Advertisement

ಭಾಲ್ಕಿಯೊಂದಿಗಿತ್ತು ಅವಿನಾಭಾವ ಸಂಬಂಧ

12:44 PM Oct 21, 2018 | Team Udayavani |

ಭಾಲ್ಕಿ: ಗದಗ ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ನಿಧನರಾದ ಹಿನ್ನೆಲೆಯಲ್ಲಿ ಪಟ್ಟಣದ ಚನ್ನಬಸವಾಶ್ರಮದಲ್ಲಿ ಶನಿವಾರ ಹಿರೇಮಠ ಸಂಸ್ಥಾನದ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

Advertisement

ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾದ ಡಾ| ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಗುದಗಿನ ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಭಾಲ್ಕಿ ಮಠ ಹಾಗೂ ಬಸವಕಲ್ಯಾಣ ಅನುಭವ ಮಂಟಪದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಇವರು ಬಸವತತ್ವ ನಿಷ್ಠರು. ವಚನ ಸಾಹಿತ್ಯವನ್ನು ನಾಡಿನ ಮೂಲೆ ಮೂಲೆಗೆ ಮುಟ್ಟಿಸುವಲ್ಲಿ ಗಣನೀಯ ಸೇವೆ ಸಲ್ಲಿಸಿದವರೂ ಆಗಿದ್ದರು. ಅವರ ನಿಧನ ನಮಗೆ ತೀವ್ರ ಅಘಾತವನ್ನುಂಟು ಮಾಡಿದೆ ಎಂದರು.

ಪೂಜ್ಯರು ಬಸವತತ್ವ ಆಚರಣೆ ಮತ್ತು ಶರಣ ಪರಂಪರೆಯ ಮಠಾಧಿಧೀಶರಲ್ಲಿ ಅಗ್ರಗಣ್ಯರಾಗಿದ್ದರು. ಇವರು ನಾಡಿನ ಮೂಲೆ ಮೂಲೆಗೆ ಸಂಚರಿಸಿ ಶರಣ ತತ್ವ ಪ್ರಸಾರ ಮಾಡಿದ್ದಾರೆ. ಬಸವಾದಿ ಶರಣರ ಸದಾಶಯದಂತೆ ಸಮಾಜದ ಎಲ್ಲ ವರ್ಗದ ಜನರನ್ನು ತಮ್ಮವರೆಂದು ಭಾವಿಸಿ ಅಪ್ಪಿಕೊಂಡು ಅವರಿಗೆ ತಮ್ಮ ಬೋಧನೆ ಮೂಲಕ ಉತ್ತಮ ಸಂಸ್ಕಾರ ನೀಡಿ ಸುಂದರ, ಪ್ರಜ್ಞಾವಂತ ಸಮಾಜ ಕಟ್ಟುವಲ್ಲಿ ಅಮೋಘ ಸೇವೆ ಸಲ್ಲಿಸಿದ್ದಾರೆ. ಅವರ ನಿಧನದಿಂದ ನಾವೆಲ್ಲರೂ ಬಡವರಾಗಿದ್ದೇವೆ ಎಂದು ಹೇಳಿದರು.

ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಪೂಜ್ಯರು ಭಾಲ್ಕಿ ಮಠದೊಂದಿಗೆ ಇಟ್ಟುಕೊಂಡಿರುವ ಕಾಳಜಿ ಶಬ್ದದಿಂದ ವರ್ಣಿಸಲು ಸಾಧ್ಯವಿಲ್ಲ. ಅವರು ನಮ್ಮೆಲ್ಲರಿಗೂ ಗುರುವಾಗಿ, ತಂದೆ ತಾಯಿಯಾಗಿ, ಬಂಧು ಬಳಗವಾಗಿ ನಮ್ಮೊಂದಿಗೆ ಬೆರೆತಿದ್ದರು. ಇಂದು ಅವರ ನಿಧನ ನಮ್ಮೆಲ್ಲರಿಗೂ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು. 

ಕನ್ನಡ ಪರ ಸಂಘಟನೆಯ ಪದಾಧಿಕಾರಿಗಳಾದ ಜೈರಾಜ ಕೊಳ್ಳಾ, ಸಂಗಮೇಶ ಭೂರೆ, ಸಂತೋಷ ಬಿ.ಜಿ.ಪಾಟೀಲ, ಪಾರ್ವತಿ ಧುಮ್ಮನಸೂರೆ, ಮಲ್ಲಿಕಾರ್ಜುನ ಮರಕಲೆ, ಶಿವಕುಮಾರ, ಮಲ್ಲಮ್ಮಾ ನಾಗನಕೇರೆ, ಪ್ರೊ|ಚಂದ್ರಕಾಂತ ಬಿರಾದಾರ, ಜಯರಾಜ ವೈಜಿನಾಥ ಇದ್ದರು.

Advertisement

ಈಶ್ವರ ಖಂಡ್ರೆ-ಭೀಮಣ್ಣ ಖಂಡ್ರೆ ಸಂತಾಪ 
ಭಾಲ್ಕಿ: ಗದುಗಿನ ತೋಂಟದಾರ್ಯ ಮಠದ ಶ್ರೀ ಜಗದ್ಗುರ ಸಿದ್ದಲಿಂಗ ಮಹಾಸ್ವಾಮಿಗಳ ನಿಧನಕ್ಕೆ ಕೆಪಿಸಿಸಿ ಕಾಯಾಧ್ಯಕ್ಷ ಈಶ್ವರ ಖಂಡ್ರೆ ಹಾಗೂ ಅಖೀಲ ಭಾರತ ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷ ಭೀಮಣ್ಣ ಖಂಡ್ರೆ ಸಂತಾಪ ಸೂಚಿಸಿದ್ದಾರೆ.

ಗದುಗಿನ ತೋಂಟದಾರ್ಯ ಸಂಸ್ಥಾನದ ಜಗದ್ಗುರು ಶ್ರೀ ಸಿದ್ಧಲಿಂಗಮಹಾ ಸ್ವಾಮಿಗಳು ನಮಗೆ ಸದಾಕಾಲ ಪೂಜ್ಯನೀಯರು, ಮಾರ್ಗದರ್ಶಕರು, ಬಸವತತ್ವ ನಿಷ್ಠರು. ವಚನ ಸಾಹಿತ್ಯವನ್ನು ನಾಡಿನ ಮೂಲೆ ಮೂಲೆಗೆ ಮುಟ್ಟಿಸುವಲ್ಲಿ ಗಣನೀಯ ಸೇವೆ ಸಲ್ಲಿಸಿದ ನಾಡಿನ ಹೆಸರಾಂತ ಮಠಾಧಿಧೀಶರಲ್ಲಿ ಒಬ್ಬರಾಗಿದ್ದರು. ಅವರ ನಿಧನ ವಿಷಯ ನಮಗೆ ಅಘಾತವನ್ನುಂಟು ಮಾಡಿದೆ. ಜಗದ್ಗುರು ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ನಮ್ಮ ಕುಟುಂಬದ ಜೊತೆ ಅವಿನಾಭಾವ ಸಂಬಂಧ ಹೊಂದಿದವರಾಗಿದ್ದರು. ಪೂಜ್ಯರು ಬೀದರ, ಕಲಬುರಗಿ ಹಾಗೂ ಈ ಭಾಗದಲ್ಲಿ ವಿಶೇಷವಾಗಿ ಭಾಲ್ಕಿಯ ಹಿರೇಮಠ ಸಂಸ್ಥಾನ, ಬಸವಕಲ್ಯಾಣದ ಅನುಭವ ಮಂಟಪದ ಕಾರ್ಯಕ್ರಮಕ್ಕೆ ಸದಾಕಾಲ ಬಂದು ನಮಗೆ ಮಾರ್ಗದರ್ಶನ ಮಾಡಿದವರಾಗಿದ್ದಾರೆ. ಇಂಥ ಪೂಜ್ಯರ ಅಗಲಿಕೆ ನಮಗೆ ಅಪಾರ ನೋವನ್ನುಂಟು ಮಾಡಿದೆ.

ಬಸವತತ್ವ ಆಚರಾಣೆ ಮತ್ತು ಶರಣ ಪರಂಪರೆಯ ಮಠಾಧೀಶರಲ್ಲಿ ಅಗ್ರಗಣ್ಯರಾಗಿದ್ದರು. ಅವರು ಅಪೂರ್ವ ಜ್ಞಾನಿ, ಅಪ್ರತಿಮ ವಾಗ್ಮಿಗಳಾಗಿರುವ ಅವರು ನಾಡಿನ ಮೂಲೆ ಮೂಲೆಗೆ ಸಂಚರಿಸಿ ಶರಣ ತತ್ವ ಪ್ರಸಾರ ಮಾಡಿದ್ದಾರೆ. ಬಸವಾದಿ ಶರಣರ ಸಮಾನತೆ ತತ್ವ, ಜ್ಯಾತ್ಯತೀಯ ಮೌಲ್ಯ ಮೈಗೂಡಿಸಿ ಕೊಂಡವರಾಗಿದ್ದರು. ಪೂಜ್ಯರು ರಾಷ್ಟ್ರೀಯ ಮಟ್ಟದ ಸೌಹಾರ್ದ ಪ್ರಶಸ್ತಿಯನ್ನು ಕೂಡ ಪಡೆದಿರುವುದು ಸ್ಮರಣೀಯವಾಗಿದೆ ಎಂದು ತಿಳಿಸಿದ್ದಾರೆ.

ಪೂಜ್ಯರು ತಮ್ಮ ಶ್ರೀ ಮಠದಿಂದ ಬಸವಾದಿ ಶರಣರ, ಅನೇಕ ಜನ ಸಂಗೀತ ಕಲಾವಿದರ, ಸಾಹಿತಿಗಳ, ಹಿರಿಯರ ಜೀವನ ಚರಿತ್ರೆ ಆಧರಿಸಿದ ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ಕ್ಷೇತ್ರಶ್ರೀಮಂತ ಗೊಳಿಸಿ, ಶರಣ ತತ್ವಕ್ಕೆ ಬಹುದೊಡ್ಡ ಕೊಡುಗೆ ನೀಡಿರುವುದನ್ನು ಮರೆಯುವಂತಿಲ್ಲ. ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಪೂಜ್ಯರು ಆ ಭಾಗದ ರೈತರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದರು. ಪೂಜ್ಯರ ನಿಧನದಿಂದಾಗಿ ಕರ್ನಾಟಕ ರಾಜ್ಯ ಅನಘರತ್ನವೊಂದನ್ನು ಕಳೆದುಕೊಂಡಂತಾಗಿದೆ. ಭಕ್ತ ಗಣಕ್ಕೆ ಅವರ ಅಗಲುವಿಕೆ ದುಃಖ ತಡೆದು ಕೊಳ್ಳುವ ಶಕ್ತಿ ಕರುಣಿಸಲಿ. ಜಗದ್ಗುರು ಶ್ರೀ ಸಿದ್ಧಲಿಂಗ ಮಹಾ ಸ್ವಾಮಿಗಳ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಎಂದು ಭಕ್ತಿಯಿಂದ ಪ್ರಾರ್ಥಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next