Advertisement

ಈ ಬಾರಿ ಸರಳ ಸ್ವಾತಂತ್ರ್ಯ ದಿನಾಚರಣೆ: ಬೀಳಗಿ

03:49 PM Aug 06, 2020 | mahesh |

ದಾವಣಗೆರೆ: ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೋವಿಡ್ ವೈರಸ್‌ ಹರಡುವಿಕೆ ನಿಯಂತ್ರಣದ ಹಿನ್ನೆಲೆಯಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕೇಂದ್ರ ಗೃಹ ಸಚಿವಾಲಯ ನೀಡಿರುವ ಮಾರ್ಗಸೂಚಿಯನ್ವಯ ಸರಳವಾಗಿ, ಅಚ್ಚುಕಟ್ಟಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ತಿಳಿಸಿದ್ದಾರೆ.

Advertisement

ಸ್ವಾತಂತ್ರ್ಯ ದಿನಾಚರಣೆ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊರೊನಾ ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಎನ್‌ ಸಿಸಿ, ಸ್ಕೌಟ್ಸ್‌ ಮತ್ತು ಗೈಡ್ಸ್‌ ಮಕ್ಕಳಿಗೆ ಅವಕಾಶ ಇರುವುದಿಲ್ಲ. ಕೇಂದ್ರ ಸರ್ಕಾರದ ಗೃಹ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಯನ್ವಯ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧಾರಣೆ ಮಾಡಿ ಮತ್ತು ಸ್ಯಾನಿಟೈಸೇಷನ್‌ ನಿರ್ವಹಿಸಿ ಹೆಚ್ಚು ಜನರನ್ನು ಸೇರಿಸದೆ ಜಿಲ್ಲಾ ಮಟ್ಟದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಬೇಕಿದೆ. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಇರುವುದಿಲ್ಲ ಎಂದರು.

ಅಂದು ಬೆಳಗ್ಗೆ 9ಕ್ಕೆ ಧ್ವಜಾರೋಹಣವನ್ನು ಜಿಲ್ಲಾ ಉಸ್ತುವಾರಿ ಸಚಿವರು ನೆರವೇರಿಸುವರು. ಡಿಆರ್‌, ಸಿವಿಲ್‌, ಹೋಂ, ಅಬಕಾರಿ, ಅರಣ್ಯ ಮತ್ತು ಅಗ್ನಿ ಶಾಮಕದಳ ಒಟ್ಟು ಆರು ತಂಡಗಳು ಮಾತ್ರ ಪಥಸಂಚಲನದಲ್ಲಿ ಪಾಲ್ಗೊಳ್ಳಲಿವೆ.  ಎನ್‌ಸಿಸಿ, ಸ್ಕೌಟ್‌ ಮತ್ತು ಗೈಡ್‌ ಇತರೆ ವಿದ್ಯಾರ್ಥಿಗಳ ತಂಡಗಳಿಗೆ ಅವಕಾಶ ಇರುವುದಿಲ್ಲ. ಕೋವಿಡ್‌ ಸೈನಿಕರಾದ ವೈದ್ಯರು, ಆರೋಗ್ಯ ಸಿಬ್ಬಂದಿಗಳು, ಕೋವಿಡ್‌ನಿಂದ ಗುಣಮುಖರಾದವರು, ಪೌರಕಾರ್ಮಿಕರ ಗೌರವಿಸಲಾಗುವುದು.

ಜಿಲ್ಲಾ ಮಟ್ಟದ ಇಲಾಖಾ ಮುಖ್ಯಸ್ಥರು ತಮ್ಮ ಕಚೇರಿಗಳಲ್ಲಿ ಅಂದು ಬೆಳಿಗ್ಗೆ 7.30ಕ್ಕೆ ಧ್ವಜಾರೋಹಣ ನೆರವೇರಿಸಿ, ಜಿಲ್ಲಾಡಳಿತ ಭವನದ ಆವರಣದಲ್ಲಿ ಬೆಳಗ್ಗೆ 7:50 ಕ್ಕೆ ನಡೆಯುವ ಧ್ವಜಾರೋಹಣ ಕಾರ್ಯಕ್ರಮಕ್ಕೆ ಹಾಜರಿರುವಂತೆ ಸೂಚಿಸಿದರು.

ಪ್ಲಾಸ್ಟಿಕ್‌ ಧ್ವಜಗಳ ಬಳಸುವಂತಿಲ್ಲ. ಒಂದು ಪಕ್ಷ ಅಂಗಡಿಗಳಲ್ಲಿ, ವ್ಯಾಪಾರ ವಹಿವಾಟು ಕೇಂದ್ರಗಳಲ್ಲಿ ಪ್ಲಾಸ್ಟಿಕ್‌ ಧ್ವಜಗಳ ಮಾರಾಟ ಮತ್ತು ಬಳಕೆ ಮಾಡಿದಲ್ಲಿ
ಅಂತಹವರ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿಯವರು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

Advertisement

ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿ ಕಟ್ಟಡಗಳ ಮೇಲೆ ಆ. 14 ಮತ್ತು 15 ರಂದು ವಿದ್ಯುತ್‌ ದೀಪಾಂಲಕಾರ ಮಾಡಲು ಆಯಾ ಇಲಾಖಾ ಧಿಕಾರಿಗಳಿಗೆ ಸೂಚಿಸಲಾಯಿತು. ಜಯದೇವ ವೃತ್ತ, ಹೊಂಡದ ವೃತ್ತ, ಗುಂಡಿ ವೃತ್ತ ಜಿಲ್ಲಾಡಳಿತ ಭವನದ ಕಟ್ಟಡದ ಮೇಲೆ ವಿದ್ಯುತ್‌ ದೀಪಾಲಂಕಾರ ಮಾಡುವಂತೆ
ತಿಳಿಸಲಾಯಿತು. ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next