Advertisement

ಕರಿಯಪ್ಪ ಕರ್ನಾಳ ಮನೆಯಲ್ಲಿ ಕೋಟ್ಯಂತರ ರೂ. ಆಸ್ತಿ ಪತ್ತೆ?

03:08 PM Mar 01, 2017 | Team Udayavani |

ಹುಬ್ಬಳ್ಳಿ: ವಾಣಿಜ್ಯ ತೆರಿಗೆ ಇಲಾಖೆ ಜಾರಿ ವಿಭಾಗದ ಸಹಾಯಕ ಆಯುಕ್ತ ಕರಿಯಪ್ಪ ನಿಂಗಪ್ಪ ಕರ್ನಾಳ ಅವರ ನಿವಾಸದ ಮೇಲೆ ಎಸಿಬಿ ದಾಳಿ ವೇಳೆ ಸುಮಾರು 6.94 ಲಕ್ಷ ರೂ.ನಗದು, ವಿವಿಧ ಕಂಪೆನಿಗಳ ಶೇರುಗಳು ಸೇರಿದಂತೆ ಕೋಟ್ಯಂತರ ರೂ.ಮೌಲ್ಯದ ಆಸ್ತಿ ಪತ್ತೆಯಾಗಿದೆ.

Advertisement

ಮೂಲತಃ ಗದಗ ಜಿಲ್ಲೆ ಕುರ್ತಕೋಟಿಯವರಾದ ಕರಿಯಪ್ಪ ಕರ್ನಾಳ ಅವರ ವಿಶ್ವೇಶ್ವರ ನಗರದ ಮನೆ ಮೇಲೆ ಎಸಿಬಿ ಡಿವೈಎಸ್‌ಪಿ ಮುದರಡ್ಡಿ ಅವರ ನೇತೃತ್ವದಲ್ಲಿ ದಾಳಿ ಮಾಡಿದಾಗ, ಆದಾಯಕ್ಕಿಂತಲೂ ಹಲವು ಪಟ್ಟು ಹೆಚ್ಚಿನ ಆಸ್ತಿ ಹೊಂದಿರುವುದು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. 

ಕರಿಯಪ್ಪ ತಮ್ಮ ಹಾಗೂ ಕುಟುಂಬದವರ ಹೆಸರಿನಲ್ಲಿ ಹುಬ್ಬಳ್ಳಿಯ ಗೋಕುಲ ರಸ್ತೆ ಮಂಜುನಾಥ  ನಗರದಲ್ಲಿನ ಕೋಟ್ಯಂತರ ರೂ. ಬೆಲೆ ಬಾಳುವ ಮನೆ, ವಿಶ್ವೇಶ್ವರ ನಗರದಲ್ಲಿ ಒಂದು ಮನೆ ಹೊಂದಿದ್ದು, ಬೆಂಗಳೂರಿನ ಹೆಸರುಘಟ್ಟದಲ್ಲಿನ ಒಂದು ನಿವೇಶನ, ಧಾರವಾಡ ಜಿಲ್ಲೆ ರಾಯನಾಳದಲ್ಲಿ 24 ಎಕರೆ ಕೃಷಿಭೂಮಿ,

ಧಾರವಾಡದಲ್ಲಿ ಎರಡು ನಿವೇಶನ, ಬೆಳಗಾವಿಯಲ್ಲಿ ಒಂದು ಮನೆ, ಎರಡು ಅಂಗಡಿ ಹೊಂದಿದ ದಾಖಲೆ ಪತ್ರಗಳು ಹಾಗೂ ಎರಡು ಬ್ಯಾಂಕ್‌ ಲಾಕರ್‌ ಕೀಲಿಗಳು ಹಾಗೂ 6.94 ಲಕ್ಷ ರೂ. ನಗದು, ಒಂದೂವರೆ ಕೆಜಿಗೂ ಅಧಿಕ ಚಿನ್ನಾಭರಣ, ಒಂದು ಕಾರು, ಒಂದು ಬೈಕ್‌ ಹಾಗೂ ಕಚೇರಿಯಲ್ಲಿ 1.35 ಲಕ್ಷ ರೂ. ನಗದು ದೊರೆತಿದೆ ಎನ್ನಲಾಗಿದೆ.

ಇದಲ್ಲದೇ ಕರ್ನಾಳ ಅವರ ಮನೆಯಲ್ಲಿ 7000 ಸೀರೆ ಹಾಗೂ ಸೀರೆಗಳ ಮಧ್ಯೆ 2000 ರೂ. ಮುಖಬೆಲೆಯ ನಾಲ್ಕು ಲಕ್ಷ ರೂ. ನಗದು ದೊರೆತಿದೆ. ಬ್ಯಾಂಕ್‌ಗಳಲ್ಲಿ ಸ್ಥಿರ ಠೇವಣಿ ಇಟ್ಟಿದ್ದಾರೆ ಹಾಗೂ ವಿವಿಧ ಕಂಪೆನಿಯ ಶೇರ್‌ಗಳನ್ನೂ ಖರೀದಿಸಿದ್ದಾರೆ. ಇಷ್ಟಲ್ಲದೆ ಒಟ್ಟು 7-8 ಬ್ಯಾಂಕ್‌ ಖಾತೆಗಳನ್ನು ಹೊಂದಿರುವುದು ಪತ್ತೆಯಾಗಿದ್ದು, ಮಂಗಳವಾರ ಬ್ಯಾಂಕ್‌ನೌಕರರ ಮುಷ್ಕರದಿಂದ ಬ್ಯಾಂಕ್‌ಗಳಿಗೆ ರಜೆ ಇದ್ದಿದ್ದರಿಂದ ಎಸಿಬಿ ಅಧಿಕಾರಿಗಳಿಗೆ ಕರಿಯಪ್ಪ ಅವರ ಬ್ಯಾಂಕ್‌ ಲಾಕರ್‌ಗಳನ್ನು ಪರಿಶೀಲಿಸಲಾಗಿಲ್ಲ.

Advertisement

ಬುಧವಾರ ಅವುಗಳನ್ನು ತೆರೆದು ತಪಾಸಣೆ ನಡೆಸಲಿದ್ದಾರೆ. 10ಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಎಸಿಬಿ ಅಧಿಕಾರಿಗಳು ಬೆಳಗಿನ ಜಾವದಿಂದ ರಾತ್ರಿಯವರೆಗೂ ಕರಿಯಪ್ಪ ಅವರ ವಿಶ್ವೇಶ್ವರ ನಗರದಲ್ಲಿನ ನಿವಾಸದಲ್ಲಿ ದಾಖಲೆ ಪತ್ರಗಳನ್ನು ಪರಿಶೀಲಿಸಿದರು. ಬುಧವಾರವೂ ದಾಖಲೆಗಳ ಪರಿಶೀಲನೆ ಮುಂದುವರಿಸುವ ಸಾಧ್ಯತೆಗಳಿವೆ. 

ಕರಿಯಪ್ಪ ಅವರು ಆದಾಯಕ್ಕಿಂತಲೂಎರಡೂ¾ರು ಪಟ್ಟು ಆಸ್ತಿ ಹೊಂದಿದ್ದಾರಲ್ಲದೆ, ಒಂದೆರಡು ಡೆವಲಪರ್ಸ್‌ ಸಂಸ್ಥೆಯೊಂದಿಗೆ  ಪಾಲುದಾರಿಕೆ ಹೊಂದಿರಬಹುದೆಂದು ಎಸಿಬಿ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಇವರಿಗೆ ಇಬ್ಬರು ಪುತ್ರರಿದ್ದು, ಇಬ್ಬರನ್ನು ಜರ್ಮನಿಯಲ್ಲಿ ವ್ಯಾಸಂಗ ಮಾಡಿಸುತ್ತಿದ್ದಾರೆ.

ಈಗಾಗಲೇ ಹಿರಿಯ ಪುತ್ರ ವ್ಯಾಸಂಗ ಪೂರ್ಣಗೊಳಿಸಿದ್ದು, ಇನ್ನೊಬ್ಬನು ಜರ್ಮನಿಯಲ್ಲೇ ವ್ಯಾಸಂಗ ಮಾಡುತ್ತಿದ್ದಾನೆ. ಕರಿಯಪ್ಪ ಅವರು ಜೂನ್‌ ತಿಂಗಳಲ್ಲಿ ಸೇವಾ ನಿವೃತ್ತಿ ಹೊಂದಲಿದ್ದಾರೆ ಎಂದು ತಿಳಿದು ಬಂದಿದೆ. ಕರಿಯಪ್ಪ ಅವರ ಕಚೇರಿ ಮೇಲೆ ವಿಜಯಪುರದ ಎಸಿಬಿ ತಂಡ ದಾಳಿ ಮಾಡಿ,ನಗದು ಹಾಗೂ ಇನ್ನಿತರೆ ಮಹತ್ವದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.   

Advertisement

Udayavani is now on Telegram. Click here to join our channel and stay updated with the latest news.

Next