Advertisement

ಈ ರಸ್ತೆ ದುರಸ್ತಿಗೆ ಮುಹೂರ್ತವೇ ಬಂದಿಲ್ಲ

08:10 AM Aug 11, 2017 | Harsha Rao |

ಸುಳ್ಯ : ತಾಲೂಕಿನ ಅತೀ ದೊಡ್ಡ ಗ್ರಾಮ ಎಂಬ ಹೆಗ್ಗಳಿಕೆ ಆಲೆಟ್ಟಿ ಗ್ರಾಮದ್ದು. ಅಂದಹಾಗೆ ಅಲೆಟ್ಟಿ ಬರೀ ದೊಡ್ಡ ಗ್ರಾಮವಷ್ಟೇ ಅಲ್ಲ; ಇಲ್ಲಿ ರಸ್ತೆಗಳ ದುರಸ್ತಿಯೂ ಸೇರಿದಂತೆ ಮೂಲ ಸೌಕರ್ಯಗಳ ಕೊರತೆಯ ಪಟ್ಟಿಯೂ ದೊಡ್ಡದಿದೆ. 
ಮೂವತ್ತು ವರ್ಷಗಳಿಂದ ಕೋಲ್ಚಾರು- ಪೈಂಬೆಚ್ಚಾಲು ರಸ್ತೆ ದುರಸ್ತಿ ಕಾಣದೇ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ, ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಈ ರಸ್ತೆಯ ಮೂರ್‍ನಾಲ್ಕು ಕಡೆ ಅಲ್ಲಲ್ಲಿ ಸ್ವಲ್ಪ ಕಾಂಕ್ರೀಟ್‌ ಹಾಕಲಾಗಿದೆ. ಉಳಿದ ರಸ್ತೆಯನ್ನು ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲ.

Advertisement

ರಸ್ತೆ ಅಭಿವೃದ್ಧಿಗೊಳಿಸುವಂತೆ ಸಂಬಂಧ ಪಟ್ಟ ಇಲಾಖೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಚುನಾವಣೆ ಸಂದರ್ಭದಲ್ಲಿ ಜನ ಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡು ಚುನಾವಣಾ ಬಹಿಷ್ಕಾರ ಹಾಕಿದಾಗ, ರಸ್ತೆ ದುರಸ್ತಿಯ ಭರವಸೆ ನೀಡಲಾಗುತ್ತದೆ. ಆದರೆ ಬಳಿಕವೂ ದುರಸ್ತಿಯಾಗದು ಎಂಬುದು ಗ್ರಾಮಸ್ಥರ ಅಭಿಪ್ರಾಯ.

ಪಕ್ಷಭೇದ‌ ಮರೆತು ಹೋರಾಟ
ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಹಿಡಿದು ಮುಖ್ಯಮಂತ್ರಿ, ಸಚಿವರಿಗೆ, ಶಾಸಕರಿಗೆ, ಜಿ.ಪಂ., ತಾ.ಪಂ., ಗ್ರಾ.ಪಂ. ಹೀಗೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸ ಲಾಗಿದೆ. ಯಾವ ಸ್ಪಂದನವೂ ಇಲ್ಲ. ಆದರೆ ನಾವು ಪಕ್ಷ ಭೇದ‌ ಮರೆತು ಹೋರಾಡು ತ್ತಿದ್ದೇವೆ. ಯಾರು ರಸ್ತೆ ಅಭಿವೃದ್ಧಿ ಮಾಡುತ್ತಾರೋ ಅವರಿಗೆ ನಮ್ಮ ಮತ ಎನ್ನುತ್ತಾರೆ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಗೌಡ.

ಆಲೆಟ್ಟಿ ಗ್ರಾ.ಪಂ. ಚುನಾವಣಾ ಸಂದರ್ಭ ದಲ್ಲಿ ಶಾಸಕ ಅಂಗಾರ ಎಸ್‌.ಅವರು ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿದರೆ ರಸ್ತೆ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದ್ದರು. ಅವರ ಮಾತಿಗೆ ಬೆಲೆ ಕೊಟ್ಟೆವಾದರೂ ರಸ್ತೆ ಅಭಿವೃದ್ಧಿಯಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

ನಿರಂತರ ಶ್ರಮದಾನ
ರಾಮಕೃಷ್ಣ ಗೌಡ ಕೊಯಿಂಗಾಜೆ ಅವರು ತಾ.ಪಂ. ಅಧ್ಯಕ್ಷರಾಗಿದ್ದಾಗ ರಸ್ತೆಯನ್ನು ಸ್ವಲ್ಪ ಅಭಿವೃದ್ಧಿಪಡಿಸಿದ್ದರು. ಆ ಬಳಿಕ ಕೋಲ್ಚಾರಿನಿಂದ ಪೈಂಬೆಚ್ಚಾಲುವರೆಗಿನ ರಸ್ತೆ ದುರಸ್ತಿಯಾಗದೇ ತೀರಾ ಹದಗೆ ಟ್ಟಿದೆ. ಇದೇ ರಸ್ತೆ ಅಜ್ಜಾವರವನ್ನು ಸಂಪರ್ಕಿಸು ತ್ತದೆ. ಜಿ.ಪಂ. ಗೆ ಸಂಬಂಧಿಸಿದ ಈ ರಸ್ತೆ ಯನ್ನು  500 ಕ್ಕೂ ಹೆಚ್ಚಿನ ಕುಟುಂಬ ದವರು ಬಳಸುತ್ತಿದ್ದಾರೆ. ಶಾಲೆ, ದೇವಸ್ಥಾನ, ದೈವಸ್ಥಾನ, ಮಸೀದಿಗಳು ಈ ರಸ್ತೆಯಲ್ಲಿವೆ.

Advertisement

ಮಳೆಗಾಲದಲ್ಲಿ ಈ ರಸ್ತೆಯಲ್ಲಿ ವಾಹ ನದಲ್ಲಿ ಸಂಚರಿಸುವುದಿರಲಿ, ನಡೆದಾಡು ವುದೂ ಕಷ್ಟ. ಊರವರು ಸೇರಿ ತಮ್ಮೂರಿಗೆ ಬಸ್ಸು ಬರಲಿ ಎಂದು ಶ್ರಮದಾನ ನಡೆಸಿ ಹೊಂಡ ಮುಚ್ಚಿ ತಮ್ಮೂರಿಗೆ ಬಸ್ಸು ಬರಲಿ ಎಂದು ದುರಸ್ತಿಗೊಳಿಸುತ್ತಾ ಬರುತ್ತಿದ್ದಾರೆ. ಮೂರು ವಾರದಿಂದ ಅರ್ಧಕ್ಕೆ ಬಂದು ನಿಲ್ಲುತ್ತಿದ್ದ ಬಸ್ಸನ್ನು ರಸ್ತೆ ಸರಿಪಡಿಸಿ ಊರೊಳಗೆ ಬರುವಂತೆ ಮಾಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಿಂದ 25 ಲಕ್ಷ ರೂ. ಅನುದಾನ ಬಂದಿದೆ ಎಂದು ಕಾಂಗ್ರೆಸ್‌ ಪಕ್ಷ ಬ್ಯಾನರ್‌ ಹಾಕಿದ್ದರೂ ಯಾವುದೇ ಕಾಮಗಾರಿ ನಡೆದಿಲ್ಲ.

-  ಗಂಗಾಧರ ಮಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next