Advertisement

UV Fusion: ಗಾಳಿ, ನೀರಿನ ಸಂಬಂಧವಿದು

03:55 PM Jan 31, 2024 | Team Udayavani |

ಆಧುನಿಕ ಪ್ರಪಂಚದಲ್ಲಿ ಶಿಕ್ಷಣಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಶಿಕ್ಷಣ ಎಂಬುದು ಉತ್ತಮ ಬದುಕನ್ನು ಕಟ್ಟಿಕೊಡುವುದು. ಸುವ್ಯವಸ್ಥಿತ ಸಮಾಜವನ್ನು ಸೃಷ್ಟಿಸುದಾಗಿದೆ.

Advertisement

ಸರ್ವಜ್ಞನು ಹೀಗೆಂದಿದ್ದಾನೆ:

ವಿದ್ಯೆವುಳ್ಳವನ ಮುಖವು | ಮುದ್ದು ಬರುವಂತಿಕ್ಕು |

ವಿದ್ಯೆಯಿಲ್ಲದವನ ಬರಿ ಮುಖವು, ಹಾಳೂರ |

ಹದ್ದಿನಂತಿಕ್ಕು ಸರ್ವಜ್ಞ ||

Advertisement

ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿ ಕೇಂದ್ರ ಬಿಂದುವಾದರೆ, ಶಿಕ್ಷಕರು ಅವರನ್ನು ಮುನ್ನೆಡೆಸುವ ಸೂತ್ರಧಾರರು. ಇವರಿಬ್ಬರ ಗುರಿ ಸಾಧನೆಯಲ್ಲಿ ಹೆತ್ತ ವರು, ಶಾಲೆ, ಪಠ್ಯ ಕ್ರಮ, ಸರಕಾರದ ಜತೆಗೆ ಇಡೀ ಶಿಕ್ಷಣ ವ್ಯವಸ್ಥೆಯೇ ಬೆನ್ನೆಲುಬಾಗಿ ನಿಂತುಕೊಳ್ಳುತ್ತದೆ. ಹೆತ್ತವರು- ಶಿಕ್ಷಕರು ಸಂಬಂಧ ಗಾಳಿ – ನೀರು ಇದ್ದಂತೆ. ಮನುಷ್ಯ ಜೀವಿಸಲು ಗಾಳಿ – ನೀರು ಹೇಗೇ ಮುಖ್ಯವೋ, ಹಾಗೆಯೇ ವಿದ್ಯಾರ್ಥಿಯ ಸಾಧನೆಗೆ ಶಿಕ್ಷಕ – ಹೆತ್ತವರ ಪಾತ್ರ ಬಹು ಅವಶ್ಯಕವಾದದ್ದು.

ಶಿಕ್ಷಣವೆಂಬ ಮಹಾಸಾಗರಕ್ಕೆ ಶಿಕ್ಷಕರು ಹಾಗೂ ಹೆತ್ತವರು ಸೇತುವೆಯಿದ್ದಂತೆ! ಇವರಿಬ್ಬರದ್ದೂ ಧ್ಯೇಯ,ಆಸೆ ಒಂದೇ.ಅದುವೇ ಮಕ್ಕಳ ಸರ್ವಾಂಗೀಣ ವಿಕಾಸ, ಅವರ ಶ್ರೇಯೋಭಿವೃದ್ಧಿ. ಆದರೆ ಈ ಎರಡೂ ವರ್ಗಕ್ಕೂ ಅವರವರದೇ ಆದ ಒಂದಷ್ಟು ಕರ್ತವ್ಯ

ಜವಾಬ್ದಾರಿಗಳಿವೆ.ಅದನ್ನು ಮರೆತರೆ ಶಿಕ್ಷಣ ಎಂಬ ಗಾಲಿ ತಿರುಗುವುದೇ ಇಲ್ಲ.

ಹೆತ್ತವರು ತಮ್ಮ ಮನೆ ಮಕ್ಕಳ ಉನ್ನತಿಗಾಗಿ ಶ್ರಮಿಸಿದರೆ, ಶಿಕ್ಷಕರು ಸಾವಿರಾರು ಸಂಖ್ಯೆಯ ವಿದ್ಯಾರ್ಥಿಯರ ವಿದ್ಯಾ ಪ್ರಗತಿಗಾಗಿ ದುಡಿಯುವರು.ಆದ್ದರಿಂದಲೇ ಗುರುವನ್ನು ದೈವಕ್ಕೆ ಹೋಲಿಸುವುದು. “ವರ್ಣ ಮಾತ್ರಂ ಕಲಿಸಿದಾತಂ ಗುರು’ ಎಂಬಂತೆ ಜೀವನದಲ್ಲಿ ಒಂದು ಅಕ್ಷರ ಕಲಿಸಿದಾತನು ಗುರುವಾಗುತ್ತಾನೆ. ಆದರೆ ಆ ಗುರುವಿನ ಮನ ಶುದ್ಧವಾಗಿರಬೇಕು. ಸ್ವಾರ್ಥ, ದ್ವೇಷದಿಂದ ಮುಕ್ತವಾಗಿರಬೇಕು. ಮಾಡುವ ಕೆಲಸದಲ್ಲಿ ನಿಷ್ಠೆಯಿರಬೇಕು.ಆಗ ಮಾತ್ರ ಆದರ್ಶ ಶಿಕ್ಷಕರೆನಿಸಿಕೊಳ್ಳಬಲ್ಲರು.

ಹೆತ್ತವರು ಉರಿಯುವ ದೀಪಕ್ಕೆ ಬತ್ತಿಯಾಗಬೇಕೇ ವಿನಃ ಅದನ್ನು ಆರಿಸುವ ಬಿರುಗಾಳಿಯಾಗಬಾರದು. ಶಿಕ್ಷಕ-ಪೋಷಕ ಸಂಬಂಧ ಸಕಾರಾತ್ಮಕ ದಿಕ್ಕಿನಲ್ಲಿ ಸಾಗುತಿರಬೇಕು.ಹೆತ್ತವರು ಶಿಕ್ಷಕರ ದೋಷಗಳನ್ನೇ ಕೆದಕಿ ಹೇಳಿ ನಡೆಯುವುದನ್ನು ಬಿಡಬೇಕಾಗುತ್ತದೆ.ಗುರುವಿನ ಪ್ರಯತ್ನಗಳ ಗುರಿ ವಿದ್ಯಾರ್ಥಿಯರ ಏಳಿಗೆಯೆ ಆಗಿರುತ್ತದೆ.ಅದನ್ನು ಪ್ರತಿ ಹೆತ್ತವರು ಅರಿತುಕೊಳ್ಳಬೇಕು.ನೂರಾರು ಹಣ್ಣುಗಳ ನಡುವೆ ಕೊಳೆತ ಒಂದೆರಡು ಹಣ್ಣುಗಳಿರುವುದು ಸಹಜ.ಕೊಳೆತ ಹಣ್ಣನ್ನು ಬಿಸಾಡಿ, ಒಳ್ಳೆಯ ಹಣ್ಣಿನ ಸವಿ ನೋಡಬೇಕು.ಆಗಲೇ ಸುಮಧುರ ಬದುಕು ನಮ್ಮದಾಗುವುದು.

ಶಾಲೆ ವಿದ್ಯಾಕೇಂದ್ರ.ಇಲ್ಲಿ ಮಕ್ಕಳ ಕಲಿಕಾ ಪ್ರಕ್ರಿಯೆ ನಡೆಯುತ್ತದೆ. ಶಿಕ್ಷಕರು ಬೋಧನೆ ಮಾಡುತ್ತಾರೆ.ಮಕ್ಕಳು ಪಾಠ ಕೇಳುತ್ತಾರೆ ,

ಬರೆಯುತ್ತಾರೆ, ಆಡುತ್ತಾರೆ, ನಲಿಯುತ್ತಾರೆ. ಹೀಗಿರುವಾಗ ಮನೆಯಲ್ಲಿ ಮಕ್ಕಳು ಪುಸ್ತಕ ತೆರೆಯುವುದೇ ಬೇಡವೇ? ಮಕ್ಕಳ ಸಂಪೂರ್ಣ ಕಲಿಕೆಯ ಜವಾಬ್ದಾರಿ ಶಿಕ್ಷಕರಿಗೆ ಮಾತ್ರ ಸೇರಿದ್ದೇ? ಈ ನಿಟ್ಟಿನಲ್ಲಿ ಶಾಲೆಯ ಹೊರತಾಗಿ ಹೆತ್ತ ವರ ಪಾತ್ರವೇನೂ ಇಲ್ಲವೇ?

ದೇಶದ ಭವಿಷ್ಯ ನಿರ್ಧಾರವಾಗುವುದು ಶಾಲೆಗಳಲ್ಲಿ ಆದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆಯನ್ನು ನೀಡೋಣ. ಸದೃಢ ಸಮಾಜದ ನಿರ್ಮಾಣದಲ್ಲಿ ನಮ್ಮೆಲ್ಲರ ಪಾತ್ರವನ್ನು ತಿಳಿದುಕೊಳ್ಳೋಣ.

-ಬೊಟ್ಟಂಗಡ ಸುಮನ್‌ ಸೀತಮ್ಮ

ತೆರಾಲು, ಕೊಡಗು

Advertisement

Udayavani is now on Telegram. Click here to join our channel and stay updated with the latest news.

Next