ಮನಸ್ಸು ಶುದ್ಧವಾಗದ ಹೊರತು ದಿವ್ಯಾನುಭವ ಅಸಾಧ್ಯ. ಅಶುದ್ಧ ಚಿತ್ತನಿಗೂ ಎಲ್ಲಿಯಾದರೂ ದಿವ್ಯಾನುಭವ ಆಗಿದ್ದರೆ ಅವನಿಗೆ ದೇವರ ವಿಶೇಷ ಅನುಗ್ರಹದಿಂದಲೋ, ಗುರುವಿನ ಅನುಗ್ರಹದಿಂದಲೋ, ತಾತ್ಕಾಲಿಕವಾಗಿಯಾದರೂ ಶುದ್ಧ ಮನಸ್ಸಿನ ಸ್ಥಿತಿ ಉಂಟಾಗಿ ದ್ದಿರಬೇಕಷ್ಟೇ. ದಿವ್ಯಾನುಭವಕ್ಕೆ ದಿವ್ಯ ಮನಸ್ಸೇ ಬೇಕು. ಆ ದಿವ್ಯಾನು ಭವಗಳಲ್ಲಿ ಶ್ರೇಷ್ಠವಾದದ್ದು ಪರಮಾತ್ಮ ಸಾಕ್ಷಾತ್ಕಾರ. ಅಲ್ಲಿಗೆ ಹೋಗಲು ಚಿತ್ತದ ಶೋಧನೆ ಅವಶ್ಯ.
ಚಿತ್ತ ಶೋಧನೆಯಲ್ಲಿ ಎರಡು ವಿಧ. ಸುಪ್ತ ಮನಸ್ಸಿನ ಶೋಧನೆ ಹಾಗೂ ವ್ಯಕ್ತ ಮನಸ್ಸಿನ ಶೋಧನೆ. ಸುಪ್ತ ಮನಸ್ಸು ಎಂದರೆ, ನಮ್ಮ ಹಿಂದಿನ ಜನ್ಮದ ಅನುಭವಗಳ ಸಂಸ್ಕಾರಗಳನ್ನು ಇಟ್ಟುಕೊಂಡಿರುವ ಮನಸ್ಸಿನ ಒಂದು ಅವ್ಯಕ್ತ ಭಾಗ. ಸಂಚಿತ ಕರ್ಮಗಳೆಲ್ಲವೂ ಈ ಸುಪ್ತ ಮನಸ್ಸಿನಲ್ಲಿರುತ್ತವೆ. ಮರಣ ಕಾಲದಲ್ಲಿ ಈ ಸುಪ್ತ ಮನಸ್ಸಿನ ಪೆಟ್ಟಿಗೆಯ ಬಾಗಿಲು ತೆರೆದುಕೊಳ್ಳುತ್ತದೆ. ಮರಣವೆಂದರೆ, ಈ ಜನ್ಮದಲ್ಲಿ ಅನುಭವಿಸಬೇಕಾಗಿದ್ದ ಪ್ರಾರಬ್ಧ ಕರ್ಮಗಳು ಖರ್ಚಾಗಿವೆ ಎಂದರ್ಥ.
ಆಗ ಪೆಟ್ಟಿಗೆಯಿಂದ ತೆಗೆಯಲ್ಪಟ್ಟ ಸಂಚಿತ ಕರ್ಮವೊಂದು ಫಲ ಕೊಡಲು ಪ್ರಾರಂಭಿಸುತ್ತದೆ. ಹೀಗೆ ಫಲ ಕೊಡಲು ಪ್ರಾರಂಭಿಸಿದ ಕರ್ಮಗಳು, ಪ್ರಾರಬ್ಧ ಕರ್ಮಗಳೆನಿಸಿಕೊಳ್ಳುತ್ತವೆ. ಮರಣ ಕಾಲದಲ್ಲಿ ಅಭಿವ್ಯಕ್ತವಾದ ಪ್ರಾರಬ್ಧ ಕರ್ಮದಿಂದಲೇ ಮುಂದಿನ ಜನ್ಮದ ಕ್ರೂರಿಯೋ, ಸ್ನೇಹಿಯೋ ಮುಂತಾದ ಮನಃಸ್ಥಿತಿಯುಂಟಾಗುತ್ತದೆ. ಈ ಜನ್ಮದಲ್ಲಿ ನಮ್ಮ ಭಾವನೆಗಳಿಗೆ, ಆಲೋಚನೆಗಳಿಗೆ ಒಂದಲ್ಲ ಒಂದು ವಿಧದಲ್ಲಿ, ಗೋಚರಿಸುವ ನಮ್ಮ ಮನಃಸ್ಥಿತಿಯೇ ವ್ಯಕ್ತ ಮನಸ್ಸು.
ಸುಪ್ತ ಮನಸ್ಸು ಇದರ ಹಿಂದಿರುತ್ತದೆ. ಮನಸ್ಸು ಶುದ್ಧವಾಗಬೇಕಾದರೆ ಸುಪ್ತ ಮನಸ್ಸಿಗೂ ಸಂಸ್ಕಾರ ಬೇಕು. ವ್ಯಕ್ತ ಮನಸ್ಸಿಗೂ ಸಂಸ್ಕಾರ ಬೇಕು. ಸಂಸ್ಕಾರ ಕರ್ಮಗಳು ಹೆಚ್ಚಿನ ಅಂಶದಲ್ಲಿ ಸುಪ್ತ ಮನಸ್ಸಿನ ಸಂಸ್ಕಾರಕ್ಕಾಗಿಯೇ ಇವೆ.
ಉದಾ: ಉಪನಯನ ಸಂಸ್ಕಾರದಲ್ಲಿನ ಹವನಗಳು. ವ್ಯಕ್ತ ಮನಸ್ಸಿನ ಮೇಲೆ ಅಷ್ಟೇನೂ ಪರಿಣಾಮ ಬೀರುವುದಿಲ್ಲ. ಆದರೆ, ಮಂತ್ರೋಪದೇಶ, ಅದರ ಕ್ರಮವತ್ತಾದ ಉಪಾಸನೆ ಮುಂತಾದವುಗಳು ನಮ್ಮ ವ್ಯಕ್ತ ಮನಸ್ಸಿಗೆ ಶಾಂತಿ- ಸಮಾಧಾನಗಳನ್ನು ತಂದುಕೊಡುತ್ತವೆ.
ಅದರ ಮುಖ್ಯ ಉದ್ದೇಶ ಸುಪ್ತ ಮನಸ್ಸಿಗೆ ಸಂಸ್ಕಾರ ನೀಡುವುದೇ ಆಗಿದೆ. ಅನೇಕ ವಿಧದ ಮಾನಸಿಕ, ದೈಹಿಕ ಕಾಯಿಲೆಗಳಿಗೆ ಮನಸ್ಸಿನ ಅಶುದ್ಧಿಯೇ ಕಾರಣವಾಗಿದೆ. ಸಂಸ್ಕಾರ ಕರ್ಮಗಳು, ನಿತ್ಯ ಕರ್ಮಗಳು, ಸತ್ಸಂಗ ಮುಂತಾದವುಗಳ ಮೂಲಕ ಈ ಎರಡು ವಿಧದ ಅಶುದ್ಧಿಯನ್ನು ಹೋಗಲಾಡಿಸಿಕೊಂಡರೆ, ಎರಡೂ ವಿಧದ ಕಾಯಿಲೆಗಳು ಬಹುಮಟ್ಟಿಗೆ ಕಡಿಮೆ ಆಗುತ್ತವೆ. ಚೆನ್ನಾಗಿ ಸಾಧನೆ ಮಾಡಿ ಸುಪ್ತ, ವ್ಯಕ್ತ ಮನಸ್ಸುಗಳೆರಡನ್ನೂ ಪೂರ್ತಿ ಶುದ್ಧಿಗೊಳಿಸಿಕೊಂಡರೆ, ಅವನೊಬ್ಬ ಮಹಾತ್ಮನಾಗುತ್ತಾನೆ.
* ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಶ್ರೀ ಸ್ವರ್ಣವಲ್ಲೀ ಮಹಾ ಸಂಸ್ಥಾನ, ಸೋಂದಾ, ಶಿರಸಿ