Advertisement
ಶನಿವಾರ ಹೊಸದಿಲ್ಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು, ಕ್ರೀಡಾಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಿದರು. ಇನ್ನಿಬ್ಬರು ಖ್ಯಾತ ಕುಸ್ತಿಪಟುಗಳಾದ ಬಜರಂಗ್ ಪುನಿಯ, ಸಾಕ್ಷಿ ಮಲಿಕ್ ಕೂಡ ಆತ್ಮೀಯವಾಗಿ ವಿನೇಶ್‌ರನ್ನು ಬರಮಾಡಿಕೊಂಡರು. ಈ ವೇಳೆ ವಿನೇಶ್ ಪೂರ್ಣ ಭಾವುಕರಾಗಿ ಕಣ್ಣೀರು ಹಾಕಿದರು. ಬಹುತೇಕ ಸನ್ನಿವೇಶ ಭಾವುಕವಾಗಿಯೇ ಇತ್ತು.
Related Articles
Advertisement
ಕುಸ್ತಿ ಫೈನಲ್‌ನಲ್ಲಿ ಅನರ್ಹಗೊಂಡಿದ್ದ ವಿನೇಶ್:
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ವಿನೇಶ್ ಫೋಗಾಟ್ 50 ಕೆಜಿ ಕುಸ್ತಿಯಲ್ಲಿ ಫೈನಲ್ ತಲುಪಿದ್ದರು. ಫೈನಲ್ ಪಂದ್ಯದ ಮುಂಜಾನೆ ತೂಕ ಪರೀಕ್ಷೆ ಮಾಡಿದಾಗ ಅವರು 100 ಗ್ರಾಮ್ ಹೆಚ್ಚಿನ ತೂಕ ಹೊಂದಿದ್ದರು. ಇದರಿಂದ ಅವರು ಫೈನಲ್‌ನಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದ್ದರು. ಭಾರತಕ್ಕೆ ಐತಿಹಾಸಿಕ ಚಿನ್ನ, ಬೆಳ್ಳಿ ತಪ್ಪಿಹೋಗಿತ್ತು. ಇದರ ವಿರುದ್ಧ ವಿನೇಶ್ ಅಂತಾರಾಷ್ಟ್ರೀಯ ಕ್ರೀಡಾನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರೂ, ಗೆಲುವು ದಕ್ಕಲಿಲ್ಲ.
ಸ್ವಾಗತದಲ್ಲೂ ಕಾಂಗ್ರೆಸ್-ಬಿಜೆಪಿ ರಾಜಕೀಯ?:
ವಿನೇಶ್ ಫೋಗಾಟ್ ಸ್ವಾಗತದ ವೇಳೆಯೂ ಕಾಂಗ್ರೆಸ್-ಬಿಜೆಪಿ ನಡುವೆ ರಾಜಕೀಯ ಜಟಾಪಟಿ ನಡೆದಿದೆ ಎನ್ನಲಾಗಿದೆ. ವಿನೇಶ್ ಅದ್ಧೂರಿ ಸ್ವಾಗತಕ್ಕೆ ಎರಡೂ ಪಕ್ಷಗಳು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದವು. ಆದರೆ ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ದೊಡ್ಡ ಸಂಖ್ಯೆಯಲ್ಲಿ ತಮ್ಮ ಹಿಂಬಾಲಕರೊಂದಿಗೆ ತೆರಳಿ ವಿನೇಶ್‌ರನ್ನು ಬರ ಮಾಡಿಕೊಂಡಿದ್ದರಿಂದ ಬಿಜೆಪಿ ಹಿಂದೆ ಸರಿಯಿತು ಎನ್ನಲಾಗಿದೆ.
ಈ ಗೌರವ 1000 ಪದಕಕ್ಕೂ ಮಿಗಿಲು:
ಅವರು ಬಂಗಾರದ ಪದಕ ಕೊಡದಿದ್ದರೇನು? ಇಲ್ಲಿನ ಜನರು ನನಗೆ ಅದನ್ನು ನೀಡಿದ್ದಾರೆ. ನನಗೆ ಸಿಕ್ಕ ಪ್ರೀತಿ, ಗೌರವ 1000 ಒಲಿಂಪಿಕ್ ಪದಕಕ್ಕೂ ಮಿಗಿಲಾದದ್ದು. –ವಿನೇಶ್ ಫೋಗಾಟ್, ಕುಸ್ತಿಪಟು