕರ್ತರಿಂದ ಹಣ ವಸೂಲಿ ಮಾಡುವುದಿಲ್ಲ ಎಂದು ತಿಳಿಸಿದರು.

ಸಭೆಯಲ್ಲಿ ಬಿಜೆಪಿ ನಗರಾಧ್ಯಕ್ಷ ಬಾಲಚಂದ್ರ, ಮುಖಂಡರಾದ ಯು.ಎನ್‌. ಪದ್ಮನಾಭ್‌ ರಾವ್‌, ನಂಜುಂಡಸ್ವಾಮಿ, ಕೃಷ್ಣಪ್ಪಗೌಡ, ವಿನಯಕುಮಾರ್‌, ಸಂಜಯ ಶರ್ಮಾ ಜಗದೀಶ, ರಿಯಾಜ್‌ ಅಹ್ಮದ್‌, ಕಪಿಲೇಶ, ಜಗದೀಶ, ನಗರಸಭೆ ಮಾಜಿ ಸದಸ್ಯರಾದ ಕೆ.ಜಿ. ಆನಂದ, ಮಹದೇವಸ್ವಾಮಿ, ಸುಧಾ ಮಹೇಶ ,ಅನುಸೂಯಾ ಗಣೇಶ, ಮಂಗಳಾ ಗಿರೀಶ್‌ ಇತರರಿದ್ದರು.

ನಗರಸಭೆಯಾಗಿ ಮೇಲ್ದರ್ಜೆಗೆ: 28 ವಾರ್ಡ್‌ಗಳೊಂದಿಗೆ ಪುರಸಭೆಯಾಗಿದ್ದ ನಂಜನಗೂಡು ನಗರದ ವಾರ್ಡ್‌ಗಳ ಪುನರ್‌ ವಿಂಗಡಣೆಯಿಂದಾಗಿ 31 ವಾರ್ಡ್‌ಗಳಾದ ನಂತರ ನಂಜನಗೂಡು ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಿದ್ದು, ಇದೇ ಮೊದಲ ಬಾರಿಗೆ ನಗರಸಭೆ ಚುನಾವಣೆ ನಡೆಯುತ್ತಿದೆ.

Advertisement

ಶ್ರೀಕಂಠ ದೇಗುಲದಲ್ಲಿ ಸಾಕಷ್ಟು ಆದಾಯವಿದ್ದರೂ ಸೌಲಭ್ಯವಿಲ್ಲ: ನಂಜನಗೂಡು ಶ್ರೀಕಂಠೇಶ್ವರ ದೇವಾಲಯಕ್ಕೆ ಸಾಕಷ್ಟು ಆದಾಯವಿದ್ದರೂ ಭಕ್ತರಿಗೆ ಅನುಕೂಲ ಕಲ್ಪಿಸಲು ಮಾತ್ರ ಹಿಂದೆ ಬಿದ್ದಿದೆ. ಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ತಮ್ಮ ಮೊದಲ ಸಭೆ ದೇವಾಲಯದಲ್ಲಿ ಈ ಕುರಿತದ್ದಾಗಿದೆ ಎಂದು ಎಂದು ಶಾಸಕ ಹರ್ಷವರ್ಧನ ತಿಳಿಸಿದರು.

ಭಕ್ತರ ಹಣವನ್ನು ಭಕ್ತರಿಗಾಗಿ ವಿನಿಯೋಗಿಸುವ ಪದ್ಧತಿ ಜಾರಿಗೆ ಬರಬೇಕು. ಅಧಿಕಾರಿಗಳು ಹಾಗೂ ದೇವಾಲಯದ ವ್ಯವಸ್ಥಾಪನಾ ಮಂಡಳಿಯ ಸಭೆ ಕರೆದು ಈ ವಿಷಯದ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ರಾಜ್ಯದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ನಂಜುಂಡೇಶ್ವರ ದೇಗುಲದಲ್ಲಿ ಬೆಳ್ಳಿ ರಥ ಇಲ್ಲ. ದೇವರಿಗೆ ಬೆಳ್ಳಿ ರಥ ನಿರ್ಮಿಸಬೇಕೆಂಬ ಸಹಸ್ರಾರು ಭಕ್ತರ ಆಶಯವಾಗಿದ್ದು, ಶ್ರೀಕಂಠೇಶ್ವರನಿಗೂ ಬೆಳ್ಳಿ ರಥ ನಿರ್ಮಿಸುವ ಕಾರ್ಯ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಭರವಸೆ ನೀಡಿದರು.
ಇಲ್ಲಿನ ಯಾತ್ರಿ ನಿವಾಸದಲ್ಲಿ ತಿರುಪತಿಯಲ್ಲಿ ಭಕ್ತರಿಗೆ ಸಿಗಬಹುದಾದ ಎಲ್ಲಾ ಸೌಲಭ್ಯಗಳು ಸಿಗುವಂತಾಗಲು ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next