Advertisement

ಈ ತಾಯಿ ಮಗುವನ್ನೂ ಗೆದ್ದಳು, ಜಗವನ್ನೂ ಗೆದ್ದಳು !

06:00 AM Jun 24, 2018 | |

ಕಾಣಿಯೂರು: ತಾಯಿಗಿಂತ ಬಂಧುವಿಲ್ಲ ಎಂಬ ಮಾತನ್ನು ಮತ್ತೆ ಸತ್ಯ ಮಾಡಿದ್ದಾರೆ ಪುತ್ತೂರು ತಾಲೂಕಿನ ದೋಳ್ಪಾಡಿಯ ಪ್ರಮೀಳಾ. ಶೇ.  81ರಷ್ಟು ಶ್ರವಣದೋಷವುಳ್ಳ ಶೋಭಿತ್‌ ಇಂದು ಎಲ್ಲರೊಂದಿಗೆ ಮಾತನಾಡಬಲ್ಲ, ಸಂವಾದಿಸಬಲ್ಲ. ಇಂಥದೊಂದು ಅಚ್ಚರಿಯ ಹಿಂದಿರುವ ಶಕ್ತಿ ತಾಯಿ. ಇಂಥದೊಂದು ಆದರ್ಶಕ್ಕೆ ಮಾದರಿಯಾಗಲು ಪ್ರಮೀಳಾ ಅಸ್ತ್ರವನ್ನಾಗಿಸಿಕೊಂಡಿದ್ದು ತಮ್ಮ ಸಹನೆ ಮತ್ತು ತ್ಯಾಗ. ಹಾಗಾಗಿ ಶೋಭಿತ್‌ ಇಂದು ಜಗತ್ತಿನೊಂದಿಗೆ ಸಂವಾದಿಸಬಲ್ಲ. ಅದರೊಂದಿಗೇ ತಾಯಿಯೊಬ್ಬಳು ಕಷ್ಟವಷ್ಟೇ ಅಲ್ಲ; ಜಗವನ್ನೇ ಗೆಲ್ಲಬಹುದೆಂದೂ ಸಾಬೀತುಪಡಿಸಿದ್ದಾರೆ ಪ್ರಮೀಳಾ. ಮಾತು, ವ್ಯವಹಾರ, ಬುದ್ಧಿವಂತಿಕೆಯಲ್ಲಿ ಸಹಜ ಮಕ್ಕಳಂತಾದ ಶೋಭಿತ್‌, ದೋಳ್ಪಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಗೆ ದಾಖಲಾಗಿದ್ದಾನೆ.  

Advertisement

ದೋಳ್ಪಾಡಿಯ ಜಯ
ಚಂದ್ರ ಗೌಡ ಬೆಂಗಳೂರಿನಲ್ಲಿ ಉದ್ಯಮಿ. ಹಳ್ಳಿಗಾಡಿನಲ್ಲಿ ಕಲಿತ ತಾಯಿ ಪ್ರಮೀಳಾ, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಶೋಭಿತ್‌ ಈ ದಂಪತಿಯ ಪ್ರಥಮ ಪುತ್ರ.

ತಾಯಿಯ ಆತಂಕ
ಶೋಭಿತ್‌ ಜನಿಸಿ ಸುಮಾರು ಎಂಟು ತಿಂಗಳಾಗುವಾಗ ತಾಯಿಗೆ ಅವನ ವರ್ತನೆಯ ಬಗ್ಗೆ ಸಂಶಯ ಮೂಡಿತ್ತು. ಆದರೆ ಹೇಳಿಕೊಳ್ಳಲು, ವೈದ್ಯರಿಗೆ ತೋರಿಸಲು ಧೈರ್ಯವಿರಲಿಲ್ಲ. ಒಂದು ವರ್ಷ ಮೂರು ತಿಂಗಳಾಗುವಾಗ ಏನೂ ಕಿವಿ ಕೇಳಿಸುವುದಿಲ್ಲ ಎಂಬುದು ತಿಳಿಯಿತು. ಬೆಂಗಳೂರಿನಲ್ಲಿ ಪ್ರತಿಷ್ಠಿತ ಆಸ್ಪತ್ರೆಯ ಶ್ರವಣದೋಷ ತಜ್ಞರಿಗೆ ತೋರಿಸಿದಾಗ ಒಂದು ಕಿವಿ ಶೇ. 90ರಷ್ಟು, ಇನ್ನೊಂದು ಶೇ. 80ರಷ್ಟು ದೋಷಹೊಂದಿರುವುದನ್ನು ದೃಢಪಡಿಸಿದರು. ಕೂಡಲೇ ಶಸ್ತ್ರ‌ ಚಿಕಿತ್ಸೆ ಮಾಡಿ, ಶ್ರವಣೋಪಕರಣ ಜೋಡಿಸಿದರೆ ಮಗು ಮಾತು ಕಲಿತೀತು; ಆದರೆ ಅದು ನಿಮ್ಮ ಪ್ರಯತ್ನವನ್ನೇ ಅವಲಂಬಿಸಿದೆ ಎಂದಿದ್ದರು. ಸುಮಾರು 10 ಲಕ್ಷ ರೂ.ಗಿಂತ ಹೆಚ್ಚು ಖರ್ಚಾದೀತೆಂದು ಹೇಳಿದ್ದರು. ಆದರೆ ಅಷ್ಟೊಂದು ಹಣವನ್ನು ಹೊಂದಿಸಿಕೊಳ್ಳಲು ದಂಪತಿಗೆ ಒಂದು ವರ್ಷ ಬೇಕಾಯಿತು.

ದಕ್ಷಿಣ ಕನ್ನಡ ಕ್ಷೇತ್ರದ ಸಂಸದರ ಮೂಲಕ ದಾಖಲೆಗಳನ್ನು ಸಲ್ಲಿಸಿದ ಬಳಿಕ ಪ್ರಧಾನ ಮಂತ್ರಿಯವರ ನಿಧಿಯಿಂದ 4 ಲಕ್ಷ ರೂ. ಮತ್ತು ಮುಖ್ಯಮಂತ್ರಿಯವರ ನಿಧಿಯಿಂದ 1.5 ಲಕ್ಷ ರೂ. ಲಭಿಸಿ ಮಗುವಿಗೆ ಶಸ್ತ್ರಚಿಕಿತ್ಸೆ ನಡೆದು ಒಂದು ಕಿವಿಗೆ ಶ್ರವಣೋಪಕರಣ ಜೋಡಿಸಿದರು. ಒಟ್ಟು ಆಸ್ಪತ್ರೆಯ ಖರ್ಚು 15 ಲಕ್ಷ ರೂ. ಮಿಕ್ಕಿತ್ತು.

ಈಗ ಶೋಭಿತ್‌ಗೆ 6 ವರ್ಷ ವಯಸ್ಸು. ದೋಳ್ಪಾಡಿ ಸರಕಾರಿ ಹಿ.ಪ್ರಾ. ಶಾಲೆಗೆ ಸೇರಿದ್ದಾನೆ. ಒಂದೆರಡು ಅಕ್ಷರಗಳ ಉಚ್ಚಾರ ವ್ಯತ್ಯಾಸ ಬಿಟ್ಟರೆ, ಕನ್ನಡ ಸ್ಪಷ್ಟವಾಗಿ ಮಾತನಾಡಬಲ್ಲ. ಇಂಗ್ಲಿಷ್‌ ಚೆನ್ನಾಗಿ ಗೊತ್ತಿದೆ. ತಾಯಿ ಪ್ರಮೀಳಾ ಅವರನ್ನು ಶಾಲೆಗೆ ಆಹ್ವಾನಿಸಿ ಯಶೋಗಾಥೆಯನ್ನು ಶಿಕ್ಷಕರಾದ ಪ್ರಕಾಶ್‌ ಮತ್ತು ಸಂದೇಶ್‌ ಅವರ ಸಹಕಾರದಲ್ಲಿ ಬಿ.ಐ.ಇ.ಆರ್‌.ಟಿ. ತಾರಾನಾಥ ಪಿ. ದಾಖಲಿಸುತ್ತಿದ್ದಾರೆ. ನಾಲ್ಕು ವರ್ಷಗಳ ಬಳಿಕ ಶ್ರವಣೋಪಕರಣ ಬದಲಿಸಬೇಕಿದೆ. ಇದಕ್ಕೆ ಸುಮಾರು 4 ಲಕ್ಷ ರೂ. ವೆಚ್ಚ ತಗಲಬಹುದು. ಈಗ ಮತ್ತೆ ಈ ಹಣ ಹೇಗೆ ಭರಿಸುವುದು ಎಂಬ ಚಿಂತೆ ದಂಪತಿಯದ್ದು.

Advertisement

ತಪಸ್ಸು ಆರಂಭವಾಗಿದ್ದು ಈಗ
ವೈದ್ಯರು ತಮ್ಮ ಕೆಲಸ ಮುಗಿಸಿದರು. ಇನ್ನೇನಿದ್ದರೂ ತಾಯಿಯದ್ದು. ಮಾತಿನ ಥೆರಪಿಯವರು ಪ್ರಮೀಳಾರಿಗೆ ಮಗುವಿಗೆ ಮಾತು ಕಲಿಸುವುದನ್ನು ಹೇಳಿಕೊಟ್ಟರು. ಅದನ್ನು ತಪಸ್ಸಿನಂತೆ ಪಾಲಿಸಿ, ಮಗುವಿನೊಂದಿಗೆ 24 ಗಂಟೆಯೂ ಕಣ್ಗಾವಲಾಗಿ ಕೆಲಸ ಮಾಡಿದರು. ಉದ್ಯೋಗ ತ್ಯಜಿಸಿ ಎರಡೂವರೆ ವರ್ಷದ ಮಗುವಿಗೆ ಭಾಷೆ ಕಲಿಸತೊಡಗಿದರು. ಮಗುವಿಗೆ 5 ವರ್ಷವಾದಾಗ ಎಲ್‌ಕೆಜಿಗೆ ಸೇರಿಸಿದರು. ಯು.ಕೆ.ಜಿ.ಗೆ ಬರುವಷ್ಟರಲ್ಲಿ ಶೋಭಿತ್‌ ಎಲ್ಲರಂತೆ ಮಾತನಾಡತೊಡಗಿದ್ದ. ಈ ಮಧ್ಯೆ
ಮತ್ತೂಂದು ಮಗುವಿಗೆ ಜನ್ಮಕೊಟ್ಟ ಪ್ರಮೀಳಾ, ಹಳ್ಳಿಗೆ ಹಿಂದಿರುಗಿದರೆ ಪತಿ ಬೆಂಗಳೂರಿನಲ್ಲಿ ವ್ಯವಹಾರ ಮುಂದುವರಿಸಿದರು. 

ಮಗುವಿನ ಬೆಳವಣಿಗೆಯನ್ನು ತಾಯಿಯ ಮೂಲಕ ಕೇಳುವಾಗ ಕಠಿನ ಪರಿಶ್ರಮವಿದ್ದರೆ ಯಾವುದೇ ಸಮಸ್ಯೆಗೆ ಪರಿಹಾರ ಸಾಧ್ಯ ಎಂಬುದು ಮನವರಿಕೆಯಾಗುತ್ತದೆ. ಈ ಯಶೋಗಾಥೆ ಎಲ್ಲ ತಾಯಂದಿರಿಗೆ ಪ್ರೇರಣೆಯಾಗಲಿ ಎಂಬುದು ನಮ್ಮ ಆಶಯ.
ತಾರಾನಾಥ ಪಿ. ಸವಣೂರು, ಬಿ.ಐ.ಇ. ಆರ್‌.ಟಿ

ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next