Advertisement

ಈ ಬಾನು ಈ ಹಕ್ಕಿ

07:11 AM Feb 23, 2019 | |

ವಿಮಾನವೆಂದರೆ ಚಿಕ್ಕಂದಿನಿಂದ ಅದೇನೋ ಕೆಟ್ಟ ಕುತೂಹಲ. ದೂರದಲ್ಲೆಲ್ಲೋ ಸಣ್ಣದಾಗಿ ಗುಂಯ್‌ ಎಂಬ ಸದ್ದು ಬಂತೆಂದರೆ, ಎದ್ದೆನೋ, ಬಿದ್ದೆನೋ ಎಂದು ಮನೆಯೊಳಗಿಂದ ಓಡಿ ಹೋಗಿ ತಲೆಯೆತ್ತಿ ನೋಡುವುದು ರೂಢಿ. ರೂಢಿ ಅನ್ನುವುದಕ್ಕಿಂತ ಅದೊಂದು ಸಂಭ್ರಮ.
ಶಾಲಾ ದಿನಗಳಲ್ಲೆಲ್ಲಾ ಮನೆ ಮೇಲೆ ಲೋಹದ ಹಕ್ಕಿಗಳು ಹಾರುತ್ತಿದ್ದುದು ತೀರಾ ವಿರಳ. ತಿಂಗಳಿಗೊಮ್ಮೆ ಸದ್ದು ಕೇಳಿದರೆ ಅದೇ ಹೆಚ್ಚು. ಹಾಗಾಗಿ, ಸಣ್ಣ ಚುಕ್ಕಿಯಂತೆ ಕಂಡರೂ ಅದನ್ನು ನೋಡುವುದೆಂದರೆ ಖುಷಿ.

Advertisement

ಹೀಗಿರುವಾಗ ಕೆಲವೊಮ್ಮೆ ಆ ಉಕ್ಕಿನ ಹಕ್ಕಿ ಮೋಡದ ಮರೆ ಸೇರಿ ಅಗೋಚರವಾದರೆ ಆಗುತ್ತಿದ್ದ ಬೇಸರ ಅಷ್ಟಿಷ್ಟಲ್ಲ. ಅದೆಂಥ ಬೇಸರವೆಂದರೆ, ಅದರ ಹ್ಯಾಂಗೋವರ್‌ ಒಂದಿಡೀ ದಿನ ಹೋಗುತ್ತಲೇ ಇರಲಿಲ್ಲ. ವರ್ಷಗಳು ಉರುಳಿದವು. ವಿಮಾನ ನೋಡುವ ಆಸಕ್ತಿ ಕೂಡ ಕಡಿಮೆಯಾಯಿತು. ಬೆಂಗಳೂರಿಗೆ ಬಂದ ಮೇಲಂತೂ ಆ ಕುತೂಹಲ, ಕಾತರ ಎಳ್ಳಷ್ಟೂ ಉಳಿಯಲಿಲ್ಲ. ಇಲ್ಲಿ ದಿನಕ್ಕೆ ಅದೆಷ್ಟು ಉಕ್ಕಿನ ಹಕ್ಕಿಗಳು ಸದ್ದು ಮಾಡಿ ಕರೆಯುತ್ತವೋ ಲೆಕ್ಕವಿಲ್ಲ. ಆದರೆ, ಹೊರಗೆ ಹೋಗಲು ಮನಸಿಲ್ಲ. ಕಚೇರಿ ಒಳಹೊಕ್ಕರೆ ಉಕ್ಕಿನ ಹಕ್ಕಿಗಳ ಸದ್ದು ಕೇಳುವುದೂ ಇಲ್ಲ. ಇನ್ನು ಈ ಟ್ರಾಫಿಕ್‌ನಲ್ಲಿ ಸರಿದಾಡುವ ವಾಹನಗಳ ಸದ್ದು, ವಿಮಾನದಂಥ ವಿಮಾನದ ಸದ್ದನ್ನೇ ಅಡಗಿಸಿಬಿಟ್ಟಿದೆ ಎನ್ನುವುದು ಕೂಡಾ ನಿಜ.

ಇವೆಲ್ಲದರ ನಡುವೆ ಬಾಲ್ಯದಲ್ಲಿ ವಿಮಾನ ನೋಡಿದಾಗಿನ ಸಂಭ್ರಮ ಮೊನ್ನೆ ಮರುಕಳಿಸಿತು. ಅದು ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಕೃಪೆ. ಉಕ್ಕಿನ ಹಕ್ಕಿಗಳನ್ನು ಅಷ್ಟು ಹತ್ತಿರದಿಂದ ನೋಡಿದ ಉದಾಹರಣೆಯೇ ಇಲ್ಲ. ಆದರೆ, ಅಂದು ನೆತ್ತಿಯ ಮೇಲೆ ಏರ್‌ಬಸ್‌, ಮಿಗ್‌, ಕಾಪ್ಟರ್‌ಗಳು, ಟನ್‌ಗಳಷ್ಟು ತೂಕದ ಮಿಸೈಲ್‌ಗ‌ಳನ್ನು ಹೊತ್ತೂಯ್ಯುವ ಯುದ್ಧ ವಿಮಾನಗಳು ದೊಡ್ಡ ಸದ್ದು ಮಾಡಿಕೊಂಡು, ಒಂದರ ಹಿಂದೊಂದು ಹಾರಿದಾಗ ಆದ ರೋಮಾಂಚನ ಅಷ್ಟಿಷ್ಟಲ್ಲ. ಒಂದೆರಡು ಅಡಿ ಜಿಗಿದರೆ ಕೈಗೆಟಕುತ್ತವೇನೋ ಎನ್ನುವಷ್ಟು ಹತ್ತಿರ ಹಾರುತ್ತಿದ್ದುದ್ದು, ಬಾಲ್ಯದಲ್ಲಿ ಚುಕ್ಕಿಯಂತೆ ಕಂಡು ಕುತೂಹಲ ಕೆರಳಿಸಿದ್ದ ಅದೇ ವಿಮಾನಗಳು. ಆದರವು ಚುಕ್ಕಿಯಷ್ಟು ಚಿಕ್ಕವಲ್ಲ; ಬಂಡೆಗಿಂತಲೂ ದೊಡ್ಡವಾಗಿದ್ದವು.

Advertisement

ಒಟ್ಟಾರೆ “ಏರೋ ಇಂಡಿಯಾ’ ವೀಕ್ಷಣೆ ಬಾಲ್ಯದ ಕನಸನ್ನು ನನಸಾಗಿಸಿದ ಕ್ಷಣ. ಅದು ವಿಮಾನಗಳ ಶಕ್ತಿ, ಪೈಲಟ್‌ಗಳ ಕೌಶಲ್ಯಕ್ಕೆ ಕನ್ನಡಿಯಷ್ಟೇ ಅಲ್ಲ, ದೇಶದ ಭದ್ರತಾ ಪಡೆಯ ಸಾಮರ್ಥ್ಯ ಏನೆಂಬುದನ್ನು ಜಗತ್ತಿಗೇ ತಿಳಿಸುವ ಮಹಾಮೇಳ. ಇಂಥದೊಂದು ಅಸಾಧಾರಣ ಪ್ರದರ್ಶನ ಬೆಂಗಳೂರಿನಲ್ಲಿ ನಡೆಯುತ್ತದೆ ಎಂಬುದು ಎಲ್ಲ ಕನ್ನಡಿಗರೂ ಹೆಮ್ಮೆ ಪಡುವ ವಿಷಯ. ಬಾನಂಚಿನಲ್ಲಿದ್ದ ಬಾಲ್ಯದ ಆ ಸಂಭ್ರಮವನ್ನು ಕಣ್ಣಂಚಿಗೆ ತಂದಿರಿಸಿದ 
ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೊಂದು ಧನ್ಯವಾದ!

ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ವಿಮಾನಗಳ ಶಕ್ತಿ, ಪೈಲಟ್‌ಗಳ ಕೌಶಲ್ಯಕ್ಕೆ ಕನ್ನಡಿ ಎಂಬುದೇನೋ ನಿಜ. ಇದು ದೇಶದ ಭದ್ರತಾ 
ಪಡೆಯ ಸಾಮರ್ಥ್ಯವನ್ನು ಜಗತ್ತಿಗೇ ತಿಳಿಸುವ ಮಹಾಮೇಳವೂ ಹೌದು. ಆದರೆ ಅದಕ್ಕಿಂತ ಹೆಚ್ಚಾಗಿ ಬಾಲ್ಯದಲ್ಲಿ ವಿಮಾನದ ಸದ್ದು ಕೇಳಿದರೆ ಸಾಕು; ಮನೆಯಿಂದ, ಶಾಲೆಗಳಿಂದ ಹೊರಬಂದು ಆಕಾಶದತ್ತ ದೃಷ್ಟಿ ನೆಟ್ಟು ಕಾಣುತ್ತಿದ್ದ ಕನಸುಗಳಿಗೆ ರೆಕ್ಕೆ ಹಚ್ಚುವ ಸಮಾರಂಭವೂ ಹೌದು.

ವಾಹ್‌ರೇ ವಾಹ್‌…
“ಸಾರಂಗ್‌’ ತಂಡದ ನಾಲ್ಕು ಹೆಲಿಕಾಪ್ಟರ್‌ಗಳು ಒಟ್ಟಿಗೇ ಹಾರುತ್ತಾ, ಬೆಳೊರೆಯಂಥ ಧೂಮ ಬಿಟ್ಟು ಬಾನಂಗಳದಲ್ಲಿ ಚಿತ್ತಾರ ಮೂಡಿಸುತ್ತಿದ್ದರೆ ಮನಸಿನಲ್ಲೇ ತಕಧಿಮಿತ. ಸಿಡಿಲಬ್ಬರದ ಸದ್ದು ಮಾಡುತ್ತಾ ಸಾವಿರಾರು ಕಿ.ಮೀ. ವೇಗವಾಗಿ ಚಲಿಸುವ “ತೇಜಸ್‌’ ಸಾಕ್ಷಾತ್‌ ಮಿಂಚಿನಂತೆ ಕಂಡಿತು. ಗಾಳಿಯಲ್ಲಿ ಗುಂಯ್‌ಗಾಡುತ್ತಲೇ ಪಲ್ಟಿ ಹೊಡೆದ ಆ ತೇಜಸ್ಸಿಗೆ ಸಾಟಿಯಿಲ್ಲ ಎಂದೆನಿಸಿತು. ಕಡುಗಪ್ಪು ಬಣ್ಣದ “ಎಚ್‌ಎಎಲ್‌ ರುದ್ರ’ನ ಪೌರುಷ ಓದಿದ ನೆನಪು. ಅಂದು ಕಣ್ಮುಂದೆ ಬಂದ ಆ ರುದ್ರ ನಿಜವಾಗ್ಯೂ ಸುಭದ್ರ. ಜೀಪು ಸೇರಿದಂತೆ ಟನ್‌ಗಟ್ಟಲೆ ತೂಕದ ವಸ್ತುಗಳನ್ನು ಹೊತ್ತೂಯ್ಯುವ ಆ ಕಾಪ್ಟರ್‌ ಶಕ್ತಿ ಪ್ರದರ್ಶನ “ರುದ್ರ’ರಮಣೀಯ.

    ಪೈಲಟ್‌ಗಳಿಗೆ ಹ್ಯಾಟ್ಸಾಫ್
“ಸೂರ್ಯ ಕಿರಣ್‌’ನ ಬಾನಂಗಳ ಸಾಹಸಗಳನ್ನು ಕಣ್ತುಂಬಿಕೊಂಡವರೇ ಧನ್ಯ. ಒಂಬತ್ತು ವಿಮಾನಗಳು, ಒಂದರ ಪಕ್ಕ ಒಂದು, ಗೆರೆ ಹೊಡೆದಷ್ಟೇ ಕರಾರುವಕ್ಕಾಗಿ ಚಲಿಸುವ ಅವುಗಳ ಚಾಕಚಕ್ಯತೆ ವರ್ಣಿಸಲಾಗದು. ಅದರಲ್ಲೂ ಮೈ ಚಳಿ ಬಿಟ್ಟು ವಿಮಾನ ಹಾರಿಸುವ ಪೈಲಟ್‌ಗಳ ಕೌಶಲ್ಯಕ್ಕೆ ಹ್ಯಾಟ್ಸ್‌ಆಫ್ ಹೇಳಲೇಬೇಕು. ಒಂಬತ್ತೂ ವಿಮಾನಗಳು ಶಿಸ್ತಿನಿಂದ ಸಾಗುವ ಪರಿ, ಕ್ಷಣಾರ್ಧದಲ್ಲಿ ದಿಕ್ಕಿಗೊಂದಾಗಿ ಚದುರುವ ಆ ದೃಶ್ಯವೇ ರೋಚಕ. ಆದರೆ, ಅಭ್ಯಾಸದ ವೇಳೆ ಸಂಭವಿಸಿದ ದುರಂತದಲ್ಲಿ ಸೂರ್ಯಕಿರಣ್‌ ತಂಡದ ವಿಂಗ್‌ ಕಮಾಂಡರ್‌ ಸಾಹಿಲ್‌ ಗಾಂಧಿ ಅಸುನೀಗಿದ ಸುದ್ದಿ ಕೇಳಿ ಮನಸ್ಸು ಭಾರವಾಯಿತು.

ಚಿತ್ರ-ಬರಹ: ಬಸವರಾಜ್‌ ಕೆ. ಜಿ.

Advertisement

Udayavani is now on Telegram. Click here to join our channel and stay updated with the latest news.

Next