ಸಾಧಾರಣವಾಗಿ ಪ್ರೇಮಿಗಳ ದಿನಾಚರಣೆ ಎಂದರೆ ತಕ್ಷಣ ನೆನಪಾಗುವುದು ಹೂಗಳ ರಾಣಿ ಎಂದೇ ಹೆಸರುವಾಸಿಯಾದ ಕೆಂಪುಗುಲಾಬಿ. ಎಲ್ಲಾ ಪ್ರೇಮಿಗಳು ತನ್ನ ಪ್ರೇಯಸಿಯ ಅಥವಾ ಪ್ರಿಯಕರನ ಬಗ್ಗೆ ಎಷ್ಟು ತಿಳಿದುಕೊಂಡಿರುತ್ತಾರೋ ಅದಕ್ಕಿಂತ ಹೆಚ್ಚು ಗುಲಾಬಿಯ ಬಗ್ಗೆ ತಿಳಿದಿರುತ್ತಾರೆ, ಅಂದರೆ ಯಾವ ಅಂಗಡಿಯಲ್ಲಿ ಎಷ್ಟು ಗುಲಾಬಿಗಳು ಸಿಗುತ್ತವೆ ! ಯಾವ ಯಾವ ಬಣ್ಣದ ಗುಲಾಬಿಗಳು ಸಿಗುತ್ತವೆ ಎಂದು ನಿಖರವಾಗಿ ಹೇಳುವ ವರವನ್ನು ಭಗವಂತ ಒಂದು ದಿನಕ್ಕೆ ಮಾತ್ರ ಸೀಮಿತವಾಗುವಂತೆ ಅಸ್ತು ಎಂದಿರಬಹುದೇನೋ ಎನ್ನುವಂತಹ ಸಾಮರ್ಥ್ಯವನ್ನು ಉಳ್ಳವರಂತೆ ಕಾಣುತ್ತಾರೆ ಈ ಪ್ರೇಮಿಗಳು.
ಒಂದು ಗುಲಾಬಿ ಅರಳಿ ತನ್ನ ಸುಂದರವಾದ ಆಕಾರವನ್ನು ಪಡೆಯಲು ಎರಡು ವಾರಗಳ ಕಾಲ ತೆಗೆದುಕೊಳ್ಳುತ್ತದೆ, ಅದೇ ಪರರ ಕೈಸೇರಲು ಕೇವಲ ನಿಮಿಷಗಳ ಕಾಲ ಸಾಕು. ಇಲ್ಲಿ ಮುಖ್ಯವಾದ ಪ್ರಶ್ನೆ ಎಂದರೆ ಆಕರ್ಷಿತವಾಗಿ ಅರಳಿ ನಿಂತಿರುವ ಈ ಗುಲಾಬಿ ಇವತ್ತು ಯಾರ ಪಾಲಾಗುವುದು ಎಂದು ?
ಈಗಿನ ಜನರೇಶನ್ ನೋಡುವುದೇ ಆದರೆ ಈ ಗುಲಾಬಿಯನ್ನು ಪ್ರೇಯಸಿಯ ಕೈಗೆ ಕೊಡುವುದಕ್ಕಿಂತ ಕಿವಿಗೆ ಮೂಡಿಸುವ ಪ್ರಯತ್ನವೇ ಹೆಚ್ಚು. ಇಲ್ಲಿಯವರೆಗೂ ಯಾವತ್ತೂ ವಿಭಿನ್ನತೆಯನ್ನು ತೋರದ ಪ್ರೇಮಿಗಳ ಮೆದಳು, ಈ ದಿನ ಮಾತ್ರ ಚಾಣಕ್ಯನ ಮೆದಳಿನ ವೇಗಕ್ಕೆ ಕೆಲಸ ಮಾಡುತ್ತಿರುತ್ತದೆ. ನಮ್ಮ ಫ್ರೆಂಡ್ಸ್ ಸರ್ಕಲ್ ನಲ್ಲಿರುವ ಕೆಲವರು ‘ಈ ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ’ ಎಂದು ಹೇಳಿ ಮರುದಿನ ತಮ್ಮ ಹೇಳಿಕೆಗೆ ವಿರುದ್ಧವಾಗಿ ಇತರ ಪ್ರೇಮಿಗಳ ಜೊತೆ ತಾವು ಗುಲಾಬಿ ಅಂಗಡಿ ಮುಂದೆ ಕ್ಯೂ ನಿಂತಿರುತ್ತಾರೆ. ಇನ್ನೂ ಕೆಲವು ‘ಒನ್ ವೇ ಲವ್’ ಸ್ಟೋರಿಗಳ ಪ್ರೇಮಿಗಳು ತಮ್ಮ ಸೋಶಿಯಲ್ ಮೀಡಿಯಾ ಸ್ಟೇಟಸ್ ಅನ್ನು ಗುಲಾಬಿಯಿಂದ ತುಂಬಿಸಿ ಭಾವನೆಗಳ ಸುರಿಮಳೆಯನ್ನೇ ಹರಿಸಿರುತ್ತಾರೆ. ಆದರೆ ವಿಪರ್ಯಾಸವೆಂದರೆ ಅವರು ಯಾವ ವ್ಯಕ್ತಿಗೆ ಹೇಳುತ್ತಾರೆಂದು ಅದರಲ್ಲಿ ನಮೂದಿಸಿರುವುದಿಲ್ಲ. ಒಂದು ವೇಳೆ ಹೆಸರು ಹಾಕುವ ಧೈರ್ಯವಿದ್ದಿದ್ದರೆ ಗುಲಾಬಿಯನ್ನು ನೇರವಾಗಿ ಕೊಡುತ್ತಿದ್ದರು ಅಲ್ಲವೇ !
ಇನ್ನು ಈ ಪ್ರೇಮಿಗಳ ದಿನಾಚರಣೆಯನ್ನು ಆಚರಿಸುವುದಕ್ಕೆ ವಯೋಮಿತಿಯ ಅಂತರವು ಇಲ್ಲದಿರುವ ಕಾರಣ ಎಲ್ಲಿ ತಾನು ಹೂ ಕೊಡಲು ಹೋದ ಪ್ರೇಯಸಿ ‘ಅಣ್ಣ’ ಎಂದು ಕರೆಯುತ್ತಾಳೋ, ಅಥವಾ ‘ಯು ಆರ್ ಲೈಕ್ ಮೈ ಬ್ರದರ್’ ಅಂತ ಹೇಳುತ್ತಾಳೋ, ಇನ್ನೂ ಕಠಿಣವಾಗಿ ‘ವೀ ಆರ್ ಜಸ್ಟ್ ಗುಡ್ ಫ್ರೆಂಡ್ಸ್’ ಅಂಥ ಸಿನಿಮಾ ಡೈಲಾಗ್ ಮೂಲಕ ಕಥೆಗೆ ಫುಲ್ ಸ್ಟಾಪ್ ಇಡುತ್ತಾಳೋ ಎನ್ನುವ ಭಯ ಪ್ರೇಮಿಗಳಲ್ಲಿ ಹೆಚ್ಚಾಗಿರುತ್ತದೆ.
ಪ್ರೇಮಿಗಳ ಭಯ ಏನೆಂದು ಪ್ರೇಮಿಗಳಿಗೆ ತಿಳಿಯುವುದೇ ವಿನಃ ನನ್ನಂಥವರಿಗೆ ಅಲ್ಲ. ನನಗೆ ಕೇವಲ ನನ್ನ ಫ್ರೆಂಡ್ಸ್ ಗಳ ‘ಫ್ಲಾಪ್ ಲವ್ ಸ್ಟೋರಿ‘ ಮಾತ್ರವೆ ಕೇಳಿ ಅಭ್ಯಾಸ. ಪ್ರೀತಿಯ ಹೆಸರಿನಲ್ಲಿ ಸಾಕಷ್ಟು ಭಾರಿ ಮೋಸ ಮಾಡುವವರು ಇದ್ದಾರೆ. ಮೋಸ ಹೋಗುವವರು ಇದ್ದಾರೆ. ಆದರೆ, ಇದರ ಹೊಡೆತ ನಿಜವಾದ ಪ್ರೇಮಿಗಳ ಮೇಲೆ ಬೀಳುತ್ತಿದೆ.
ಪ್ರೀತಿಯ ಬಗ್ಗೆ ನಾನು ಆಳವಾಗಿ ಅರಿತಿಲ್ಲವಾದರೂ, ಅದನ್ನು ಇತರ ನಿಜವಾದ ಪ್ರೇಮಿಗಳನ್ನು ನೋಡಿ ತಿಳಿದಿರುವೆ. ನಮ್ಮ ಅಧ್ಯಾಪಕರೊಬ್ಬರದ್ದು ಲವ್ ಮ್ಯಾರೇಜ್. ತಮ್ಮ ಜೀವನದಲ್ಲಿ ಬಂದ ಸವಾಲುಗಳನ್ನು ಧೈರ್ಯವಾಗಿ ಎದುರಿಸಿ ಪ್ರೀತಿಸಿದ ಹುಡುಗಿಯನ್ನೇ ಮದುವೆಯಾದರು. ‘ನನ್ನ ಜೀವನದಲ್ಲಿ ಏನೇ ಆದರೂ ನಾನು ಪ್ರೀತಿಸಿದ ಹುಡುಗಿಯನ್ನೇ ಮದುವೆಯಾದೆ. ಅದು ನನಗೆ ತುಂಬಾ ಖುಷಿ ತಂದಿದೆ ‘ಎಂದು ಅವರು ಅಗಾಗ ಹೇಳುತ್ತಿರುತ್ತಾರೆ. ನಿಮ್ಮ ಪ್ರೀತಿಯಿಂದ ಸಾಗುತ್ತಿರುವ ಜೀವನಶೈಲಿಗೆ ನನ್ನದೊಂದು ಸಲಾಂ ಸರ್. ರವಿಯ ಕಿರಣಗಳಷ್ಟೆ ಶ್ರೇಷ್ಠವಾದ ನಿಮ್ಮ ಪ್ರೀತಿ ಇತರ ಪ್ರೇಮಿಗಳಿಗೆ ಒಂದು ಒಳ್ಳೆಯ ಉದಾಹರಣೆಯಾಗಲಿ ಎಂದು ಬಯಸುತ್ತೇನೆ.
ಬರಹ: ತೇಜು
ಆಳ್ವಾಸ್ ಕಾಲೇಜು
ಪತ್ರಿಕೋದ್ಯಮ ವಿಭಾಗ