Advertisement
ದೊಡ್ಡ ವೃತ್ತದಲ್ಲಿ ತೂಗುತ್ತಿದ್ದ ತೂಗು ತೊಟ್ಟಿಲುಗಳು ಮೇಲೆ ಹೋದಾಗ ಆಯ ತಪ್ಪಿ ಬಿದ್ದು ಬಿಟ್ಟರೆ, ಏನಾದರೂ ಸಮಸ್ಯೆಯಾಗಿ ಕೂತಿದ್ದ ತೊಟ್ಟಿಲೇ ಮುರಿದು ಹೋದರೆ ಎಂದೆಲ್ಲ ಭಯವಾಗುತ್ತಿತ್ತು. ಇಂತಹ ಭಯಂಕರ ಎನ್ನಿಸುವಂತವುಗಳನ್ನು ಬಿಟ್ಟು ನನ್ನ ಮಟ್ಟಕ್ಕೆ ಯಾವುದು ಸರಿಯಾಗುತ್ತದೆ ಎಂದು ಹುಡುಕುತ್ತಿದ್ದೆ. ಜತೆಗೆ ಇಲ್ಲಿ ಮಾರಲು ಬರುತ್ತಿದ್ದ ತರಾವರಿ ತಿಂಡಿ, ಕ್ಲಿಪ್ಪು, ಬಳೆ ಇತ್ಯಾದಿಗಳು ಸಹ ಸೆಳೆಯುತ್ತಿದ್ದವು. ಆಗ ಬೇಕೆನ್ನಿಸಿದ್ದನ್ನು ಕೊಳ್ಳುವಷ್ಟು ಆರ್ಥಿಕ ಬಲವಿರಲಿಲ್ಲ. ನೋಡಿ ಸಮಾಧಾನ ಪಟ್ಟುಕೊಳ್ಳಬೇಕಿತ್ತು. ಎಷ್ಟೇ ಭಯವಾದರೂ ಈ ಥೀಮ್ ಪಾರ್ಕ್‌ಗಳ ಮೇಲಿರುವ ವ್ಯಾಮೋಹವನ್ನು ಬಿಡಲಾಗದು.
Related Articles
Advertisement
ಅದಕ್ಕೆಂದೇ ಹುಟ್ಟಿಕೊಂಡಿತು ಯುನಿವರ್ಸಲ್ ಸ್ಟುಡಿಯೋಸ್. ಜನರಿಗಾಗಿಯೇ, ಅವರ ಮನೋರಂಜನೆಗಾಗಿಯೇ 1990ರಲ್ಲಿ ಒರ್ಲಾಂಡೋನಲ್ಲಿ ಯುನಿವರ್ಸಲ್ ಸ್ಟುಡಿಯೋಸ್ ಕಟ್ಟಲು ಆರಂಭ ಮಾಡಿದರು. ಇದರೊಳಗೆ ಹಲವಾರು ಸವಾರಿಗಳು, ಆಕರ್ಷಣೆಗಳು, ಜನಪ್ರಿಯ ಸಿನೆಮಾಗಳಿಗೆ ಸಂಬಂಧಿಸಿದ ನೇರಪ್ರಸಾರಗಳು ಹೀಗೆ ಮನೋರಂಜನೆಗೆ ಸಂಬಂಧಿಸಿದ ಎಲ್ಲವನ್ನೂ ನಿರ್ಮಿಸಿದರು. ಇಲ್ಲಿ ವರ್ಷಕ್ಕೆ ಸುಮಾರು ಹತ್ತು ಲಕ್ಷ ಜನ ಪ್ರವಾಸಿಗರು ಭೇಟಿ ನೀಡುತ್ತಾರೆ. ಅನಂತರದ ವರ್ಷಗಳಲ್ಲಿ ಐಲ್ಯಾಂಡ್ ಆಫ್ ಅಡ್ವೆಂಚರ್, ವೊಲ್ಕಾನೋ ಬೇ ಎಂದು ಇನ್ನು ಎರಡು ಥೀಮ್ ಪಾರ್ಕ್‌ಗಳನ್ನು ಸೇರಿಸಿದರು. ಎಪಿಕ್ ಯುನಿವರ್ಸ್ ಎಂಬ ಇನ್ನೊಂದು ಥೀಮ್ ಪಾರ್ಕ್ 2025ರ ಹೊತ್ತಿಗೆ ಯುನಿವರ್ಸಲ್ ಸ್ಟುಡಿಯೋಸ್ ಒರ್ಲಾಂಡೋ ಸೇರಿಕೊಳ್ಳಲಿದೆ. ಡಿಸ್ನಿಲ್ಯಾಂಡ್‌ಗೆ ಸರಿಸಮನಾದ ಒಂದು ಥೀಮ್ ಪಾರ್ಕ್ ಕಟ್ಟಬೇಕು ಎಂಬ ಉದ್ದೇಶದಿಂದಲೇ ಆರಂಭವಾದ ಯುನಿವರ್ಸಲ್ ಸ್ಟುಡಿಯೋಸ್ ಇವತ್ತಿಗೆ ಎಲ್ಲ ವಿಷಯಗಳಲ್ಲೂ ಡಿಸ್ನಿಲ್ಯಾಂಡ್‌ಗೆ ಸರಿಸಮನಾಗಿ ನಿಲ್ಲುತ್ತದೆ.
ಹ್ಯಾರಿ ಪಾಟರ್ ಯಾರಿಗೆ ಗೊತ್ತಿಲ್ಲ. ಜೆ.ಕೆ.ರೌಲಿಂಗ್ ಬರೆದ ಪುಸ್ತಕಗಳನ್ನು ಓದುವಾಗ ನಮ್ಮದೇ ಕಲ್ಪನೆಯಲ್ಲಿ ಹೊಸ ಜಗತ್ತು ತೆರೆದುಕೊಳ್ಳುತ್ತದೆ. ಆ ಅಸ್ಪಷ್ಟ ಕಲ್ಪನೆಗೆ ಜೀವ ಬರುವುದು ಹ್ಯಾರಿ ಪಾಟರ್ ಸಿನೆಮಾಗಳನ್ನು ನೋಡುವಾಗ. ನಾವೂ ಹಾಗವರ್ಟ್ಸ್ ಗೆ ಹೋಗಿ ವಿದ್ಯಾರ್ಥಿಗಳಾಗಬೇಕು, ನಮ್ಮ ಬಳಿಯೂ ಒಂದು ಮಾಂತ್ರಿಕ ದಂಡವಿರಬೇಕು, ಮಾಂತ್ರಿಕ ಜಗತ್ತಿನ ಬೀದಿಗಳಲ್ಲಿ ಹಾದು ಬರಬೇಕು ಎಂದೆಲ್ಲ ಅನ್ನಿಸುವುದು ಸಹಜ. ಆ ಅನುಭವಗಳನ್ನು ಅನುಭವಿಸುವ, ನಮ್ಮದಾಗಿಸಿಕೊಳ್ಳುವ ಅವಕಾಶವನ್ನು ಯುನಿವರ್ಸಲ್ ಸ್ಟುಡಿಯೋಸ್ ಕಲ್ಪಿಸಿ ಕೊಡುತ್ತದೆ. ಹ್ಯಾರಿ ಪಾಟರ್ – ದಿ ಫಾರಬಿಡನ್ ಜರ್ನಿ ಎಂಬ ಹೆಸರಿನ ಈ ಸವಾರಿ ಬಹಳ ಜನಪ್ರಿಯ.
ಸೀಟುಗಳಲ್ಲಿ ಚಲನೆಯ ಸೆನ್ಸಾರ್ ತಂತ್ರಜ್ಞಾನವನ್ನು ಅಳವಡಿಸಿರುವುದರಿಂದ ನಾವು ಕೂತಿರುವಾಗ ಅದು ಅಲ್ಲಾಡುತ್ತ ಹ್ಯಾರಿ ಪಾಟರ್ ಲೋಕಕ್ಕೆ ಸೆಳೆದೊಯ್ಯುತ್ತದೆ. ಕಣ್ಣಮುಂದೆ ಚಲಿಸುವ 3ಡಿ ಚಿತ್ರಗಳಿಂದ ನಾವು ಹ್ಯಾರಿ ಪಾಟರ್‌ನಷ್ಟೇ ವೇಗವಾಗಿ ಸಾಗುತ್ತಿದ್ದೇವೆ ಎನ್ನಿಸುತ್ತದೆ. ಅಕ್ಕ ಪಕ್ಕದಲ್ಲಿ ಕಟ್ಟಡಗಳು ಬಂದಾಗ ಆ ಕಿರಿದಾದ ಜಾಗದಲ್ಲಿ ನುಸುಳಿ ಹೋಗುವಾಗ ಭಯವಾಗುತ್ತದೆ. ಜತೆಗೆ ಆಡಿಯೋ ಸಹ ಇರುತ್ತದೆ. ನಮ್ಮ ಜತೆಗೆ ಹ್ಯಾರಿ ಪಾಟರ್, ರಾನ್ ವೀಸ್ಲಿ, ಹೆರ್ಮೋಯಿನೀ ರೈಡ್ ಮಾಡುತ್ತ ಸಿನೆಮಾದಲ್ಲಿರುವಂತೆಯೇ ಆ್ಯಕ್ಷನ್ ಜಾರಿಯಲ್ಲಿರುತ್ತದೆ.
ಮಿನಿಯನ್ಸ್ ಲ್ಯಾಂಡ್ ನನಗಿಷ್ಟವಾದ ತಾಣ. ಮಿನಿಯನ್ಸ್ ಯಾರಿಗೆ ಇಷ್ಟವಾಗುವುದಿಲ್ಲ? ಬನಾನಾ ಬನಾನಾ ಎಂದು ಓಡಾಡುವ ಇವುಗಳನ್ನು ಹಿಡಿದು ಒಂದೆಡೇ ಕೂರಿಸಲು ಸಾಧ್ಯವಾಗುವುದು ಈ ಯುನಿವರ್ಸಲ್ ಸ್ಟುಡಿಯೋಸ್‌ನಲ್ಲಿ ಮಾತ್ರ. ಮಿನಿಯನ್ಸ್ ವೇಷ ತೊಟ್ಟ ಪಾತ್ರಧಾರಿಗಳು ಅವರಂತೆಯೇ ಮು¨ªಾಗಿ ಓಡಾಡುತ್ತಿರುತ್ತಾರೆ. ಇಲ್ಲಿಯೂ ಮಿನಿಯನಸ್ ಸಿನೆಮಾದ ಅನುಭವ ಕೊಡುವ ಸವಾರಿಗಳಿವೆ. ಜುರಾಸಿಕ್ ಪಾರ್ಕ್, ಸ್ಕಲ್ ಐಲ್ಯಾಂಡ್, ಟ್ರಾನ್ಸ್‌ಪೋರ್ಟ್ಸ್… ಹೀಗೆ ಎಲ್ಲದರ ಬಗ್ಗೆ ವಿವರವಾಗಿ ಬರೆಯುತ್ತ ಹೋದರೆ ಪುಟಗಳು ಸಾಲುವುದಿಲ್ಲ. ವೋಲ್ಕಾನೋ ಬೇ ಎಂದು ಇತ್ತೀಚಿಗೆ ನಿರ್ಮಾಣವಾಗಿರುವ ಪಾರ್ಕ್‌ನಲ್ಲಿ ದೊಡ್ಡ ವೋಲ್ಕಾನೋ, ಅದರಿಂದ ಪುಟಿಯುವ ನೀರು, ಕೆಳಗೆ ನೀರಿನ ಕೊಳ ಮತ್ತು ನೀರಿನಲ್ಲಿ ಆಡುವ ಬಹಳಷ್ಟು ಕ್ರೀಡೆಗಳಿವೆ. ನನ್ನ ಪ್ರಕಾರ ಒಂದೊಂದು ಸವಾರಿಗೆ ಒಂದು ದಿನವನ್ನು ಮೀಸಲಿಟ್ಟರೆ ಮಾತ್ರ ಆ ಅನುಭವವನ್ನು ಇಂಗಿಸಿಕೊಳ್ಳಲು ಸಾಧ್ಯ.
ಸಾಮಾನ್ಯವಾಗಿ ಏನಾಗುತ್ತದೆಯೆಂದರೆ ಮೂರು ದಿನಗಳ, ನಾಲ್ಕು ದಿನಗಳ ಟಿಕೆಟ್ ಎಂದು ಡೀಲ್ ಇರುವುದರಿಂದ ಹೋದವರು ಒಂದೇ ಪಟ್ಟಿಗೆ ಎಲ್ಲ ಸವಾರಿಗಳನ್ನು, ಆಕರ್ಷಣೆಗಳನ್ನು ಮಾಡಿ ಮುಗಿಸಲು ಯತ್ನಿಸುತ್ತಾರೆ. ನಾವು ಅದೇ ಮಾಡಿದ್ದು. ಒಂದಾದ ಅನಂತರ ಒಂದರಂತೆ ಇಡೀ ದಿನ ಎಷ್ಟಾಗುತ್ತದೋ ಅಷ್ಟು ಮಾಡಿ ಮುಗಿಸೋಣ ಎಂದು ಎಲ್ಲವನ್ನು ಮಾಡುವ ಪ್ರಯತ್ನ ಮಾಡಿದೆವು. ಎಲ್ಲವನ್ನು ಮಾಡಿ ಮುಗಿಸಿದೆವಾದರೂ ಮನದಲ್ಲಿ ಉಳಿದದ್ದು ಕೆಲವೇ ಕೆಲವು ಅನುಭವಗಳು. ಒಮ್ಮೆ ಮಾಡಿ ಮುಗಿಸಿದ್ದೇವೆ ಮತ್ತೇನಿದೆ ನೋಡಲಿಕ್ಕೆ ಅನ್ನುವಂತಿಲ್ಲ. ಪ್ರತಿ ಸಲವೂ ಹೊಸದೇ ಅನುಭವಾಗುತ್ತದೆ. ಅದಕ್ಕೆಂದೇ ಇಲ್ಲಿನ ಜನ ಮತ್ತೆ ಮತ್ತೆ ಹೋಗುತ್ತಾರೆ. ಸವಾರಿಗಳನ್ನು ಮಾಡಲು ಭಯ ಎನ್ನುವವರಿಗೆ, ವಯಸ್ಸಾದವರಿಗೂ ಸಹ ಪಾರ್ಕ್‌ನಲ್ಲಿ ಬೇರೆ ತರಹದ ಆಕರ್ಷಣೆಗಳಿದ್ದು ಎಲ್ಲರ ಅಭಿರುಚಿಗಳಿಗೆ ತಕ್ಕಂತೆ ಸಮಯ ಕಳೆಯುವ ಅವಕಾಶವಿದೆ.