ನವದೆಹಲಿ: ಭಾರತೀಯ ಜನತಾ ಪಕ್ಷದ ವಿಜಯ್ ರೂಪಾನಿ ಅವರು ಶನಿವಾರ (ಸೆಪ್ಟೆಂಬರ್ 11) ದಿಢೀರ್ ಬೆಳವಣಿಗೆಯಲ್ಲಿ ಗುಜರಾತ್ ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಗುಜರಾತ್ ವಿಧಾನಸಭಾ ಚುನಾವಣೆಗೆ ಒಂದೂವರೆ ವರ್ಷ ಬಾಕಿ ಇರುವಾಗಲೇ ರೂಪಾನಿ ರಾಜೀನಾಮೆ ಹಲವಾರು ಊಹಾಪೋಹಕ್ಕೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ:ಟೆಸ್ಟ್ ರದ್ದಾದ ಕೋಪಕ್ಕೆ ಐಪಿಎಲ್ ಗೆ ಕೈಕೊಟ್ಟ ಮಲಾನ್, ಬೇರಿಸ್ಟೋ, ಕ್ರಿಸ್ ವೋಕ್ಸ್!
ವಿಜಯ್ ರೂಪಾನಿ ಅವರ ರಾಜೀನಾಮೆಗೆ ಗುಜರಾತ್ ನ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿನ ಕೋವಿಡ್ 19 ಪರಿಸ್ಥಿತಿಯನ್ನು ನಿಭಾಯಿಸಲು ವಿಫಲರಾಗಿರುವುದಕ್ಕೆ ಬಿಜೆಪಿ ಹೈಕಮಾಂಡ್ ರೂಪಾನಿ ಅವರ ರಾಜೀನಾಮೆ ಪಡೆದಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿನ ಕೋವಿಡ್ ಬಿಕ್ಕಟ್ಟನ್ನು ನಿಭಾಯಿಸಲು ವಿಫಲರಾಗಿದ್ದಕ್ಕೆ ರೂಪಾನಿ ಅವರು ರಾಜೀನಾಮೆ ನೀಡಿದ್ದರೆ ರಾಜ್ಯದ ಜನರು ಅಭಿನಂದಿಸುತ್ತಿದ್ದರು ಎಂದು ಮೇವಾನಿ ಟ್ವೀಟರ್ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.
ವಿಜಯ್ ರೂಪಾನಿ ಅವರ ರಾಜೀನಾಮೆ ಹಿಂದೆ 2022ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಈ ಬೆಳವಣಿಗೆ ನಡೆದಿರುವುದಾಗಿ ಜಿಗ್ನೇಶ್ ಮೇವಾನಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಗುಜರಾತ್ ನಲ್ಲಿನ ಕೋವಿಡ್ ಸೋಂಕಿನ ಸಾವಿನ ಕುರಿತು ಆರೋಪ ಕೇಳಿಬಂದಿತ್ತು. ಜುಲೈ ತಿಂಗಳಿನಲ್ಲಿ ಗುಜರಾತ್ ನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಾರ್ಶ್ವವಾಯು ಪೀಡಿತ ಕೋವಿಡ್ ರೋಗಿಯ ಮುಖದ ಮೇಲೆ ಇಲಿಗಳು ಹರಿದಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅಷ್ಟೇ ಅಲ್ಲ ಕೋವಿಡ್ ಆಸ್ಪತ್ರೆಗಳಲ್ಲಿ ಅಗ್ನಿ ಸುರಕ್ಷತಾ ಕ್ರಮ ತೆಗೆದುಕೊಳ್ಳುವಂತೆ ಸುಪ್ರೀಂಕೋರ್ಟ್ ವಿಜಯ್ ರೂಪಾನಿ ನೇತೃತ್ವದ ಸರ್ಕಾರಕ್ಕೆ ಚಾಟಿ ಬೀಸಿತ್ತು.