ಇಂಫಾಲ: ದೇಶದ ಇತರೆ ರಾಜ್ಯಗಳಂತೆ ಮಣಿಪುರದಲ್ಲೂ ಕಠಿಣ ನಿರ್ಬಂಧ ಪಾಲಿಸಲಾಗುತ್ತಿದೆ. ಇಲ್ಲಿ ಕೇವಲ 2 ಪ್ರಕರಣ ದಾಖಲಾಗಿದ್ದರೂ, ಯಾರೂ ಮನೆಗಳಿಂದ ಹೊರಬಾರದಂತೆ ಕರ್ಫ್ಯೂ ವಿಧಿಸಲಾಗಿದೆ.
ಇದರ ನಡುವೆಯೇ ಇಲ್ಲಿರುವ 12 ಸದಸ್ಯರ ಕುಟುಂಬವೊಂದು ಮನೆಯಲ್ಲಿದ್ದುಕೊಂಡೇ ಕೋವಿಡ್ ವಿರುದ್ಧದ ಹೋರಾಟದಲ್ಲಿ ಹೇಗೆ ಭಾಗಿಯಾಗಬಹುದು ಎಂಬುದನ್ನು ತೋರಿಸಿಕೊಟ್ಟಿದೆ.
ಅಂಗನಾ, ನಿವೇದಿತಾ ಎಂಬ ಸಹೋದರಿಯರು ಆರಂಭದಲ್ಲಿ ಮಾಸ್ಕ್ ತಯಾರಿಸಿ ನೆರೆಹೊರೆಯವರಿಗೆ ವಿತರಿಸಲು ನಿರ್ಧರಿಸಿದ್ದರು. ಆದರೆ, ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ, ವೈದ್ಯಕೀಯ ಸಿಬಂದಿಗೆ ಸುರಕ್ಷಾ ಉಪಕರಣಗಳ ಅಗತ್ಯತೆ ಹೆಚ್ಚಿದೆ ಎಂಬುದನ್ನು ಅರಿತ ಇವರು, ಮನೆಯ ಎಲ್ಲ 12 ಸದಸ್ಯರನ್ನೂ ಸೇರಿಸಿಕೊಂಡು ವೈದ್ಯಕೀಯ ಸಿಬಂದಿ ಗೆಂದು ಫೇಸ್ ಶೀಲ್ಡ್, ಮಾಸ್ಕ್ ಗಳು, ಕೈಗವಸುಗಳನ್ನು ತಯಾರಿಸಲು ಆರಂಭಿಸಿದರು.
ಇದೀಗ ಅವರು ಇಂಥ 500ಕ್ಕೂ ಹೆಚ್ಚು ವಸ್ತುಗಳನ್ನು ತಯಾರಿಸಿ ರಿಮ್ಸ್, ಜವಾಹರಲಾಲ್ ನೆಹರೂ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಇತರೆ ಆರೋಗ್ಯ ಕೇಂದ್ರಗಳು, ಪೊಲೀಸರು ಹಾಗೂ ಆ್ಯಂಬುಲೆನ್ಸ್ ಸೇವೆ ನೀಡುವವರಿಗೆ ವಿತರಿಸಿದ್ದಾರೆ.
ಈ ಸಹೋದರಿಯರು ತಯಾರಿಸುತ್ತಿರುವ ಫೇಸ್ ಶೀಲ್ಡ್‌ಗೆ ಹಲವು ಕಡೆಗಳಿಂದ ಮೆಚ್ಚುಗೆಗಳ ಜತೆಗೆ ಆರ್ಡರ್‌ಗಳೂ ಬಂದಿವೆಯಂತೆ. ಬಟ್ಟೆ ಹೊಲಿಯುವ ಕೆಲಸ ಮಾಡುತ್ತಿದ್ದ ಸಹೋದರಿಯರು ಇಂಥ ಸಂಕಷ್ಟದ ಕಾಲದಲ್ಲಿ ಈ ರೀತಿಯಾಗಿ ದೇಶಸೇವೆ ಸಲ್ಲಿಸುತ್ತಿರುವುದಕ್ಕೆ ಎಲ್ಲ ಕಡೆಯಿಂದಲೂ ಶ್ಲಾಘನೆ ವ್ಯಕ್ತವಾಗಿದೆ.
ಇಲ್ಲಿನ ಇಂಫಾಲ ಪಶ್ಚಿಮ ಜಿಲ್ಲೆಯ ಕೈಸಮ್ತೋಂಗ್ ಎಲಾಂಗ್ಬಾಮ್ ಲೈಕಾಯ್ ಎಂಬಲ್ಲಿರುವ 12 ಜನ ಸದಸ್ಯರ ಈ ಕುಟುಂಬವು ಕೋವಿಡ್ ವಿರುದ್ಧದ ಹೋರಾಟದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಇದೀಗ ಮೆಚ್ಚುಗೆಗೆ ಪಾತ್ರವಾಗಿದೆ.