ಹಬ್ಬಗಳೆಂದರೆ ಸಂಭ್ರಮದ ಗೂಡು. ಪ್ರತೀ ವರ್ಷ ಚೌತಿ, ದೀಪಾವಳಿಯಂತೆ ಕಾಯುವುದು ಊರ ಹಬ್ಬಕ್ಕೆ. ಊರ ಜಾತ್ರೆಗೆ ಕಾಯುವ ಪರಿ ಉಳಿದವುಗಳಿಗಿಂತ ಒಂದು ಕೈ ಮೇಲೆ. ಇದರ ಸಂಭ್ರಮವು, ಖುಷಿಯೂ ಅಷ್ಟೇ, ಒಂದು ಹಿಡಿ ಮಿಗಿಲೇ. ಎಷ್ಟೆಂದರೂ ಹುಟ್ಟಿದ ಊರಲ್ಲವೆ, ಊರಿನೆಡೆಗಿನ ಪ್ರೀತಿ ತುಸು ಜಾಸ್ತಿಯೇ.
ಹೊಸ ವರ್ಷದ ಕ್ಯಾಲೆಂಡರ್ ಮನೆಗೆ ಬಂದಾಗ ಮೊದಲು ನೋಡುವುದು ರಾಷ್ಟ್ರೀಯ, ಧಾರ್ಮಿಕ ಹಬ್ಬಗಳ ರಜೆಯ ಪಟ್ಟಿಯನ್ನು. ಇದರ ಜತೆಜತೆಗೆ ಲೋಕಲ್ ಹಾಲಿಡೇ ಆಗಿ ಊರ ಹಬ್ಬದ ದಿನವನ್ನು ಹುಡುಕಿ, ಗುರುತು ಹಾಕಿ ಇಟ್ಟುಕೊಳ್ಳುವುದು. ಈ ಚಾಳಿ ಉದ್ಯೋಗಸ್ಥರಾದ ಮೇಲೂ ಮುಂದುವರಿದು ಬಿಟ್ಟಿದೆ… ಬಿಡುವಿಲ್ಲದ ಕೆಲಸದ ಮಧ್ಯೆ ಊರ ಹಬ್ಬವನ್ನು ತಪ್ಪಿಸಿಕೊಳ್ಳುವ ಮಾತೇ ಇಲ್ಲ. ಊರ ಹಬ್ಬ ತಪ್ಪಿತೆಂದರೆ ಅದೇನೋ ಕಳೆದುಕೊಂಡ ಭಾವ…
ಊರಿನ ಜಾತ್ರೆಗೆ ಪ್ರತೀ ಮನೆಯಲ್ಲೂ ಸಂಭ್ರಮ. ಊರಿಗೆ ಊರೇ ಸಂಭ್ರಮದಲ್ಲಿ ಮುಳುಗಿರುತ್ತದೆ. ಈ ಸಂದರ್ಭ ನಿತ್ಯದ ಕೆಲಸ – ಕಾರ್ಯಗಳಿಗೆ ರಜೆ. ಏನಿದ್ದರೂ ಊರ ಹಬ್ಬವನ್ನು ಜೀವಿಸುವುದೇ ಪ್ರಮುಖ.
ಊರ ಹಬ್ಬ ಕೇವಲ ಹಬ್ಬವಲ್ಲ, ಊರಿನ ಮನಸ್ಸುಗಳ ಮಿಲನ. ಜಾತ್ರೆಯ ರಥಬೀದಿಯ ಆರಂಭದಿಂದ ತುದಿಯವರೆಗೂ ಊರು ಎದುರಾಗುತ್ತಿರುತ್ತದೆ. ಬದುಕಿನ ಅನಿವಾರ್ಯತೆಗಾಗಿ ಬೇರೆ ಊರು, ರಾಜ್ಯಗಳಲ್ಲಿ ನೆಲೆ ಕಂಡುಕೊಂಡ ಜೀವಗಳು ಊರ ಹಬ್ಬಕ್ಕೆ ತಪ್ಪದೇ ಹಾಜರಿಯನ್ನು ಹಾಕುತ್ತಾರೆ. ಅದೇ ಊರಿನ ಸೆಳೆತ. ಇಲ್ಲೇ ಊರು ಇನ್ನಷ್ಟು ಆಪ್ತವಾಗುವುದು.
ಈ ಊರಿನ ಹಬ್ಬ, ಜಾತ್ರೆಗಳು ಅದೆಷ್ಟೋ ಮಂದಿಗೆ ಬದುಕಿನ ನೆಲೆ. ಅದು ಮಂಡಕ್ಕಿ ಮಾರುವವನೇ ಇರಲಿ, ಪಾತ್ರೆ ಅಂಗಡಿಯವನೇ ಆಗಲಿ ಇಲ್ಲವೋ ತೊಟ್ಟಿಲು ತಿರುಗಿಸುವವನೇ ಇರಲಿ… ಅಂಗಡಿ ಹಾಕುವ ಪ್ರತಿಯೊಬ್ಬನಿಗೂ ಹಬ್ಬ ದುಡಿಮೆಯ ದಾರಿ. ಅಂಗಡಿ ಹಾಕುವವನಿಗೆ ಮಾರಾಟವಾದರೆ ಹಬ್ಬ, ಊರಿನ ಜನರಿಗೆ ತಮ್ಮ ದುಡಿಮೆಯನ್ನು ವರ್ಷಕ್ಕೊಮ್ಮೆ ಬರುವ ಹಬ್ಬದಲ್ಲಿ ಖರೀದಿಸಿ, ಇನ್ನೊಬ್ಬರ ಬದುಕನ್ನು ಬೆಳಗುವುದರಲ್ಲಿ ಹಬ್ಬ. ಇಬ್ಬರಿಗೂ ಹಬ್ಬವೇ. ಆಯಾಮಗಳು ಬೇರೆ ಅಷ್ಟೇ.
ಖರೀದಿ, ಹಬ್ಬದ ಆಟ, ತಿಂಡಿ, ಮೋಜು – ಮಸ್ತಿ, ಕಿವಿ ಗುಂಯ್ಯ ಎನ್ನುವ ಪೀಪಿ… ಇದೆಲ್ಲದರ ಹೊರತಾಗಿಯೂ ಊರ ಹಬ್ಬಗಳು ಬದುಕಿನ ಭಿನ್ನ, ವಿಭಿನ್ನ ಬಣ್ಣಗಳನ್ನು ತೆರೆದಿಡುತ್ತವೆ. ಇದನ್ನು ನೋಡಿ, ಅರ್ಥೈಸಿಕೊಳ್ಳಲು, ಕಣ್ತುಂಬಿಕೊಳ್ಳಲು ನಾವು ಮನಸ್ಸಿನ ಕಣ್ಣನ್ನು ತೆರೆದು ನೋಡಿ, ಜೀವಿಸಬೇಕು. ಜೀವಿಸಿ, ಆಸ್ವಾದಿಸಬೇಕು. ಬದುಕಿನ ಸತ್ಯತೆಯನ್ನು ಅರಗಿಸಿಕೊಳ್ಳಬೇಕು.
–
ವಿಧಾತ್ರಿ ಭಟ್
ಉಪ್ಪುಂದ