Advertisement

ಈ ಬಾರಿ ಗಣೇಶೋತ್ಸವಕ್ಕೆ ‘ಬಾಂಡ್‌’ಭಯವಿಲ್ಲ

08:45 AM Aug 11, 2017 | Team Udayavani |

ಪುತ್ತೂರು : ಗಣೇಶೋತ್ಸವ ಆಯೋಜನೆ ಸಂದರ್ಭ ಸಂಘಟಕರು ಬಾಂಡ್‌ ನೀಡಿ ಅನುಮತಿ ಪಡೆದುಕೊಳ್ಳಬೇಕೆನ್ನುವ ಬಗ್ಗೆ ಈ ಬಾರಿ ಪೊಲೀಸ್‌ ಇಲಾಖೆಗೆ ಯಾವುದೇ ಸೂಚನೆ ಬಂದಿಲ್ಲ ಎಂದು ಸಂಚಾರ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಮುಂಬರುವ ಶ್ರೀ ಕೃಷ್ಣ ಜನ್ಮಾಷ್ಟಮಿ, ಗಣೇಶ್‌ ಚತುರ್ಥಿ ಮತ್ತು ಬಕ್ರೀದ್‌ ಹಬ್ಬಗಳ ಸಂದರ್ಭ ಮುಂಜಾಗ್ರತಾ ಕ್ರಮವಾಗಿ ಗುರುವಾರ ವಿವಿಧ ಧರ್ಮದ ಮುಖಂಡರ ಉಪಸ್ಥಿತಿಯಲ್ಲಿ ಶಾಂತಿ ಸಭೆ ನಡೆಯಿತು.

Advertisement

ಹಿಂದೂ ಸಂಘಟನೆಯ ಮುಂದಾಳು ಅರುಣ್‌ ಕುಮಾರ್‌ ಪುತ್ತಿಲ ವಿಷಯ ಪ್ರಸ್ತಾಪಿಸಿ, ಕಳೆದ ಬಾರಿ ಗಣೇಶೋತ್ಸವ ಆಚರಣೆ ಸಂದರ್ಭ 10 ಲಕ್ಷ ರೂ.ಬಾಂಡ್‌ ನೀಡಿ ಅನುಮತಿ ಪಡೆದುಕೊಳ್ಳಬೇಕಿತ್ತು. ಇದು ಗೊಂದಲಕ್ಕೂ ಕಾರಣವಾಗಿತ್ತು. ಈ ಬಾರಿ ಅಂತಹ ನಿಯಮ ಇದೆಯೇ ಎಂದು ಪ್ರಶ್ನಿಸಿದರು.

ಉತ್ತರಿಸಿದ ಎಸ್‌ಐ ಒಮನಾ, ಈಗ ಬಂದಿರುವ ನಿಯಮದಲ್ಲಿ ಸಂಘಟಕರು ಬಾಂಡ್‌ ಪಡೆದುಕೊಳ್ಳುವ ಬಗ್ಗೆ ಉಲ್ಲೇಖ ಇಲ್ಲ. ಮೇಲಧಿಕಾರಿಗಳಿಂದ ಈ ಬಗ್ಗೆ ಸೂಚನೆ ಬಂದಿಲ್ಲ ಎಂದು ಮಾಹಿತಿ ನೀಡಿದರು. ಡಿವೈಎಸ್‌ಪಿ ಬಿ.ಎನ್‌. ಶ್ರೀನಿವಾಸ್‌ ಮಾತನಾಡಿ, ಬಾಂಡ್‌ ಪಡೆದುಕೊಳ್ಳುವ ಉದ್ದೇಶ ಸಂಘಟಕರಿಗೂ ಜವಾಬ್ದಾರಿ ಇರಲಿ ಎಂದಾಗಿದೆ ಹೊರತು ಬೇರೇನೂ ಇಲ್ಲ. ಶಾಂತಿ-ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಕಾರ್ಯಕ್ರಮ ಆಯೋಜಿಸುವ ಜವಾಬ್ದಾರಿ ಸಂಘಟಕರದ್ದು ಎಂದು ಅವರು ಹೇಳಿದರು.

ಮಕ್ಕಳನ್ನು ಪಿರಮಿಡ್‌ ಹತ್ತಲು ಬಳಸುವಂತಿಲ್ಲ
ಶ್ರೀಕೃಷ್ಣ ಜನ್ಮಾಷ್ಟಮಿಯಂದು ಆಯೋಜಿಸುವ ಪಿರಮಿಡ್‌ ಸ್ಪರ್ಧೆಯಲ್ಲಿ 14 ವರ್ಷಗಳೊಳಗಿನ ಮಕ್ಕಳನ್ನು ಬಳಸಿಕೊಳ್ಳುವಂತಿಲ್ಲ. ಹೈಕೋರ್ಟ್‌ ಕೂಡ ಈ ಬಗ್ಗೆ ಸೂಚನೆ ನೀಡಿದೆ. ಪಿರಮಿಡ್‌ನಿಂದ ಮಕ್ಕಳು ಕೆಳಗೆ ಬಿದ್ದು ಅಪಾಯ ಉಂಟಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಸಂಘಟಕರು ಎಚ್ಚರಿಕೆ ವಹಿಸಬೇಕು ಎಂದು ಡಿವೈಎಸ್‌ಪಿ ಸೂಚನೆ ನೀಡಿದರು.

ಸಿಸಿ ಕೆಮರಾ ಬಳಸಿ
ಕಾರ್ಯಕ್ರಮದ ದಿನ ಕಾನೂನು ಸುವ್ಯ ವಸ್ಥೆಗೆ ಭಂಗ ತರುವವರನ್ನು ಪತ್ತೆ ಹಚ್ಚಲು ಸಹಕಾರಿ ಆಗುವಂತೆ, ಸಂಘಟಕರು ಸಿಸಿ ಕೆಮರಾ ಬಳಸಿದರೆ ಉತ್ತಮ. ಜತೆಗೆ ಸ್ವಯಂ ಸೇವಕರನ್ನು ನೇಮಿಸಿಕೊಳ್ಳಬೇಕು. ಪೊಲೀಸ್‌ ಇಲಾಖೆಯು ತನ್ನ ಸಿಬಂದಿಯನ್ನು ನಿಯೋಜಿಸಲಿದೆ ಎಂದು ಡಿವೈಎಸ್‌ಪಿ ಮಾಹಿತಿ ನೀಡಿದರು.

Advertisement

ವೈನ್‌ಶಾಪ್‌ ಬಂದ್‌ ಮಾಡಿ
ಹಿಂದೂ ಸಂಘಟನೆ ಮುಖಂಡ ಡಾ| ಪ್ರಸಾದ್‌ ಭಂಡಾರಿ, ನವೀನ್‌ ಪಟ್ನೂರು ಮಾತನಾಡಿ, ಪುತ್ತೂರಿನ ನಗರದಲ್ಲಿ ಗಣೇಶೋತ್ಸವ ವಿಗ್ರಹ ವಿಸರ್ಜನ ಮೆರವಣಿಗೆ ದಿನ ವೈನ್‌ಶಾಪ್‌, ಬಾರ್‌ಗಳನ್ನು ಮುಚ್ಚುವುದು ಉತ್ತಮ ಎಂದು ಅಭಿಪ್ರಾಯಿಸಿದರು.

ಇದಕ್ಕೆ ಉತ್ತರಿಸಿದ ಡಿವೈಎಸ್‌ಪಿ, ನಿಮ್ಮ ಅಭಿಪ್ರಾಯವನ್ನು ವರದಿ ರೂಪದಲ್ಲಿ ಡಿಸಿ ಗಮನಕ್ಕೆ ತರಲಾಗುವುದು ಎಂದರು. ಡಾ| ಪ್ರಸಾದ್‌ ಭಂಡಾರಿ ಮಾತನಾಡಿ, ಸಾವಿರಾರು ಜನರು ಭಾಗಿಯಾಗುವ ಕಾರ್ಯಕ್ರಮದಲ್ಲಿ ಕೆಲವರು ಮದ್ಯ ಸೇವಿಸಿ ಕುಣಿಯುತ್ತಾರೆ. ಅವರನ್ನು ಪ್ರಶ್ನಿಸುವುದು ಸಂಘಟಕರಿಗೂ ಕಷ್ಟ. ನಿಯಂತ್ರಿಸುವುದು ಪೊಲೀಸರಿಗೂ ಕಷ್ಟ. ಹಾಗಾಗಿ ಆ ದಿನ ಮದ್ಯ ಮಾರಾಟಕ್ಕೆ ಅವಕಾಶ ನೀಡದಿರುವುದು ಉತ್ತಮ ಎಂದರು. ಪುತ್ತೂರಿನಲ್ಲಿ ಮುಖ್ಯವಾಗಿ ಮಹಾಲಿಂಗೇಶ್ವರ ದೇವಾಲಯದ ಗದ್ದೆ ಹಾಗೂ ಕಿಲ್ಲೆ ಮೈದಾನದ ಗಣೇಶೋತ್ಸವಕ್ಕೆ ಸಾವಿರಾರು ಜನ ಸೇರುತ್ತಾರೆ. ಇಲ್ಲಿಯ ತನಕ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಮುಂದೆಯು ನಡೆಯುವುದಿಲ್ಲ ಎಂದು ಅವರು ಹೇಳಿದರು.

ನ್ಯಾಯವಾದಿ ನೂರುದ್ದಿನ್‌ ಸಾಲ್ಮರ ಮಾತನಾಡಿ, ಇಲ್ಲಿಯ ತನಕ ಹಬ್ಬದ ದಿವಸ ಪುತ್ತೂರಿನಲ್ಲಿ ಯಾವುದೇ ಕೋಮು ಗಲಭೆ, ಸಂಘರ್ಷಗಳು ಆಗಿಲ್ಲ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಎಲ್ಲ ಧರ್ಮದ ಮುಖಂಡರು ಆದ್ಯತೆ ನೀಡಿದ್ದಾರೆ ಎಂದ ಅವರು, ಮೆರವಣಿಗೆ ಸಂದರ್ಭ ಧಾರ್ಮಿಕ ಕೇಂದ್ರದ ಬಳಿ ಘೋಷಣೆ ಕೂಗುವುದಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.

ಸಂಘಟಕರ ಮಾತು ಕೇಳುತ್ತಾರೆ
ಡಿವೈಎಸ್‌ಪಿ ಶ್ರೀನಿವಾಸ ಮಾತನಾಡಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನರು ಪೊಲೀಸರಿಗಿಂತಲೂ ಸಂಘಟಕರ ಮಾತನ್ನು ಕೇಳುವುದು ಹೆಚ್ಚು. ಮುಖ್ಯವಾಗಿ ಯುವ ಸಮುದಾಯವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ರಸ್ತೆಯಲ್ಲಿ ಮೆರವಣಿಗೆ ಸಂದರ್ಭ ಸಾಗುವ ಶಿಸ್ತು ಕಾಪಾಡಿಕೊಳ್ಳಬೇಕು. ಈ ಬಗ್ಗೆ ಸಂಘಟಕರು ಮುನ್ಸೂಚನೆ ನೀಡಬೇಕು ಎಂದರು.
ಯಾವುದೇ ಧರ್ಮದ ಹಬ್ಬ ಆಚರಣೆಗಳು ಇತರರಿಗೆ ಇರಿಸು-ಮುರಿಸು ಆಗದಂತೆ ನಡೆಯಬೇಕು. ಹಬ್ಬದ ಮಹತ್ವ ಅರಿತು ಶಾಂತಿ, ಸಾಮರಸ್ಯದ ಮೂಲಕ ಕಾರ್ಯಕ್ರಮ ನಡೆಸಬೇಕು ಎಂದು ಅವರು ಹೇಳಿದರು.

ಶ್ರೀ ದೇವತಾ ಸಮಿತಿ ಅಧ್ಯಕ್ಷ ಎನ್‌. ಸುಧಾಕರ ಶೆಟ್ಟಿ, ದಿನೇಶ್‌ ಪಿ.ವಿ., ಶ್ರೀನಿವಾಸ ಕೆ., ರೋಶನ್‌ ರೈ, ಕೃಷ್ಣಪ್ರಸಾದ್‌ ಆಳ್ವ, ಈಶ್ವರ ಭಟ್‌ ಪಟ್ನೂರು, ರಫೀಕ್‌, ಮಂಜುನಾಥ ಆಚಾರ್ಯ, ಹಸನ್‌ ಹಾಜಿ, ಸಿದ್ದಿಕ್‌, ನಗರಸಭಾ ಉಪಾಧ್ಯಕ್ಷ ವಿಶ್ವನಾಥ ಗೌಡ, ಸದಸ್ಯರಾದ ಜೀವಂಧರ್‌ ಜೈನ್‌, ಸುಂದರ ಪೂಜಾರಿ ಬಡಾವು, ಶರತ್‌ಚಂದ್ರ ಬೈಪಾಡಿತ್ತಾಯ, ಅಬೂಬಕ್ಕರ್‌ ಬನ್ನೂರು, ಯಾಕೂಬ್‌ ದರ್ಬೆ, ಅಶ್ರಫ್‌ ಮುಕ್ವೆ, ಜಯಾನಂದ ಕೋಡಿಂಬಾಡಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next