ತನ್ನ ಮೇಲಿನ ಪರಕೀಯರ ಆಕ್ರಮಣಕ್ಕೂ ಮೊದಲು ಸರ್ವ ಸಮೃದ್ಧವಾಗಿದ್ದ ದೇಶ ಭಾರತ. ಇದನ್ನು ಸಾಕ್ಷೀಕರಿಸುವ ನಾನಾ ದಾಖಲೆಗಳು ಇಂದಿಗೂ ನಮ್ಮ ಕಣ್ಣ ಮುಂದಿದೆ. ವಿಶ್ವದ ಏಳು ಅದ್ಭುತಗಳ ಪೈಕಿ ಒಂದಾಗಿರುವ ಆಗ್ರಾದ ತಾಜ್ ಮಹಲ್, ಯುನೆಸ್ಕೋದ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅಜಂತಾ, ಎಲ್ಲೋರಾದ ಗುಹಾಂತರ ದೇಗುಲಗಳು, ಖಜ್‌ರಾಹೋ ದೇವಾಲಯ, ಎಲಿಫೆಂಟಾ ಗುಹೆಗಳು, ಮಹಾಬಲಿಪುರಂನ ಸ್ಮಾರಕ ಸಮೂಹಗಳು, ತಮಿಳುನಾಡಿನ ಪ್ರಸಿದ್ಧ ಚೋಳ ದೇವಾಲಯಗಳು, ಕರ್ನಾಟಕದ ಹಂಪಿ, ಪಟ್ಟದಕಲ್ಲು, ಕೊನಾರ್ಕದ ಸೂರ್ಯ ದೇವಾಲಯ, ಸಾಂಚಿಯ ಸ್ತೂಪ, ರಾಜಸ್ಥಾನದ ಕೋಟೆಗಳು ಹೀಗೆ ಹತ್ತು ಹಲವು ಪ್ರಾಚೀನ ಸ್ಮಾರಕಗಳು ಭಾರತದ ಸಿರಿವಂತಿಕೆಯ ಮುಕುಟಗಳು.
ಇವೆಲ್ಲದರ ಹಿಂದೆಯೂ ಭಾರತದ ರಾಜಮನೆತನಗಳ ಅಮೂಲ್ಯ ಕೊಡುಗೆಗಳಿವೆ. ಶತಶತಮಾನಗಳ ಕಾಲ ಭಾರತದ ನಾನಾ ಭಾಗಗಳಲ್ಲಿ ವಿವಿಧ ರಾಜವಂಶಗಳು ಆಳ್ವಿಕೆ ನಡೆಸಿದ್ದವು. ಈ ರಾಜಮನೆತನದ ಆಳ್ವಿಕೆಗಳು ನಮ್ಮ ಇತಿಹಾಸದಲ್ಲಿ ಪ್ರಮುಖ ಭಾಗವೇ ಆಗಿದೆ.
ಅಂದಿನ ರಾಜಪರಂಪರೆಯ ಆಡಳಿತದ ಕುರುಹೇ ಇಂದಿಗೂ ನಮ್ಮೆದುರಿಗಿರುವ ಭವ್ಯವಾದ ಅರಮನೆಗಳು, ಭದ್ರವಾದ ಕೋಟೆಗಳು, ಸಾಕಷ್ಟು ಐತಿಹಾಸಿಕ ಕಟ್ಟಡಗಳು, ಅದ್ಭುತ ದೇವಾಲಯಗಳು. ರಾಜ-ಮಹಾರಾಜರು ಕೇವಲ ಕೋಟೆ-ಕೊತ್ತಲಗಳು, ದೇವಾಲಯಗಳನ್ನಷ್ಟೇ ನಿರ್ಮಿಸದೆ ಭವ್ಯ ಅರಮನೆಗಳನ್ನೂ ನಿರ್ಮಿಸಿ ಇಂದಿನ ಜನರ ಕಲ್ಪನೆಗೂ ಎಟುಕದ ವಿಲಾಸಿ ಜೀವನವನ್ನೇ ನಡೆಸಿ ಮರೆಯಾಗಿದ್ದಾರೆ. ಇಂತಹಾ ಭವ್ಯ ಅರಮನೆಗಳ ಪೈಕಿ ಗುಜರಾತ್‌ನ ವಡೋದರ ನಗರದಲ್ಲಿರುವ ಲಕ್ಷ್ಮೀ ವಿಲಾಸ್ ಅರಮನೆ ಕೂಡಾ ಒಂದು. ಭಾರತದ ಹೆಮ್ಮೆಯಾದ ಈ ಅರಮನೆ ತನ್ನದೇ ಆದ ವಿಶೇಷತೆಯನ್ನೂ ಹೊಂದಿದೆ. ಇನ್ನೂ ವಿಶೇಷವೇನೆಂದರೆ, 170 ಕೊಠಡಿಗಳನ್ನು ಹೊಂದಿರುವ ಲಕ್ಷ್ಮೀ ವಿಲಾಸ್ ಅರಮನೆಯ ಗಾತ್ರ ಲಂಡನ್‌ನ ಬಕ್ಕಿಂಗ್‌ಹ್ಯಾಮ್ ಪ್ಯಾಲೇಸ್‌ಗಿಂತ ನಾಲ್ಕು ಪಟ್ಟು ದೊಡ್ಡದು.!
ಇತಿಹಾಸ
1890 ರಲ್ಲಿ ನಿರ್ಮಿಸಲಾದ ಭವ್ಯವಾದ ಲಕ್ಷ್ಮಿ ವಿಲಾಸ್ ಅರಮನೆಯು ಇಂದು ವಡೋದರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಮರಾಠಾ ಮಹಾರಾಜ ಸಯ್ಯಾಜಿರಾವ್ ಗಾಯಕ್ವಾಡ್ III ಅವರಿಂದ ಈ ಭವ್ಯವಾದ ಅರಮನೆ ನಿರ್ಮಾಣವಾಗಿದೆ. ಈ ಕಟ್ಟಡವನ್ನು ನಿರ್ಮಿಸಲು ಸಯ್ಯಾಜಿರಾವ್ ಆ ಕಾಲದ ಪ್ರಖ್ಯಾತ ವಾಸ್ತುಶಿಲ್ಪಿ ಮೇಜರ್ ಚಾರ್ಲ್ಸ್ ಮಾಂಟ್ ಅವರನ್ನು ನಿಯೋಜಿಸಿದ್ದರಂತೆ. 1890 ರಲ್ಲೇ ಈ ವಿಲಾಸಿ ಅರಮನೆಯ ನಿರ್ಮಾಣಕ್ಕೆ ಬರೋಬ್ಬರಿ 27 ಲಕ್ಷ ರೂ.ಗಳನ್ನು ವಿನಿಯೋಗಿಸಲಾಗಿತ್ತು. ಇಂದು ಈ ಅರಮನೆಯ ಮೌಲ್ಯ ಸುಮಾರು 25 ಸಾವಿರ ಕೋಟಿ ರೂ.
ಮುಖ್ಯವಾಗಿ ಅರಮನೆಯನ್ನು ಇಂಡೋ-ಸಾರ್ಸೆನಿಕ್ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗಿದ್ದು, ಭಾರತೀಯ, ಇಸ್ಲಾಮಿಕ್ ಮತ್ತು ಯುರೋಪಿಯನ್ ಅಂಶಗಳ ಮಿಶ್ರಣವನ್ನು ಹೊಂದಿದೆ. ಭಾರತದ ಪರಂಪರೆಯ ಅದ್ಭುತಗಳ ಪೈಕಿ ಒಂದಾಗಿರುವ ಲಕ್ಷ್ಮಿ ವಿಲಾಸ್ ಅರಮನೆ ಈಗ ವಡೋದರಾದಲ್ಲಿ ವಿಶ್ವದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ಸೆಳೆಯುವ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ.
ಇದು ಹತ್ತೊಂಬತ್ತನೇ ಶತಮಾನದಲ್ಲಿ ನಿರ್ಮಿಸಲಾದ ಅತಿದೊಡ್ಡ ಖಾಸಗಿ ನಿವಾಸ ಎಂಬ ಖ್ಯಾತಿಯನ್ನೂ ಪಡೆದಿದೆ. ಆ ಕಾಲದಲ್ಲಿ ಇದು ಪ್ರಾಂತ್ಯದ ಮಹಾರಾಜರ ಅಧಿಕೃತ ನಿವಾಸವಾಗಿತ್ತಂತೆ. ಈಗ ಇದು ಬರೋಡದ ರಾಜಮನೆತನದ ನಿವಾಸವಾಗಿ ಉಳಿದಿದೆ.
ಲಕ್ಷ್ಮಿ ವಿಲಾಸ್ ಅರಮನೆಯು ಹಲವಾರು ಬಣ್ಣದ ಅಮೃತಶಿಲೆ, ಟೈಲ್ಸ್, ಐಷಾರಾಮಿ ವಿನ್ಯಾಸಗಳು ಮತ್ತು ವಿವಿಧ ಕಲಾಕೃತಿಗಳನ್ನು ಒಳಗೊಂಡಿರುವ ಮನಮೋಹಕ ಒಳಾಂಗಣಗಳಿಂದಾಗಿ ಗುರುತಿಸಲ್ಪಟ್ಟಿದೆ. ಪಾಮ್ ಅಂಗಳ ಮತ್ತು ಕಾರಂಜಿಗಳ ಕಮಾನಿನ ಪ್ರವೇಶದ್ವಾರಗಳು ಅತ್ಯದ್ಭುತ ಎನಿಸುವಂತಿವೆ.
ಒಳಭಾಗದಲ್ಲಿ ಅಲಂಕೃತವಾದ ಇಟಾಲಿಯನ್ ಮೊಸಾಯಿಕ್ ನೆಲವನ್ನು ಪ್ರಸ್ತುತಪಡಿಸುವ ದರ್ಬಾರ್ ಹಾಲ್ ಅನ್ನು ಕಾಣಬಹುದಾಗಿದೆ. ಹಿಂದೆ, ಇದೇ ಸಭಾಂಗಣದಲ್ಲಿ ಸಂಗೀತ ಕಚೇರಿಗಳು ಮತ್ತು ಬೇರೆ ಬೇರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು. ದರ್ಬಾರ್ ಸಭಾಂಗಣವು ಸುಂದರವಾದ ಬಣ್ಣದ ಗಾಜಿನ ಕಿಟಕಿಗಳನ್ನು ಹೊಂದಿದೆ. ಸಭಾಂಗಣದ ಗೋಡೆಗಳಲ್ಲಿಯೂ ಕೂಡಾ ಅತ್ಯಂತ ನಾಜೂಕಾಗಿ ಚಿತ್ರಿಸಲಾದ ಮೊಸಾಯಿಕ್ ಅಲಂಕಾರಗಳನ್ನು ಕಾಣಬಹುದಾಗಿದೆ. ಲಕ್ಷ್ಮಿ ವಿಲಾಸ್ ಅರಮನೆಯು ಪ್ರಾಚೀನ ರಕ್ಷಾಕವಚಗಳು ಮತ್ತು ಟೆರಾಕೋಟಾ, ಅಮೃತಶಿಲೆ ಜೊತೆಗೆ ಕಂಚಿನ ಮತ್ತು ಇತರೆ ಪ್ರತಿಮೆಗಳ ಉತ್ತಮ ಸಂಗ್ರಹವನ್ನು ಹೊಂದಿದೆ. ಇಲ್ಲಿನ ಸೇನೆ ಬಳಸುತ್ತಿದ್ದ ಆಯುಧಗಳನ್ನು ಇಂದಿಗೂ ಇಲ್ಲಿನ ಶಸ್ತ್ರಾಸ್ತ್ರ ಸಂಗ್ರಹಾಗಾರದಲ್ಲಿ ಸುರಕ್ಷಿತವಾಗಿ ಸಂರಕ್ಷಿಸಿಡಲಾಗಿದೆ. ತಂತ್ರಜ್ಞಾನಗಳ ಬಳಕೆಯಲ್ಲೂ ಒಂದು ಹೆಜ್ಜೆ ಮುಂದಿದ್ದ ಈ ಅರಮನೆ 1890ರ ಸಮಯದಲ್ಲೇ ʻಲಿಫ್ಟ್ʼ ಸೌಲಭ್ಯವನ್ನು ಹೊಂದಿತ್ತು ಎಂದರೆ ನೀವು ನಂಬಲೇಬೇಕು.
ವಡೋದರದ ಲಕ್ಷ್ಮಿ ವಿಲಾಸ್ ಅರಮನೆಯು ಬರೋಬ್ಬರಿ 700 ಎಕರೆಗಳಷ್ಟು ವಿಸ್ತಾರವಾಗಿದೆ. ಅರಮನೆ ಮೈದಾನವು ಗಾಲ್ಫ್ ಕೋರ್ಸ್ ಮತ್ತು ಮಹಾರಾಜ ಸಯ್ಯಾಜಿರಾವ್ ಅವರ ವೈಯಕ್ತಿಕ ವಸ್ತುಸಂಗ್ರಹಾಲಯ, ʻಫತೇ ಸಿಂಗ್ ಮ್ಯೂಸಿಯಂʼ ಸೇರಿದಂತೆ ಅನೇಕ ಇತರ ಕಟ್ಟಡಗಳಿಂದ ಸುತ್ತುವರಿದಿದೆ. ಈ ವಸ್ತುಸಂಗ್ರಹಾಲಯದಲ್ಲಿ ಇತರ ವಸ್ತುಗಳ ಜೊತೆಗೆ, ರಾಜರ ವರ್ಣಚಿತ್ರಕಾರ ರಾಜಾ ರವಿವರ್ಮಾ ಅವರ ಮೂಲ ವರ್ಣಚಿತ್ರಗಳನ್ನು ಇಡಲಾಗಿದೆ. ಮಹಾರಾಜರ ಮಕ್ಕಳಿಗಾಗಿ ಈ ವಸ್ತುಸಂಗ್ರಹಾಲಯವನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ನಿರ್ಮಿಸಲಾಗಿತ್ತು ಎಂದು ಹೇಳಲಾಗಿದೆ. ಸದ್ಯ, ಈ ವಸ್ತುಸಂಗ್ರಹಾಲಯವು ರಾಜಮನೆತನಕ್ಕೆ ಸೇರಿದ ವಸ್ತುಗಳು, ವಿವಿಧ ಕಲಾಕೃತಿಗಳು, ಲೇಖನಗಳನ್ನು ಹೊಂದಿದೆ. ಅರಮನೆಯಲ್ಲಿರುವ ಇತರ ಕಟ್ಟಡಗಳಲ್ಲಿ ʻಮೋತಿಬಾಗ್ ಅರಮನೆʼ ಮತ್ತು ಗಾಲ್ಫ್ ಕೋರ್ಸ್ ಸೇರಿವೆ. ಇನ್ನೊಂದು ವಿಶೇಷವೇನೆಂದರೆ ಈ ಅರಮನೆಯು ಮೃಗಾಲಯವನ್ನೂ ಹೊಂದಿದೆ, ಇದರಲ್ಲಿ ಹಲವಾರು ಮೊಸಳೆಗಳು ಮತ್ತು ನವಿಲುಗಳನ್ನು ಸಾಕಲಾಗುತ್ತಿದೆ.
ನೀವೂ ಭೇಟಿ ನೀಡಬಹುದು!
ಇಷ್ಟೆಲ್ಲಾ ತಿಳಿದ ಮೇಲೆ ಈ ಅರಮನೆಗೆ ಒಮ್ಮೆಯಾದರೂ ಭೇಟಿ ನೀಡಬೇಕಲ್ಲವೇ ಎಂದು ನಿಮಗನ್ನಿಸಿದ್ದರೆ ಅದಕ್ಕೂ ಅವಕಾಶವಿದೆ.
ವರ್ಷದ ಯಾವುದೇ ಸಮಯದಲ್ಲಿ ಲಕ್ಷ್ಮಿ ವಿಲಾಸ ಅರಮನೆಗೆ ಭೇಟಿ ನೀಡಬಹುದು. ಬಿರುಬಿಸಿಲಿನಿಂದ ಕೂಡಿರುವ ವಡೋದರಾಕ್ಕೆ ಭೇಟಿ ನೀಡುವವರು ಹೆಚ್ಚಾಗಿ ಅಕ್ಟೋಬರ್‌ನಿಂದ ಫೆಬ್ರವರಿವರೆಗಿನ ಚಳಿಗಾಲದ ತಿಂಗಳುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಗಮನಿಸಬೇಕಾದ ಅಂಶವೆಂದರೆ, ಸೋಮವಾರದಂದು ಲಕ್ಷ್ಮೀ ವಿಲಾಸ ಅರಮನೆಯು ಮುಚ್ಚಿರುತ್ತದೆ. ಉಳಿದ ದಿನಗಳಲ್ಲಿ ಬೆಳಿಗ್ಗೆ 11:00 ರಿಂದ ಸಂಜೆ 5:00 ರವರೆಗೆ ಮಾತ್ರ ತೆರೆದಿರುತ್ತದೆ. ಅರಮನೆಗೆ ಭೇಟಿ ನೀಡುವ ಮೊದಲು ಅರಮನೆಯ ಕಚೇರಿಯಿಂದ ಪೂರ್ವಾನುಮತಿಯನ್ನೂ ಪಡೆಯಬೇಕಾಗುತ್ತದೆ.
ಭಾರತದ ಶ್ರೀಮಂತ ಶಿಲ್ಪಕಲಾ ಪರಂಪರೆಗಳ ಪೈಕಿ ಇಂತಹ ಹಲವಾರು ಅರಮನೆಗಳೂ ಸೇರಿವೆ. ಇವೆಲ್ಲವೂ ಭಾರತದ ಭವ್ಯ ಇತಿಹಾಸವನ್ನು ಪ್ರಪಂಚಕ್ಕೆ ಸಾರುವ ಸ್ಮಾರಕಗಳಾಗಿ ಇಂದಿಗೂ ಸಂರಕ್ಷಿಸಲ್ಪಟ್ಟಿದೆ. ವಡೋದರದ ಲಕ್ಷ್ಮೀ ವಿಲಾಸ್ ಅರಮನೆ ಬಕ್ಕಿಂಗ್‌ಹ್ಯಾಮ್ ಪ್ಯಾಲೇಸ್‌ಗಿಂತ ನಾಲ್ಕು ಪಟ್ಟು ದೊಡ್ಡದು ಎಂಬ ಖ್ಯಾತಿಯನ್ನು ಹೊಂದಿದ್ದರೂ ಇದು ಭಾರತದ ಅತಿ ದೊಡ್ಡ ಅರಮನೆ ಎಂದು ಹೇಳಲಾಗದು.!
~ ಪ್ರಣವ್ ಶಂಕರ್