Advertisement

ಈ ಬಾರಿಯೂ ಮಹಿಳಾ ಸ್ನೇಹಿ  ಪಿಂಕ್‌ ಮತಗಟ್ಟೆ!

04:54 AM Mar 14, 2019 | Team Udayavani |

ಮಹಾನಗರ : ಲೋಕ ಸಭಾ ಚುನಾವಣೆಯಲ್ಲಿ ಮತದಾನಕ್ಕೆ ಪ್ರೇರೇಪಿಸುವುದಕ್ಕಾಗಿ ಜಿಲ್ಲಾ ಸ್ವೀಪ್‌ ಕಮಿಟಿ ಹಲವಾರು ಹೊಸ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಮಹಿಳಾ ಸ್ನೇಹಿ ಪಿಂಕ್‌ ಮತಗಟ್ಟೆಗಳು ಕಾಣಿಸಿಕೊಳ್ಳಲಿವೆ.

Advertisement

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಆಯ್ದ ಕೆಲವು ಮತಗಟ್ಟೆಗಳನ್ನು ಸಂಪೂರ್ಣ ಮಹಿಳಾ ಸ್ನೇಹಿ ಮತಗಟ್ಟೆಯನ್ನಾಗಿ ರೂಪಿಸುವಂತೆ ಚುನಾವಣಾ ಆಯೋಗ ಸಲಹೆ ನೀಡಿತ್ತು. ಹಾಗಾಗಿ ದ.ಕ. ಜಿಲ್ಲಾಡಳಿತ ಕಳೆದ ಬಾರಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮೂರು ಮತಗಟ್ಟೆಗಳಾದ ಬಿಜೈ ಕಾಪಿಕಾಡ್‌ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಉರ್ವ ಸಂತ ಅಲೋಶಿಯಸ್‌ ಹಿ.ಪ್ರಾ. ಶಾಲೆ, ಬಲ್ಮಠ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ತೆರೆಯಲಾದ ಮತಗಟ್ಟೆಗಳನ್ನು ಪಿಂಕ್‌ ಮತಗಟ್ಟೆಗಳಾಗಿ ಅಲಂಕರಿಸಿ ಮಹಿಳಾ ಸ್ನೇಹಿಯನ್ನಾಗಿಸಲಾಗಿತ್ತು. ಅದರಂತೆ ಈ ಬಾರಿಯೂ ಪಿಂಕ್‌ ಮತಗಟ್ಟೆಗಳನ್ನು ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಯಾವ ಮತಗಟ್ಟೆಗಳನ್ನು ಪಿಂಕ್‌ ಮತಗಟ್ಟೆ, ವಿಶೇಷ ಮತಗಟ್ಟೆಗಳಾಗಿ ವಿಂಗಡಿಸಬಹುದು ಎಂಬುದಾಗಿ ಜಿಲ್ಲಾಧಿಕಾರಿ ಸಿಇಒ ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತಿದೆ. ಈ ಬಾರಿ ಮೂರಕ್ಕಿಂತ ಹೆಚ್ಚು ಮತಗಟ್ಟೆಗಳನ್ನು ಪಿಂಕ್‌ ಮತಗಟ್ಟೆಗಳಾಗಿ ಅಲಂಕರಿಸುವ ಸಾಧ್ಯತೆ ಇದೆ.

ಪಿಂಕ್‌ ಬಣ್ಣದ ಅಲಂಕಾರ
ಪಿಂಕ್‌ ಮತಗಟ್ಟೆಗಳಿಗೆ ಮತದಾನ ಮಾಡಲು ಬರುವ ಮತದಾರರನ್ನು ಸ್ವಾಗತಿಸಲು ಕಳೆದ ಬಾರಿ ಪ್ರವೇಶದ್ವಾರವನ್ನು ಪಿಂಕ್‌ ಬಣ್ಣದಲ್ಲಿ ಅಲಂಕರಿಸಲಾಗಿತ್ತು. ಮತಗಟ್ಟೆಯ ಒಳಗಡೆ ಸುತ್ತಲೂ ತಿಳಿ ಪಿಂಕ್‌ ಬಣ್ಣದ ಅಲಂಕಾರಿಕ ಬಟ್ಟೆ ಮತ್ತು ತಿಳಿ ಪಿಂಕ್‌ ಬಣ್ಣದ ಬಲೂನಿನಿಂದ ಅಲಂಕರಿಸಲಾಗಿತ್ತು. ಇವಿಎಂ ಮೆಶಿನ್‌ ಇಟ್ಟಿರುವ ಟೇಬಲ್‌, ಅಧಿಕಾರಿಗಳು ಕುಳಿತುಕೊಳ್ಳುವ ಚಯರ್‌ ಮತ್ತು ಟೇಬಲ್‌ಗ‌ಳನ್ನೂ ಪಿಂಕ್‌ ಬಣ್ಣದಿಂದ ಅಲಂಕರಿಸಲಾಗಿತ್ತು. ಈ ಬಾರಿ ಅದಕ್ಕಿಂತ ವಿಭಿನ್ನವಾಗಿ ಅಲಂಕರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತಗಟ್ಟೆಯಲ್ಲಿ ಮಹಿಳಾ ಸಿಬಂದಿ
ಪಿಂಕ್‌ ಮಹಿಳೆಯರ ಪ್ರಿಯ ಬಣ್ಣವಾಗಿರುವುದರಿಂದ ಆಯ್ದ ಮತಗಟ್ಟೆಗಳಲ್ಲಿ ಪಿಂಕ್‌ ಬಣ್ಣ ಕಂಗೊಳಿಸಲಿದೆ. ಅದರೊಂದಿಗೆ ಭದ್ರತಾ ಸಿಬಂದಿ, ಪೊಲೀಸರು ಸಹಿತ ಎಲ್ಲ ಸಿಬಂದಿ ಮಹಿಳೆಯರೇ ಆಗಿರುತ್ತಾರೆ. ಅವರು ಮತದಾನದ ದಿನ ಪಿಂಕ್‌ ಬಣ್ಣದ ಬಟ್ಟೆ ಧರಿಸಿ ಮತದಾನ ಕೇಂದ್ರಕ್ಕೆ ಬಂದು ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ.

ಜತೆಗೆ ಬೂತ್‌ಗೆ ಆಗಮಿಸುವ ತಾಯಂದಿರ ಮಕ್ಕಳಿಗೆ ಪ್ರತ್ಯೇಕ ಆಟದ ಕೊಠಡಿ, ಅಂಗವಿಕಲರಿಗೆ ವಿಶೇಷ ಬೂತ್‌ ಮಾಡಲಾಗುತ್ತದೆ. ಮತದಾನ ಮಾಡಲು ಜನರನ್ನು ಪ್ರೇರೆಪಿಸುವ ನಿಟ್ಟಿನಲ್ಲಿ ಸ್ವೀಪ್‌ ಕಮಿಟಿ ಹಲವು ಹೊಸ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆ ನಡೆಸಿದೆ.

Advertisement

ಮತಗಟ್ಟೆ ಆಯ್ಕೆ ಕುರಿತು ಚರ್ಚೆ
ದೇಶದ ಪ್ರತಿಯೊಬ್ಬ ಪ್ರಜೆಯೂ ಮತದಾನ ಮಾಡಬೇಕು. ಯುವಜನಾಂಗವನ್ನು ಮತದಾನದತ್ತ ಸೆಳೆಯಲು ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅದರೊಂದಿಗೆ ಮಹಿಳಾ ಮತದಾರರನ್ನು ಮತದಾನಕ್ಕೆ ಪ್ರೇರೆಪಿಸಲು ಪಿಂಕ್‌ ಮತಗಟ್ಟೆ ಮಾಡಲಾಗುತ್ತದೆ. ಯಾವ ಮತಗಟ್ಟೆಗಳನ್ನು ಆಯ್ಕೆ ಮಾಡಬೇಕು ಎಂಬುದರ ಕುರಿತಂತೆ ಚರ್ಚೆಗಳು ನಡೆಯುತ್ತಿದೆ.
 – ಡಾ| ಆರ್‌ . ಸೆಲ್ವಮಣಿ,
ಜಿಲ್ಲಾ ಸ್ವೀಪ್‌ ಕಮಿಟಿ ಅಧ್ಯಕ್ಷ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next