Advertisement

ಈ ಬಾರಿ 10 ಕೋಟಿ ಮಾನವ ದಿನಗಳ ಸೃಷ್ಠಿ: ಕೃಷ್ಣ ಬೈರೇಗೌಡ

06:55 AM Nov 29, 2018 | |

ಬೆಂಗಳೂರು:ರಾಜ್ಯದಲ್ಲಿ ತೀವ್ರ ಬರಗಾಲ ಹಿನ್ನೆಲೆಯಲ್ಲಿ ನರೇಗಾ ಯೋಜನೆ ಅಡಿಯಲ್ಲಿ 10 ಕೋಟಿ ಮಾನವ ದಿನಗಳನ್ನು ಸೃಜಿಸಲು ಗುರಿ ಹೊಂದಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

Advertisement

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 8.5 ಕೋಟಿ ಮಾನವ ದಿನ ಸೃಜಿಸಲು ಅವಕಾಶ ಇತ್ತು. ಈ ವರ್ಷ 100 ತಾಲೂಕುಗಳಲ್ಲಿ ಬರ ಘೋಷಣೆ ಮಾಡಲಾಗಿದ್ದು ಉದ್ಯೋಗ ಖಾತ್ರಿಗೆ ಹೆಚ್ಚಿನ ಅವಕಾಶವಿದ್ದು, 10 ಕೋಟಿ ಮಾನವ ದಿನಗಳ ಸೃಜಿಸಲು ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಈಗಾಗಲೇ 5.3 ಕೋಟಿ ಮಾನವ ದಿನಗಳ ಸೃಜಿಸಲಾಗಿದ್ದು, 2019 ರ ಮಾರ್ಚ್‌ ಅಂತ್ಯದ ವೇಳೆಗೆ 10 ಕೋಟಿ ಮಾನವ ದಿನಗಳ ಗುರಿ ಮುಟ್ಟಲಾಗುವುದು. ಕೃಷಿ ಹೊಂಡ, ರಸ್ತೆ ನಿರ್ಮಾಣ, ರೈತರ ಹೊಲಗಳಿಗೆ ರಸ್ತೆ ಸೇರಿದಂತೆ ಆಸ್ತಿ ಸೃಷ್ಠಿ ಮಾಡಲು ಈ ವರ್ಷ ಸುಮಾರು 4 ಸಾವಿರ ಕೋಟಿ ರೂ. ವೆಚ್ಚ ಮಾಡುವ ಗುರಿ ಹೊಂದಲಾಗಿದೆ.

ನರೇಗಾ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಕಳೆದ ವರ್ಷದ 943 ಕೋಟಿ ರೂ. ರಾಜ್ಯ ಸರ್ಕಾರಕ್ಕೆ ಬಾಕಿ ನೀಡಬೇಕಿದೆ. ಕಳೆದ ವರ್ಷ ಕೇಂದ್ರ ಸರ್ಕಾರ ಹಣ ಬಿಡುಗಡೆ ವಿಳಂಬ ಮಾಡಿದ್ದರಿಂದ ರಾಜ್ಯ ಸರ್ಕಾರವೇ 1500 ಕೋಟಿ ರೂ. ಬಿಡುಗಡೆ ಮಾಡಿದ್ದು, ಅದರಲ್ಲಿ ಕೇಂದ್ರ ಸರ್ಕಾರ 557 ಕೋಟಿ ರೂ. ಮಾತ್ರ ನೀಡಿದೆ. ಇನ್ನೂ 943 ಕೋಟಿ ರೂ. ಬಾಕಿ ನೀಡಬೇಕು. ಈ ವರ್ಷದಲ್ಲಿ 250 ಕೋಟಿ ರೂ. ನೀಡಬೇಕಿದೆ ಎಂದು ಹೇಳಿದರು.

ಕುಡಿಯುವ ನೀರಿಗೆ 1700 ಕೋಟಿ
ಗ್ರಾಮೀಣಾಭಿವೃದ್ಧಿ ಮತ್ತು  ಪಂಚಾಯತ್‌ ರಾಜ್‌ ಇಲಾಖೆಯಿಂದ ಕುಡಿಯುವ ನೀರು ಸರಬರಾಜಿಗೆ 1700 ಕೋಟಿ ರೂಪಾಯಿ ನೀಡಲಾಗಿದೆ. ಈಗಾಗಲೇ ಆಗಸ್ಟ್‌ನಲ್ಲಿ 2700 ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದೆ. ಅಲ್ಲದೇ ಕಳೆದ ವರ್ಷದ 647 ಕೋಟಿ ರೂಪಾಯಿ ಬಾಕಿ ಉಳಿದಿದೆ. ಕುಡಿಯುವ ನೀರಿಗಾಗಿ ಸುಮಾರು 2350 ಕೋಟಿ ರೂ. ಅನುದಾನ ಲಭ್ಯವಿದೆ. ಡಿಸೆಂಬರ್‌ ಅಂತ್ಯದೊಳಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ, ಮಾರ್ಚ್‌ ಅಂತ್ಯದೊಳಗೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

Advertisement

ಅಲ್ಲದೇ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕುಡಿಯುವ ನೀರು ಸರಬರಾಜಿಗೆ ಶಾಸಕರಿಗೆ 50 ಲಕ್ಷ ರೂಪಾಯಿ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ. ನೀರಿನ ಸಮಸ್ಯೆ ಉಂಟಾದ ಗ್ರಾಮಗಳಿಗೆ ಎರಡು ದಿನದೊಳಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲು ಆದೇಶಿಸಲಾಗಿದೆ. ಹೆಚ್ಚಿನ ಅನುದಾನ ಬೇಕಿದ್ದರೂ ಸರ್ಕಾರ ಒದಗಿಸಲಿದೆ ಎಂದು ಹೇಳಿದರು.

5 ಲಕ್ಷದ ವರೆಗೆ ಟೆಂಡರ್‌ಗೆ ವಿನಾಯಿತಿ: ಹಣಕಾಸು ಇಲಾಖೆ 1 ಲಕ್ಷ ಮೇಲ್ಪಟ್ಟ ಸರ್ಕಾರದ ಕಾಮಗಾರಿಗಳನ್ನು ಟೆಂಡರ್‌ ಮೂಲಕವೇ ನೀಡುವಂತೆ ಆದೇಶ ಹೊರಡಿಸಿದೆ. ಆದರೆ,  ಆರ್‌ಡಿಪಿಆರ್‌ ಇಲಾಖೆಯಲ್ಲಿ ಸಣ್ಣ ಪುಟ್ಟ ಕಾಮಗಾರಿ ಕೈಗೊಳ್ಳಲು ಎಲ್ಲದಕ್ಕೂ ಟೆಂಡರ್‌ ಪ್ರಕ್ರಿಯೆ ನಡೆಸಲು ಕಷ್ಟವಾಗುವುದರಿಂದ 5 ಲಕ್ಷದ ವರೆಗೆ ಟೆಂಡರ್‌ ಇಲ್ಲದೇ ಕಾಮಗಾರಿಗೆ ಅನುಮತಿ ನೀಡಲು ಆದೇಶ ಹೊರಡಿಸಲಾಗಿದೆ ಎಂದು ಹೇಳಿದರು.

ಕಸ ನಿರ್ವಹಣೆ: ಗ್ರಾಮೀಣ ಪ್ರದೇಶದಲ್ಲಿಯೂ ಸ್ವತ್ಛತೆಗೆ ಆದ್ಯತೆ ನೀಡಲಾಗಿದ್ದು, ಈಗಾಗಲೇ ಬೇಸ್‌ಲೈನ್‌ ಸಮೀಕ್ಷೆ ಪ್ರಕಾರ ಶೌಚಾಲಯ ನಿರ್ಮಾಣ ಮಾಡಲಾಗಿದ್ದು, ಉಳಿದ 4.5 ಲಕ್ಷ ಶೌಚಾಲಯಗಳನ್ನು ಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ.

ಅಲ್ಲದೇ ಕಸ ವಿಂಗಡಣೆಗೂ ಸೂಚಿಸಲಾಗಿದ್ದು ಉಡುಪಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಒಣ ಕಸದಿಂದ ಸುಸ್ತಿರ ನಿರ್ವಹಣೆ ಮಾಡುವ ಯೋಜನೆ ಆರಂಭಿಸಲಾಗಿದೆ. ಈಗಾಗಲೇ 90 ಗ್ರಾಮ ಪಂಚಾಯತಿಗಳಲ್ಲಿ ಕಸ ನಿರ್ವಹಣೆಗೆ ಚಾಲನೆ ನೀಡಲಾಗಿದ್ದು, ಈ ವರ್ಷ 500 ಪಂಚಾಯತಿಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತಿ ಸದಸ್ಯರೂ ತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಾಕಷ್ಟು ಅವಕಾಶ ಇದೆ. ಅವರು ಸಕ್ರಿಯರಾಗಿ ಕಾರ್ಯ ನಿರ್ವಹಿಸಿದರೆ ಯಾವುದೇ ಸಮಸ್ಯೆ ಇಲ್ಲ. ಅದನ್ನು ಬಿಟ್ಟು ನಾವೇಕೆ ಆಯ್ಕೆ ಆಗಬೇಕು ಎಂದು ಪ್ರಶ್ನಿಸಿದರೆ, ಸರ್ಕಾರ ಏನೂ ಮಾಡಲು ಆಗುವುದಿಲ್ಲ.
– ಕೃಷ್ಣ ಬೈರೇಗೌಡ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next