ರೋಮ್: ಸ್ವಂತ ಮನೆ ಹೊಂದುವ ಕನಸು ಎಲ್ಲರಿಗೂ ಇರುತ್ತದೆ. ಕಷ್ಟಪಟ್ಟು ದುಡಿದು, ಉಳಿತಾಯ ಮಾಡಿ, ಬ್ಯಾಂಕ್ ಸಾಲ ಮಾಡಿ ಮನೆ ಖರೀದಿಸುತ್ತಾರೆ. ಆದರೆ, ಈ ಊರಲ್ಲಿ ಮನೆ ಖರೀದಿಸುವುದಿದ್ದರೆ, ಅಲ್ಲಿನ ಆಡಳಿತವೇ ನಿಮಗೆ ದುಡ್ಡು ಕೊಡುತ್ತದೆ. ಅದೂ ಎಷ್ಟು ಗೊತ್ತಾ? ಬರೋಬ್ಬರಿ 24.52 ಲಕ್ಷ ರೂ.!
ಹೌದು, ಇದು ಇಟಲಿಯ ಪ್ರಸಿಚೆ ನಗರದ ಕಥೆ. ಇಲ್ಲಿರುವ ಯಾವುದಾದರೂ ಖಾಲಿ ಮನೆಯನ್ನು ನೀವು ಕೊಂಡುಕೊಂಡು, ವಾಸ ಆರಂಭಿಸಿದರೆ ಸ್ಥಳೀಯಾಡಳಿತ ನಿಮಗೆ 24,52,515 ರೂ.ಗಳನ್ನು (30 ಸಾವಿರ ಡಾಲರ್) ನೀಡುತ್ತದೆ. ಆದರೆ, ಒಂದೇ ಒಂದು ಷರತ್ತು ಇದೆ. ನೀವು ಖರೀದಿಸುವ ಮನೆ 1991ಕ್ಕೂ ಮುನ್ನ ನಿರ್ಮಾಣಗೊಂಡಿರಬೇಕು ಮತ್ತು ಅದನ್ನು ಖರೀದಿಸಿದ ಮೇಲೆ ನೀವು ಅಲ್ಲೇ ವಾಸ ಮಾಡಬೇಕು.
ಇತ್ತೀಚಿನ ವರ್ಷಗಳಲ್ಲಿ ಈ ಊರಿನ ಜನಸಂಖ್ಯೆ ಗಣನೀಯವಾಗಿ ತಗ್ಗಿದೆ. ಜನರು ತಮ್ಮ ಮನೆ-ಮಠಗಳನ್ನು ಬಿಟ್ಟು ಎಲ್ಲೆಲ್ಲೋ ಹೋಗಿದ್ದಾರೆ. ಹಾಗಾಗಿ ಈ ಪಟ್ಟಣದಲ್ಲಿ ಖಾಲಿ ಮನೆಗಳೇ ತುಂಬಿವೆ. ಜನಸಂಖ್ಯೆ ಸಮಸ್ಯೆಯನ್ನು ತಗ್ಗಿಸುವ ಉದ್ದೇಶದಿಂದಲೇ ಆಡಳಿತವು ಇಲ್ಲಿ ಮನೆ ಕೊಂಡವರಿಗೆ ತಾವೇ ಹಣಕಾಸು ಉತ್ತೇಜನ ನೀಡುವುದಾಗಿ ಘೋಷಿಸಿದೆ.