Advertisement
ಜೂನ್ 1 ರಿಂದ 11 ವರೆಗೆ 35 ಮಿ.ಮೀ. ಸಾಮಾನ್ಯ ಮಳೆ ಆಗಬೇಕಿದ್ದರೂ 180 ಮಿ.ಮೀ. ಮಳೆ ಸುರಿದಿದ್ದು, ಭೂಮಿ ಉತ್ತಮ ಹದಗೊಂಡಿದ್ದು, ಬಿತ್ತನೆ ಕಾರ್ಯ ಚುರುಕು ಪಡೆದಿದೆ. ಹವಾಮಾನ ಇಲಾಖೆಯ ಪ್ರಕಾರ ಆಗಸ್ಟ್-ಸೆಪ್ಟೆಂಬರ್ ವರೆಗೂ ಉತ್ತಮ ಮಳೆ ಇದೆ. ಇದರಿಂದಾಗಿ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಕೈ ಹಿಡಿಯುವ ನಿರೀಕ್ಷೆಯಲ್ಲಿ ಅನ್ನದಾತರು ಭೂದೇವಿ ಮಡಿಲಿಗೆ ಬೀಜ ಉಡಿ ತುಂಬುವ ಧಾವಂತದಲ್ಲಿ ತೊಡಗಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ 20 ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಡಿದ್ದು, ವಿತರಣೆಯೂ ಭರದಿಂದಲೇ ನಡೆದಿದೆ. ಇದಲ್ಲದೇ ರೈತರ ಅನುಕೂಲಕ್ಕಾಗಿ ಜಿಲ್ಲೆಯ ವಿವಿಧ ಕಡೆಗಳಲ್ಲಿ 17 ಉಪ ಕೇಂದ್ರಗಳನ್ನೂ ತೆರೆದು ಬೀಜ-ಗೊಬ್ಬರ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. 4.15 ಲಕ್ಷ ಹೆಕ್ಟೇರ್ ತೊಗರಿ
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಿಜಯಪುರ ಜಿಲ್ಲೆಯಲ್ಲಿ 7.11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ. ಇದರಲ್ಲಿ ತೊಗರಿ ಪ್ರದೇಶವೇ 4.15 ಲಕ್ಷ ಹೆಕ್ಟೇರ್ ಗುರಿ ಇದ್ದು, ಅದಾಗಲೇ ಸುಮಾರು 20 ಸಾವಿರ ಹೆಕ್ಟೇರ್‍ಗೂ ಹೆಚ್ಚು ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ.
Related Articles
Advertisement
ತೊಗರಿ ಬೀಜದಲ್ಲೇ ಜಿ.ಆರ್.ಜಿ.152, ಜಿ.ಆರ್.ಜಿ.811, ಬಿ.ಎಸ್.ಟಿ.ಆರ್. ತಳಿಯ ಗೊಗರಿ ಬೀಜಕ್ಕೆ ಭಾರಿ ಬೇಡಿಕೆ ಇದೆ. ಜಿಲ್ಲೆಯಲ್ಲಿರುವ ಜಿಲ್ಲೆಯಲ್ಲಿ 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯ ಗುರಿ ಇದ್ದು, ಇದಕ್ಕಾಗಿ ದಾಸ್ತಾನಿದ್ದ 4500 ಕ್ವಿಂಟಲ್ ಬೀಜದಲ್ಲಿ 1500 ಕ್ವಿಂಟಲ್ ಮೆಕ್ಕೆಜೋಳ ಬೀಜ ಮಾರಾಟವಾಗಿದೆ. ಇದರ ಹೊರತಾಗಿ 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ, 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಜ್ಜೆ ಹಾಗೂ ಇತರೆ ಪ್ರದೇಶದಲ್ಲಿ ಹೆಸರು, ಉದ್ದು, ಸೂರ್ಯಕಾಂತಿ ಸೇರಿ ಇತರೆ ಬಿತ್ತನೆಗೆ ಗುರಿ ಇದೆ.
80 ಸಾವಿರ ಮೆ.ಟ. ಗೊಬ್ಬರ : ಇನ್ನು ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಜೂನ್ ಅಂತ್ಯದ ವರೆಗೆ 50 ಸಾವಿರ ಮೆ.ಟ. ರಸಗೊಬ್ಬರಕ್ಕೆ ಬೇಡಿಕೆ ಇದ್ದು, 80 ಸಾವಿರ ಮೆ.ಟ. ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ.
ಇದರಲ್ಲಿ ಡಿಎಪಿ ರಸಗೊಬ್ಬರಕ್ಕೆ 6 ಸಾವಿರ ಮೆ.ಟ. ಬೇಡಿಕೆ ಇದ್ದು, 6200 ಮೆ.ಟ. ದಾಸ್ತಾನು ಮಾಡಿಕೊಳ್ಳಲಾಗಿದೆ. ಇದಲ್ಲದೇ ಯೂರಿಯಾ 40 ಸಾವಿರ ಮೆ.ಟ್. ಕಾಂಪ್ಲೆಕ್ಸ್ 35 ಸಾವಿರ ಮೆ.ಟ. ದಾಸ್ತಾನು ಇರಿಸಿಕೊಳ್ಳಲಾಗಿದೆ.
ಇದರೊಂದಿಗೆ ಪ್ರಸಕ್ತ ವರ್ಷದಲ್ಲಿ ಮುಂಗಾರು ಬೆಳೆ ಕೈ ಹಿಡಿಯುವ ನಿರೀಕ್ಷೆಯಲ್ಲಿರುವ ಬಸವನಾಡಿನ ಅನ್ನದಾತರು ಪ್ರಕೃತಿಯನ್ನು ನಂಬಿ ಭೂಮಿಗೆ ಬೀಜ ಬಿತ್ತುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ಉತ್ತಮ ಮಳೆಯಾಗಿದ್ದು, ಭೂಮಿ ಹಸಿಯಾಗಿ ಹದಗೊಂಡಿದ್ದು, ಬಿತ್ತನೆಗೆ ಮುಂದಾಗಿದ್ದೇವೆ. ಎತ್ತುಗಳಿಂದ ಬಿತ್ತನೆ ಮಾಡಿದರೆ ಇಳುವರಿ ಹೆಚ್ಚು ಬರಲಿದ್ದು, ದಿನಕ್ಕೆ 8 ಎಕರೆ ಬಿತ್ತನೆ ಮಾಡುತ್ತೇವೆ. ಬಿತ್ತನೆ ಬಳಿಕ ಮೇಲು ಮಳೆ ಆಗದಿದ್ದರೆ ಇಳುವರಿ ಕೈಕೊಡಲಿದೆ.– ದುಂಡಪ್ಪ ಹಿಟ್ನಳ್ಳಿ, ಸಾರವಾಡ ತಾ.ಬಬಲೇಶ್ವರ ಕಳೆದ ವರ್ಷದ ಬಿತ್ತನೆ ಬಳಿಕ ಮಳೆ ಕೈಕೊಟ್ಟ ಕಾರಣ ಬರ ಎದುರಿಸಬೇಕಾಗಿತ್ತು. ಈ ಬಾರಿಯೂ ಮಳೆ ನಿರೀಕ್ಷೆಯಲ್ಲಿ ಇರುವ ರೈತರು ಹೆಸರು, ತೊಗರಿ, ಮೆಕ್ಕೆಜೋಳದಂಥ ಮುಂಗಾರು ಬಿತ್ತನೆಯಲ್ಲಿ ತೊಡಗಿದ್ದಾರೆ. ಬಿತ್ತನೆ ಬಳಿಕ ಒಂದೆರಡು ಮಳೆಯಾದರೆ ಬೆಳೆ ಕೈಸೇರುವುದು ಖಚಿತ.
– ಡಿ.ಟಿ.ಪೂಜಾರಿ ಸಾರವಾಡದ ಗ್ರಾಮದ ರೈತ ಭೀಕರ ಬರ ಎದುರಿಸಿದ ಬಳಿಕ ಈ ವರ್ಷ ಮುಂಗಾರಿ ಮಳೆ ಉತ್ತಮವಾಗಿದ್ದು, ತೊಗರಿ, ಉದ್ದು, ಹೆಸರು, ಮೆಕ್ಕೆಜೋಳದಂಥ ಬಿತ್ತನೆಗೆ ಮುಂದಾಗಿದ್ದೇವೆ. ಹಿಂಗಾರಿನಲ್ಲೂ ಉತ್ತಮ ಮಳೆ ಸುರಿಯುವ ನಿರೀಕ್ಷೆಯಲ್ಲಿದ್ದು, ಜೋಳ, ಕಡಲೆ, ಗೋದಿಯಂಥ ಬೀಜ ಬಿತ್ತನೆ ಮಾಡುತ್ತೇವೆ. ಟ್ರ್ಯಾಕ್ಟರ್‍ನಿಂದ ಬಿತ್ತನೆ ಮಾಡಿದರೆ ಮಿತವಾಗಿ ಬೀಜ ಬೀಳಲಿದ್ದು, ದಿನಕ್ಕೆ 8-10 ಎಕರೆ ಬಿತ್ತನೆ ಮಾಡುತ್ತೇವೆ.
– ಗಂಭೀರ ಗೌಡ ಬಿರಾದಾರ ಸಾರವಾಡ