ಚಾಮರಾಜನಗರ: ಪ್ರತಿ ವರ್ಷ ಆಷಾಢದ ಪೂರ್ವಾಷಾಢ ನಕ್ಷತ್ರದ ದಿನ ನಗರದ ಐತಿಹಾಸಿಕ ಚಾಮರಾಜೇಶ್ವರ ರಥೋತ್ಸವ ನಡೆಯುತ್ತಿತ್ತು. ಅದರಂತೆ ಗುರುವಾರ ಈ ಬಾರಿಯ ರಥೋತ್ಸವ ನಡೆಯಬೇಕಿತ್ತು.ನೂತನ ರಥ ನಿರ್ಮಾಣವಾಗದ ಕಾರಣ ಸತತ ಎರಡನೇ ವರ್ಷ ರಥೋತ್ಸವ ನಡೆಯುತ್ತಿಲ್ಲ. ಇದು ಭಕ್ತಾದಿಗಳಿಗೆ ಹಾಗೂ ನವದಂಪತಿಗಳಿಗೆ ನಿರಾಸೆ ಮೂಡಿಸಿದೆ.
2017ರ ಫೆ. 19ರ ನಡುರಾತ್ರಿ ಸಮಯದಲ್ಲಿ ಕಿಡಿಗೇಡಿಯೊಬ್ಬ ನಗರದ ಚಾಮರಾಜೇಶ್ವರ ರಥಕ್ಕೆ ಬೆಂಕಿ ಹಚ್ಚಿ ರಥ ಭಾಗಶಃ ಸುಟ್ಟುಹೋಗಿತ್ತು.
ನಿರ್ಲಕ್ಷ್ಯ: ಸುಟ್ಟು ಹೋದ ರಥ ಬಳಸುವುದು ಶಾಸ್ತ್ರ ಸಮ್ಮತವಲ್ಲ ಎಂದು ಅರ್ಚಕ ವೃಂದ ತಿಳಿಸಿತು. ಮೊದಲೇ ರಥ ಶಿಥಿಲವಾಗಿತ್ತು. ರಥವಿಲ್ಲದ ಕಾರಣ 2017ರ ಆಷಾಢ ರಥೋತ್ಸವ ನಡೆಯಲಿಲ್ಲ. ಆ ವೇಳೆ ಮುಂದಿನ ವರ್ಷವಾದರೂ ಹೊಸ ರಥ ನಿರ್ಮಾಣವಾಗುವುದೆಂದು ಜನ ನಿರೀಕ್ಷಿಸಿದ್ದರು. ಆದರೆ, ಜನತೆಯ ನಿರೀಕ್ಷೆ ಹುಸಿಯಾಗಿದೆ.
ಸಂಪ್ರೋಕ್ಷಣೆ ನೆಪ: ಇದಕ್ಕೆ ದೇವಾಲಯದ ಆಡಳಿತ ವರ್ಗ ಕೊಡುವ ಕಾರಣವೇ ಬೇರೆ. ಪ್ರಸ್ತುತ ಚಾಮರಾಜೇಶ್ವರ ದೇವಸ್ಥಾನದ ನವೀಕರಣ ನಡೆಯುತ್ತಿದ್ದು, ದೇಗುಲ ಸಂಪ್ರೋಕ್ಷಣೆಯಾಗದೇ ರಥೋತ್ಸವ ನಡೆಸುವಂತಿಲ್ಲ. ಸಂಪ್ರೋಕ್ಷಣೆಯಾಗಿದ್ದರೆ ಚಿಕ್ಕರಥವನ್ನಾದರೂ ಬಳಸಿಕೊಂಡು ರಥೋತ್ಸವ ನಡೆಸಬಹುದಿತ್ತು ಎನ್ನುತ್ತಾರೆ. ಆದರೆ, ಸಂಪ್ರೋಕ್ಷಣೆ ನಡೆಯದಿದ್ದರೂ ದೇವಾಲಯದಲ್ಲಿ ದೈನಿಕ ಪೂಜಾ ವಿಧಿ ವಿಧಾನಗಳು ಅದೇ ಗುಡಿಯೊಳಗೆ ನಡೆಯು ತ್ತಲೇ ಇವೆ. ಹಾಗಾಗಿ ರಥೋತ್ಸವ ಮಾಡದಿರಲು ಇದು ಕಾರಣವಲ್ಲ ಎನ್ನುತ್ತಾರೆ ಭಕ್ತಾದಿಗಳು.
ಕರೆಯದ ಮರುಟೆಂಡರ್: ಕಳೆದ ವರ್ಷವೇ ನೂತನ ರಥ ನಿರ್ಮಾಣಕ್ಕೆ 1.20 ಕೋಟಿ ರೂ.ಗಳ ಅನುದಾನವನ್ನು ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ನೀಡಿತ್ತು. ಜಿಲ್ಲಾಡಳಿತ ಈ ಅನುದಾನವನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿತ್ತು. ಲೋಕೋಪಯೋಗಿ ಇಲಾಖೆ ನೂತನ ರಥ ನಿರ್ಮಿಸಲು ಟೆಂಡರ್ ಕರೆದಿತ್ತು.ಆದರೆ ಕಾರಣಾಂತರಗಳಿಂದ ಟೆಂಡರ್ ರದ್ದಾಗಿತ್ತು.
ನವ ದಂಪತಿಗಳಿಗೆ ನಿರಾಸೆ: ಚಾಮರಾಜನಗರದ ಚಾಮರಾಜೇಶ್ವರ ರಥೋತ್ಸವ ನವ ದಂಪತಿಗಳ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿದೆ. ಆಷಾಢ ಮಾಸದ ಪೂರ್ವಾಷಾಢದಲ್ಲಿ ನಡೆಯುವ ಈ ಜಾತ್ರೆಗೆ ಮದುವೆಯಾದ ಬಳಿಕ ಆಷಾಢದಲ್ಲಿ ತವರನ್ನು ಸೇರಿರುವ ಪತ್ನಿಯನ್ನು ನೋಡಲು ಪತಿಗೆ ಇದು ಅವಕಾಶ. ಜತೆಗೆ ನವದಂಪತಿಗಳು ಈ ಜಾತ್ರೆಗೆ ಆಗಮಿಸಿ,ರಥಕ್ಕೆ ಹಣ್ಣು ಜವನ ಎಸೆದು ಇಷ್ಟಾರ್ಥ ಪ್ರಾರ್ಥಿಸುವುದು ಪ್ರತೀತಿ. ಆದರೆ, ರಥೋತ್ಸವ ರದ್ದಾಗಿರುವುದು ನವದಂಪತಿಗಳಿಗೆ ನಿರಾಸೆ ಮೂಡಿಸಿದೆ.
ದೇವಾಲಯದ ಜೀರ್ಣೋದಾಟಛಿರ ಕಾಮಗಾರಿಪ್ರಗತಿಯಲ್ಲಿದೆ. ದೇವಾಲಯಕ್ಕೆ ಸಂಪ್ರೋಕ್ಷಣೆ ನಡೆಯಬೇಕಾಗಿದೆ. ಹಾಗಾಗಿ ರಥೋತ್ಸವ ನಡೆಯುತ್ತಿಲ್ಲ. ನೂತನ ರಥ ನಿರ್ಮಾಣಕ್ಕೆ ಇನ್ನೊಂದು ವಾರದಲ್ಲಿ ಮತ್ತೆ ಟೆಂಡರ್ ಕರೆಯಲಾಗುತ್ತದೆ.
– ಮಂಜೇಶ್,
ಕಾರ್ಯನಿರ್ವಾಹಕ ಅಧಿಕಾರಿ, ಚಾಮರಾಜೇಶ್ವರ
ದೇವಾಲಯ