ಇಡೀ ಜಗತ್ತಿನಾದ್ಯಂತ ತನ್ನ ಕಬಂಧಬಾಹುಗಳನ್ನು ಚಾಚಿರುವ ಅಪಾಯಕಾರಿ ಕೋವಿಡ್ ಹಿನ್ನೆಲೆಯಲ್ಲಿ ಮುಂಜಾಗ್ರತೆಗೆ ಲಾಕ್‌ಡೌನ್ ಘೋಷಿಸಲಾಗಿತ್ತು. ನಗರದಲ್ಲಿದ್ದ ಅದೆಷ್ಟೋ ಜನರು ತಮ್ಮೂರಿನತ್ತ ಧಾವಿಸಿದರು. ಶಾಲೆ ಕಲಿತು ಊರು ಬಿಟ್ಟು ಹೋಗಿದ್ದ ಮಗ, ಶಿಕ್ಷಣ ತಲೆಗೆ ಹತ್ತದೆ ಊರು ಬಿಟ್ಟು ದುಡಿಯಲು ಹೋದ ಯುವಕ, ಹಳ್ಳಿ ಬೇಡವೆಂದು ಪೇಟೆ ಸೇರಿದ್ದ ಸೊಸೆ, ಜತೆಗೆ ಮೂಕ ಬಸವನಂತಿರುವ ಆಕೆಯ ಗಂಡ, ದುಡಿಮೆ ಇಲ್ಲವೆಂದೂ ನೆಪ ಹೇಳಿ ಪಟ್ಟಣಕ್ಕೆ ಹೋಗಿದ್ದ ಹಿರಿಯರು.. ಹೀಗೆ ಒಂದೊಂದು ನೆಪದಿಂದ ಮೂಲ ಊರನ್ನು ತೊರೆದು ಹೋದವರು ಈಗ ಮತ್ತೇ ಊರು ಸೇರುತ್ತಿದ್ದಾರೆ.
ಇವರೆಲ್ಲ ಬಹಳ ದಿನಗಳ ಮೇಲೆ ಊರಿಗೆ ಬಂದರೆಂದು ಖುಷಿ ಪಡುವುದೋ ಅಥವಾ ಇಂತಹ ಸಂಕಷ್ಟ ಕಾಲದಲ್ಲಿ ಊರು ನೆನಪಾಯಿತೇ? ಎಂದು ವ್ಯಥೆಪಡುವುದೋ ಒಂದು ತಿಳಿಯದಾಗಿದೆ.
ಇದು ಒಂದು ಕಥೆಯಾದರೆ ಇನ್ನು ಊರಿನ ಪಂಚಾಯತ್ ಕಟ್ಟೆ ಮೇಲೆ ಕುಳಿತು ಊರಿನ ಉಸಾಬರೀ ಮಾತನಾಡುವ ನಮ್ಮೂರಿನ ಹಿರಿಯರು, ವೃದ್ಧರದು ಇನ್ನೊಂದು ಕಥೆ. ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಎಂಬ ಪದಗಳನ್ನೇ ಮೊದಲ ಬಾರಿಗೆ ಕೇಳಿದ ಇವರು ಕೊರೊನಾಕ್ಕೆ ಅಂಜಿ ಮನೆಯ ಬಾಗಿಲಿನಲ್ಲೇ ಕುಳಿತುಕೊಳ್ಳುವ ಹಾಗೆ ಆಗಿದೆ. ಮೂರು ಹೊತ್ತು ಮೊಬೈಲ್‌ನಲ್ಲೇ ಕಾಲ ಕಳೆಯುವ ಯುವಕರು, ಹಪ್ಪಳ ಸಂಡಿಗೆ ಹಾಕುವಲ್ಲಿಯೇ ನಿರತರಾಗಿರುವ ಮನೆಯ ಹೆಣ್ಮಕ್ಕಳು.. ಹೀಗೆ ಊರಿನ ಎಲ್ಲರನ್ನೂ ಮನೆ ಬಿಟ್ಟು ಹೊರಬರದಂತೆ ಮಾಡಿದೆ ಈ ಕೋವಿಡ್.
ಯಜಮಾನರು ದಮ್ಮು, ಕೆಮ್ಮು ಅಂತ ಕೆಮ್ಮಿದರೂ ಎಲ್ಲರೂ ದೂರ ಸರಿಯುತ್ತಾರೆ. ಸ್ವಲ್ಪ ಹುಷಾರಿಲ್ಲ ಎಂದು ಆಸ್ಪತ್ರೆಗೆ ಹೋಗಬೇಕು ಅಂದ್ರೂ ಅದಕ್ಕೂ ಭಯ. ಇನ್ನು ಅಪ್ಪ-ಅಮ್ಮ ಅವರು ಬೇರೆ ಊರಿನಲ್ಲಿರುವ ತಮ್ಮ ಮಗಳ ಮನೆಗೆ ಹೋದರೆ ಕೂಡ ಕೋವಿಡ್ ಭಯ. ಅವರಿಗೆ ಅಪ್ಪ-ಅಮ್ಮ ಬಂದರು ಅನ್ನೋ ಖುಷಿಗಿಂತ ಕ್ವಾರಂಟೈನ್, ಹೋಂ ಕ್ವಾರಂಟೈನ್ ಎಲ್ಲಿ ಮಾಡ್ತಾರೋ ಎಂಬ ಭಯ. ಹೀಗೆ ಇಡೀ ಊರು ಊರನ್ನೇ ದಿಕ್ಕು ತೋಚದೇ ಹಾಗೇ ಮಾಡಿದೆ ಕಣ್ಣಿಗೆ ಕಾಣದ ವೈರಸ್. ಇದರ ಮಧ್ಯೆಯೇ ನಾವು ಬದುಕಿ ತೋರಿಸಬೇಕಿದೆ. ಮುಂಜಾಗ್ರತೆಯೊಂದಿದ್ದರೆ ಎಲ್ಲವೂ ಸಾಧ್ಯ.
ಶುಭಾ ಹತ್ತಳ್ಳಿ
ಎಸ್.ಬಿ.ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯ ವಿಜಯಪುರ