Advertisement

ಇವತ್ತೇ ಸಿಂಗರ್‌ ಆಗ್ಬಿಡಿ…

02:15 PM Feb 13, 2018 | Harsha Rao |

ಶಾಸ್ತ್ರೀಯವಾಗಿ ಹಾಡುವ ಸಂಗೀತಗಾರರೆಲ್ಲ 80- 90 ವರ್ಷ ಬದುಕುತ್ತಾರೆ ಎನ್ನುತ್ತದೆ ವಿಜ್ಞಾನ. ಏಕೆ ಗೊತ್ತಾ? ಅವರು ಈ ಹಾಡುಗಳನ್ನು ರಾಗಬದ್ಧವಾಗಿ ಹಾಡುವಾಗ ರಾಗಗಳ ಏರಿಳಿತಗಳಿಗೆ ತಕ್ಕಂತೆ ತಮ್ಮ ಉಸಿರನ್ನು ಕ್ರಮಗೊಳಿಸಿರುತ್ತಾರೆ. ಹಾಗೆಯೇ ತಮ್ಮಷ್ಟಕ್ಕೇ ಹಾಡುವ, ಬಾತ್‌ರೂಮ್‌ ಸಿಂಗರ್‌ಗಳು ಕೂಡ ಆಯುಸ್ಸನ್ನು ಹೆಚ್ಚಿಸಿಕೊಳ್ತಾರಂತೆ…

Advertisement

ಅವರ ಹಾಡಿಗೆ ಚಪ್ಪಾಳೆ ಬೀಳುವುದಿಲ್ಲ. ಕೋಗಿಲೆ ದನಿಯ ಇಂಪು ಅವರೊಳಗೇನೂ ಅವಿತಿರುವುದಿಲ್ಲ. ಸೋನು ನಿಗಮ್‌ನಂಥ ನವಿರಾದ ಕಂಠ, ಎಸ್ಪಿಯಂತೆ ಎದೆಯಾಳದಿಂದ ಮಾಂತ್ರಿಕವಾಗಿ ಹಾಡುವ ಕಲೆಗಾರಿಕೆಯೂ ಅವರಿಗೆ ಅಷ್ಟೇನೂ ಸಿದ್ಧಿಸಿರುವುದಿಲ್ಲ. ಹಾಡಲೂ ಅವರಿಗೆ ಮೈಕು ಹುದುಗಿಸಿಟ್ಟ ವೇದಿಕೆಯೂ ಬೇಕಿರುವುದಿಲ್ಲ. ಅದು ಸಂತೆಯೋ, ಏಕಾಂತವೇ ಹೊದ್ದು ಮಲಗಿದ ಬೆಟ್ಟವೋ, ನರಪಿಳ್ಳೆಯೂ ಇಲ್ಲದ ಬಯಲೋ… ಎಲ್ಲಿಯಾದರೂ ಸೈ, ಶ್ರುತಿ- ಲಯಗಳ ಹದವನ್ನೆಲ್ಲ ಲೆಕ್ಕಿಸದೇ ಹಾಡುತ್ತಿರುತ್ತಾರೆ. ಹಾಗೆ ಗುನುಗುವ ಹಾಡು ಅವರಿಗೆ ಆತ್ಮಸಂತೋಷವೊಂದನ್ನು ದಯಪಾಲಿಸುತ್ತಿರುತ್ತದೆ.

ಹೀಗೆ ಹಾಡುವ ಮಂದಿಯಲ್ಲಿ ಅನೇಕರಿಗೆ “ಬಾತ್‌ರೂಮ್‌ ಸಿಂಗರ್‌’ ಪಟ್ಟ ಸಿಕ್ಕಿರುತ್ತದೆ. ಸ್ನಾನದ ಮನೆಯಲ್ಲೂ ಗಾನಸುಧೆ ಹರಿಸುವ ಮಂದಿ ಇವರು. ನಿಮಗೆಲ್ಲ ಇಂಥವರ ಪರಿಚಯ ಆಗಿಯೇ ಇರುತ್ತೆ. ಇಲ್ಲವೇ ನೀವೇ ಕೆಲವು ಸಲ ಬಾತ್‌ರೂಮ್‌ ಸಿಂಗರ್‌ ಆಗಿದ್ದಿರಬಹುದು. ನೆನಪಿಸಿಕೊಳ್ಳಿ, ನಿಮಗಿಷ್ಟದ ಫಿಲಮ್ಮಿನಲ್ಲಿರೋ ಯಾವುದೋ ಒಂದು ಹಾಡನ್ನು ಆಗಾಗ್ಗೆ ನಿಮ್ಮ ನಾಲಗೆಯ ಮೇಲೆ ಕುಣಿಯುವಂತೆ ಮಾಡುತ್ತಿರುತ್ತೀರಿ. ಯಾರೇನೇ ಕಮೆಂಟಿಸಿದರೂ ಲೆಕ್ಕಿಸುವುದಿಲ್ಲ. ಯಾರೋ ಕೇಳಲಿಯೆಂದು ನೀವು ಹಾಡುವುದೂ ಇಲ್ಲ.

ಶಾಸ್ತ್ರೀಯವಾಗಿ ಹಾಡುವ ಸಂಗೀತಗಾರರೆಲ್ಲ 80- 90 ವರ್ಷ ಬದುಕುತ್ತಾರೆ ಎನ್ನುತ್ತದೆ ವಿಜ್ಞಾನ. ಏಕೆ ಗೊತ್ತಾ? ಅವರು ಈ ಹಾಡುಗಳನ್ನು ರಾಗಬದ್ಧವಾಗಿ ಹಾಡುವಾಗ ರಾಗಗಳ ಏರಿಳಿತಗಳಿಗೆ ತಕ್ಕಂತೆ ತಮ್ಮ ಉಸಿರನ್ನು ಕ್ರಮಗೊಳಿಸಿರುತ್ತಾರೆ. ಅರ್ಥಾತ್‌ ಇದೊಂದು ಪ್ರಾಣಾಯಾಮವೇ ಸರಿ, ಉಸಿರನ್ನು ಕೆಲವು ಕ್ಷಣ ಹಿಡಿಯುವುದು, ಬಿಡುವುದು… ಹೀಗೆ ಈ ಉಸಿರಿನ ಕ್ರಮಬದ್ಧ ಏರಿಳಿತದಿಂದ ಅವರು ಖುಷಿಯಿಂದ, ಆರಾಮವಾಗಿ, ಆರೋಗ್ಯಪೂರ್ಣವಾಗಿ ಇರುತ್ತಾರೆ. ಶಾಸ್ತ್ರೀಯವಾಗಿ ಏಕೆ, ಎಲ್ಲೆಂದರಲ್ಲಿ ತಮ್ಮ ಖುಷಿಗೆ ಹಾಡುವ ಮಂದಿಯೂ ಹೆಚ್ಚು ಖುಷಿಯಲ್ಲಿರುತ್ತಾರಂತೆ.

ವೈಜ್ಞಾನಿಕ ಮಾಹಿತಿಯ ಪ್ರಕಾರ, ಯಾವ ಜೀವಿಯು ಅತಿ ವೇಗವಾಗಿ ಉಸಿರಾಡುತ್ತಿರುತ್ತದೆಯೋ, ಅದರ ಆಯುಸ್ಸು ಕಮ್ಮಿಯಂತೆ. ಉದಾ: ನಾಯಿ ದೊಡ್ಡ ಪ್ರಾಣಿಯಾದರೂ ನಾಲಗೆ ಹೊರಹಾಕಿ, ಅತಿ ವೇಗದಲ್ಲಿ ಉಸಿರಾಟ ಕ್ರಿಯೆ ನಡೆಸುವುದರಿಂದ, ಅದರ ಜೀವಿತಾವಧಿ ಕೇವಲ 20ರಿಂದ 25 ವರ್ಷ. ಅದೇ ಆಮೆ ಚಿಕ್ಕದಾದ್ರೂ ಸರಾಸರಿ ನೂರು ವರ್ಷ ಬದುಕುತ್ತೆ. ಯಾಕೆ ಗೊತ್ತೇ? ಅದರ ಉಸಿರಾಟ ಕ್ರಿಯೆ ಅತ್ಯಂತ ನಿಧಾನ. 

Advertisement

ಇಷ್ಟೆಲ್ಲ ಪೀಠಿಕೆ ಯಾಕಂದ್ರೆ, ಇತ್ತೀಚೆಗೆ ಒಂದು ಸಂಶೋಧನೆ ನಡೆಯಿತು. ತಮ್ಮಷ್ಟಕ್ಕೇ ಹಾಡುವುದರಿಂದ ವ್ಯಕ್ತಿ ಬಹಳ ಸಂತೋಷದಿಂದಲೂ ಹಾಗೂ ಲವಲವಿಕೆಯಿಂದಲೂ ಇರುತ್ತಾನಂತೆ. ಇಂಗ್ಲೆಂಡಿನ ನಾರ್ವಿಚ್‌ ಮೆಡಿಕಲ… ಸ್ಕೂಲ…ನ ಮುಖ್ಯ ರೀಸರ್ಚ್‌ ಫೆಲೋ ಪ್ರೊ. ಟಾಮ… ಶೇಕ್ಸ್‌ಪಿಯರ್‌ ಹಾಗೂ ಪ್ರೊ. ಡಾ|| ಆಲಿಸ್‌ ವಿಲ್ಡನ್‌ ಜೊತೆಯಾಗಿ ನಾಫೊìàಕ್‌ನಲ್ಲಿ ಈ ಸಂಶೋಧನೆ ನಡೆಸಿದರು. ಹೀಗೆ ಹಾಡುವುದರಿಂದ ಮಾನಸಿಕ ಖನ್ನತೆ, ಮಾನಸಿಕ ಜಾಡ್ಯ,ಆತಂಕ ಮುಂತಾದ ಮನೋವೈಕಲ್ಯಗಳು ದೂರವಾಗುತ್ತವಂತೆ.

ಈ ಇಬ್ಬರು ಪ್ರೊಫೆಸರ್‌ಗಳು ಒಂದು ಸೈಕಿಯಾಟ್ರಿಕ್‌ ಆಸ್ಪತ್ರೆಯಲ್ಲಿ ಸಾಮಾನ್ಯ ವ್ಯಕ್ತಿಗಳಿಗೂ ಹಾಗೂ ಮಾನಸಿಕ ಸಮಸ್ಯೆಯುಳ್ಳ ವ್ಯಕ್ತಿಗಳಿಗೂ “ಸಿಂಗಿಂಗ್‌ ವರ್ಕ್‌ಶಾಪ್‌’ ಹಮ್ಮಿಕೊಂಡಿದ್ದರು. ಇಂಥದ್ದೇ ಕಾರ್ಯಾಗಾರವನ್ನು ಬೇರೆ ಬೇರೆ ಜನಗಳ ನಡುವೆಯೂ ಆಯೋಜಿಸಿದರು. ಕೊನೆಯಲ್ಲಿ ಇದರಿಂದ ತಿಳಿದುಬಂದಿದ್ದು, ಹಾಡುವಿಕೆ ಎನ್ನುವುದು ವ್ಯಕ್ತಿಯು ಖನ್ನತೆ, ಒತ್ತಡಗಳನ್ನು ದೂರ ಮಾಡುತ್ತದೆಂದು. ಇಂಥವರ ಮಾನಸಿಕ ಆರೋಗ್ಯವಷ್ಟೇ ಅಲ್ಲ, ದೈಹಿಕ ಆರೋಗ್ಯವೂ ಚೆನ್ನಾಗಿರುತ್ತಂತೆ. 

ಈ ಸಂಶೋಧನೆ ಹೊಸತೇ ಇದ್ದಿರಬಹುದು. ಆದರೆ, ನಮ್ಮ ಹಿರಿಯರ ಸಂಪ್ರದಾಯಗಳ ಹಿಂದೆಯೂ ಇಂಥದ್ದೇ ವಿಜ್ಞಾನ ಇದೆಯಲ್ಲವೇ? ಶ್ರಾವಣ ಮಾಸದ ಪ್ರಾತಃಕಾಲದಲ್ಲೇ ಊರಿನ ಓಣಿಗಳಲ್ಲೆಲ್ಲಾ ಜನ ಗುಂಪಾಗಿ ತಾಳವಾದ್ಯಗಳನ್ನು ಹಿಡಿದು ಹಾಡುತ್ತಾ ಸಾಗುತ್ತಾರೆ. ಸಂಜೆ ದೇಗುಲಗಳಲ್ಲಿ ಭಜನೆ, ಆಯಾ ಸಮಾಜದ ಬಾಂಧವರು ಒಂದು ಭಜನಾ ಮಂಡಳಿಯನ್ನು ಕಟ್ಟಿಕೊಂಡು ವಾರದಲ್ಲಿ ಒಬ್ಬೊಬ್ಬರ ಮನೆಯಲ್ಲಿ, ಗಣಪತಿ, ಕೃಷ್ಣ, ಸಾಯಿಬಾಬಾ, ರಾಘವೇಂದ್ರ, ಈಶ್ವರ, ಲಕ್ಷ್ಮಿ ಮುಂತಾದ ದೇವರ ಹಲವಾರು ಭಜನಾ ಗೀತೆಗಳನ್ನು ಗುಂಪಾಗಿ ಹಾಡುವುದು, ಪಾಂಡುರಂಗನ ದೇಗುಲದಲ್ಲಿ ಅಭಂಗ ಮುಂತಾದ ದೇವರ ನಾಮಸ್ಮರಣೆಗಳನ್ನು ಅಹೋರಾತ್ರಿ ಹಾಡಿ, ಜಾಗರಣೆ ಮಾಡುವುದು… ಇನ್ನೂ ಹತ್ತು ಹಲವು ಆಚರಣೆಗಳು ನಮ್ಮ ಮಾನಸಿಕ ಆರೋಗ್ಯವನ್ನು ಶತಮಾನಗಳಿಂದ ಕಾಪಾಡುತ್ತಲೇ ಬಂದಿವೆ.

ಆ ಭಜನೆಯಿಂದ ಈಗಿನ ಬಾತ್‌ರೂಮ್‌ ಹಾಡಿನ ತನಕವೂ ಮಾನಸಿಕ ನೆಮ್ಮದಿ ಸಿಗುತ್ತದೆಯೆಂದಾದರೆ, ನಾವೇಕೆ ನಮ್ಮಷ್ಟಕ್ಕೇ ಹಾಡುತ್ತಿರಬಾರದು? ಹಾಡಿ ಮತ್ತೇ…

ನೀವೂ ಹಾಡಿ, ಏಕೆಂದರೆ…
– ಹಾಡುವಾಗ ಹೃದಯ, ಶ್ವಾಸಕೋಶ, ದವಡೆ ಮತ್ತು ಮೆದುಳುಗಳಿಗೆ ವ್ಯಾಯಾಮ ಸಿಗುತ್ತದೆ. 
– ನರವ್ಯೂಹಗಳನಲ್ಲಿನ ಒತ್ತಡ ನಿವಾರಣೆಯಾಗಿ, ರಕ್ತ ಸಂಚಾರ ಸರಾಗವಾಗುತ್ತದೆ.
– ಏಕಾಗ್ರತೆ ಹೆಚ್ಚಿಸಲು ಹಾಡು ಸಹಕಾರಿ.
– ಹಾಡುಗಾರರಿಗೆ ಬೇಗ ನಿದ್ದೆ ಬರುತ್ತೆ.
– ಖನ್ನತೆಯನ್ನು ಹೋಗಲಾಡಿಸುತ್ತೆ.

– ಎಲ್‌.ಪಿ. ಕುಲಕರ್ಣಿ

Advertisement

Udayavani is now on Telegram. Click here to join our channel and stay updated with the latest news.

Next