ಶಿವಗಂಗಾ ಲೋಕಸಭಾ ಕ್ಷೇತ್ರ ಎನ್ನುವುದು ತಮಿಳುನಾಡಿನಲ್ಲಿ ಕಾಂಗ್ರೆಸ್‌ನ ಭದ್ರ ಕೋಟೆ ಎಂಬ ಅಂಶ 1980ರಿಂದ 2014ರ ವರೆಗೆ ಸಾಬೀತಾಗಿತ್ತು. ಆ ಪಕ್ಷದ ಹಿರಿಯ ನಾಯಕ, ಮಾಜಿ ಸಚಿವ ಪಳನಿಯಪ್ಪನ್ ಚಿದಂಬರಂ ಏಳು ಬಾರಿ ಮತ್ತು ಆರ್.ಸ್ವಾಮಿನಾಥನ್ ಒಂದು ಬಾರಿ ಗೆದ್ದಿದ್ದಾರೆ. ಸದ್ಯ ಎಐಎಡಿಎಂಕೆಯ ಪಿ.ಆರ್.ಸೆಂಥಿಲ್‌ನಾಥನ್ ಸಂಸದರಾಗಿದ್ದಾರೆ. ಈ ಸಾಲಿನಲ್ಲಿ ಸ್ಪರ್ಧೆಗೆ ಚಿದಂಬರಂ ಪುತ್ರ ಕಾರ್ತಿ ಚಿದಂಬರಂಗೆ ಕಾಂಗ್ರೆಸ್ ಅನುವು ಮಾಡಿಕೊಟ್ಟಿದೆ. ಅದು ಪಕ್ಷದ ನಾಯಕ ಇ.ಎಂ.ಸುದರ್ಶನ ನಾಚಿಯಪ್ಪನ್ ಬಹಿರಂಗವಾಗಿಯೇ ದನಿಯೆ ತ್ತಿದ್ದಾರೆ. ಕ್ಷೇತ್ರದ ಜನರು ಚಿದಂಬರಂ ಕುಟುಂಬದವರನ್ನು ದ್ವೇಷಿಸುತ್ತಿದ್ದಾರೆ ಮತ್ತು ಅವರಿಂದ ಏನು ಪ್ರಯೋಜನವಾಗಿಲ್ಲ ಎಂದು ಟೀಕಿಸಿದ್ದರು.
ಕಾರ್ತಿ ವಿರುದ್ಧ ಐಎನ್‌ಎಕ್ಸ್ ಮಾಧ್ಯಮ ಲಂಚ ಪ್ರಕರಣ, ಏರ್‌ಸೆಲ್ ಮ್ಯಾಕ್ಸಿಸ್ ಡೀಲ್ ಕೇಸ್‌ನಲ್ಲಿ ಅಕ್ರಮ ಎಸಗಿದ ಆರೋಪವಿದೆ. ಸದ್ಯ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. 1984-1999ರ ವರೆಗೆ ಮಾಜಿ ಸಚಿವ ಪಿ.ಚಿದಂಬರಂ ಈ ಕ್ಷೇತ್ರದಲ್ಲಿ ಗೆದ್ದಿದ್ದರು. 1999-2004ರಲ್ಲಿ ಇ.ಎಂ.ಸುದರ್ಶನ ನಾಚಿಯಪ್ಪನ್ ಕಾಂಗ್ರೆಸ್‌ನ ಸಂಸದರಾಗಿದ್ದರು. 2004-2014ರ ವರೆಗೆ ಚಿದಂಬರಂ ಅವರೇ ಮತ್ತೆ ಗೆದ್ದಿದ್ದರು. 2014ರಲ್ಲಿ ಕಾರ್ತಿ ಚಿದಂಬರಂ ಸ್ಪರ್ಧಿಸಿದ್ದರಾದರೂ, 1,04, 678 ಮತಗಳನ್ನು ಪಡೆದು ನಾಲ್ಕನೇ ಸ್ಥಾನಕ್ಕೆ ಇಳಿದಿದ್ದರು. ಹೀಗಾಗಿ ಕಳೆದು ಹೋಗಿರುವ ಕ್ಷೇತ್ರವನ್ನು ಮತ್ತೆ ಪಡೆಯಲು ಕಾರ್ತಿ ಹರಸಾಹಸ ಪಡಬೇಕಾಗಿದೆ. ಕಾಂಗ್ರೆಸ್‌ನಲ್ಲಿಯೇ ಮಾಜಿ ಸಚಿವರ ಪುತ್ರನ ಸ್ಪರ್ಧೆಗೆ ಪ್ರಬಲ ವಿರೋಧವೂ ಇದೆ. ಎಐಎಡಿಎಂಕೆಯಿಂದ ಹಾಲಿ ಸಂಸದರೇ ಮತ್ತೆ ಕಣಕ್ಕೆ ಇಳಿದಿದ್ದಾರೆ. ಬಿಜೆಪಿಯಿಂದ ಎಚ್.ರಾಜಾ ಕಣದಲ್ಲಿದ್ದಾರೆ.
ಕಾಂಗ್ರೆಸ್ ಡಿಎಂಕೆ ಜತೆ ಮೈತ್ರಿ ಮಾಡಿಕೊಂಡಿರುವುದರಿಂದ ಅದು ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ. ಹೀಗಾಗಿ, ಆ ಪಕ್ಷದ ಮತಗಳು ಕಾರ್ತಿ ಚಿದಂಬರಂಗೆ ನೆರವಾಗಲಿದೆಯೋ ನೋಡಬೇಕಾಗಿದೆ. ಏ.18ರಂದು ಈ ಕ್ಷೇತ್ರದ ಜನರು ಹಕ್ಕು ಚಲಾವಣೆ ನಡೆಸಲಿದ್ದಾರೆ.
ಜಾತಿ ಲೆಕ್ಕಾಚಾರ: ಈ ಕ್ಷೇತ್ರದಲ್ಲಿ ತಮಿಳುನಾಡಿನಲ್ಲಿ ವ್ಯಾಪರ, ಉದ್ದಿಮೆಗೆ ಹೆಸರುವಾಸಿಯಾಗಿರುವ ಚೆಟ್ಟಿಯಾರ್ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಈ ಸಮುದಾಯದ ಪ್ರಮಾಣವೇ ಶೇ.8-10ರ ಪ್ರಮಾಣದಲ್ಲಿದೆ. ದಲಿತರು, ತೇವರ್ ಮತ್ತು ಕೊನಾರ್ಸ್ ಸಮುದಾಯಕ್ಕೆ ಸೇರಿದವರೂ ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
2014ರ ಚುನಾವಣೆ
– ಪಿ.ಆರ್.ಸೆಂಥಿಲ್‌ನಾಥನ್ (ಎಐಎಡಿಎಂಕೆ) – 4,75,993
– ದೊರೈ ರಾಜಾ ಶುಭಾ (ಡಿಎಂಕೆ) – 2,46, 608