Advertisement

ಇದೇ ಪೂರ್ಣ ಸತ್ಯ

11:02 AM Sep 15, 2017 | |

ನಿರೂಪಣೆ ಮಾಡಿದ್ದಾರೋ ಗೊತ್ತಿಲ್ಲ ಯತಿರಾಜ್‌. ನಿರೂಪಣೆ ಮಾಡುವ ಸಂದರ್ಭದಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದ ಅವರು, ಫಾರ್‌ ಎ ಚೇಂಜ್‌ ಮಾತುಮಾತಿಗೂ ತಡಕಾಡುತ್ತಿದ್ದರು. ಏನು ಹೇಳಬೇಕೋ, ಏನು ಬಿಟ್ಟೆನೋ ಎಂಬ ಗೊಂದಲದಲ್ಲಿದ್ದರು. ಒಂದು ಹಂತದಲ್ಲಿ, “ಇಷ್ಟು ಹೇಳಿದ್ದೀನಿ. ಗೊಂದಲ ಆಗ್ತಿದೆ. ಆಮೇಲೆ ಕೇಳಿದ್ರೆ ಹೇಳ್ತೀನಿ’ ಅಂತ ಸುಮ್ಮನಾದರು.

Advertisement

ಯತಿರಾಜ್‌ ಹೀಗಾಗಿದ್ದಕ್ಕೆ ಕಾರಣ ಅವರ ಮೇಲೆ ಜವಾಬ್ದಾರಿ ಮತ್ತು ಒತ್ತಡ ಬಂದುಬಿಟ್ಟಿರೋದು. ಇದುವರೆಗೂ ನಟರಾಗಿ, ನಿರೂಪಕರಾಗಿದ್ದ ಅವರು, ನಿರ್ದೇಶಕರಾಗಿದ್ದಾರೆ. ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ಜೊತೆಗೆ ನಟನೆಯೂ ಮುಂದುವರೆದಿದೆ. ಆದರೆ, ಈ ಬಾರಿ ಅವರು ಬರೀ ಪೋಷಕ ನಟನಲ್ಲ, ನಾಯಕ. ಹಾಗಾಗಿ ಸಹಜವಾಗಿಯೇ ಜವಾಬ್ದಾರಿ, ಒತ್ತಡ ಮತ್ತು ಗೊಂದಲ ಹೆಚ್ಚಾಗಿದೆ. ಅದೇ ಕಾರಣಕ್ಕೆ ಅವರು ಅಂದು ನರ್ವಸ್‌ ಆಗಿದ್ದರು. ಇದರ ನಡುವೆಯೇ ತಮ್ಮ ಮೊದಲ ಚಿತ್ರ “ಪೂರ್ಣ ಸತ್ಯ’ದ ಮೊದಲ ಪತ್ರಿಕಾಗೋಷ್ಠಿಯನ್ನು ಮುಗಿಸಿದರು.

“ಪೂರ್ಣ ಸತ್ಯ’ ಇದೇ 18ಕ್ಕೆ ಪ್ರಾರಂಭವಾಗಲಿದೆ. ಅದಕ್ಕೂ ಮುನ್ನ ತಮ್ಮ ತಂಡದವರೊಂದಿಗೆ ಮಾಧ್ಯಮದವರೆದುರು ಬಂದಿದ್ದರು ಯತಿರಾಜ್‌. ಎಲ್ಲರನ್ನೂ ವೇದಿಕೆ ಮೇಲೆ ಕೂರಿಸಿ, “ಪೂರ್ಣ ಸತ್ಯ’ ಎಂದರೇನು ಎಂದು ವಿವರಿಸಿದರು. ಎಲ್ಲರಿಗೂ ಏನೋ ಮಾಡಬೇಕು ಎಂಬ ಗೊಂದಲವಿದೆ. ನಾನಾ ಕಾರಣಗಳಿಗೆ ಬೇಸರ, ಹಪಹಪಿ ಇದೆ. ಇದನ್ನೆಲ್ಲಾ ಇಟ್ಟುಕೊಂಡು ಕಥೆ ಮಾಡಿದ್ದೇನೆ. ಇಲ್ಲಿ ನಾನು ಜನರ ಪ್ರತಿನಿಧಿಯಾಗಿ ಅಭಿನಯಿಸುತ್ತಿದ್ದೀನಿ’ ಎಂದರು. ಆಮೇಲೆ ಅವರಿಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. “ಇಷ್ಟು ಹೇಳಿದ್ದೀನಿ. ಗೊಂದಲ ಆಗ್ತಿದೆ. ಆಮೇಲೆ 
ಕೇಳಿದ್ರೆ ಹೇಳ್ತೀನಿ’ ಅಂತ ಸುಮ್ಮನಾದರು.

ಅವರಾದ ನಂತರ ನಾಯಕಿ ಗೌತಮಿ, ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮುರಳಿಧರ್‌ ಕೌಶಿಕ್‌ ಮತ್ತು ಡಿಂಗ್ರಿ ನರೇಶ್‌, ಛಾಯಾಗ್ರಹಣ ಮಾಡುತ್ತಿರುವ ಬಿ.ಎಲ್‌. ಬಾಬು, ಸಂಭಾಷಣೆ ಬರೆಯುತ್ತಿರುವ ಶ್ರೀಕಾಂತ್…  ಇವರೆಲ್ಲರೂ ಚಿತ್ರದಲ್ಲಿ ತೊಡಗಿಸಿಕೊಳ್ಳುತ್ತಿರುವ ಮತ್ತು ಯತಿರಾಜ್‌ ಜೊತೆಗೆ ಕೆಲಸ ಮಾಡುತ್ತಿರುವ ಬಗ್ಗೆ ಖುಷಿಪಟ್ಟರು.

ಮತ್ತೆ ಯತಿರಾಜ್‌ ಅವರಿಗೆ ಮೈಕ್‌ ಹೋಯಿತು. ಅವರು ಮಾತಾಡಬೇಕು ಎನ್ನುವಷ್ಟರಲ್ಲಿ ಅವರ ಪತ್ನಿಯ ಆಗಮನವಾಯಿತು. ಥಟ್ಟನೆ ಮಾತು ಶುರು ಮಾಡಿದರು ಯತಿರಾಜ್‌. “ಎಲ್ಲರೂ “ಪೂರ್ಣ ಸತ್ಯ’ ಎಂದರೇನು ಎಂದು ಕೇಳುತ್ತಿದ್ದರು. ಅದನ್ನು ಹೇಳಲು ಬಯಸುತ್ತೇನೆ. ನನ್ನ ಹೆಂಡತಿಗೆ 12 ಗಂಟೆಗೆ ಬರುವುದಕ್ಕೆ ಹೇಳಿದ್ದೆ. ಅವಳು ಒಂದು ಗಂಟೆಗೆ ಬಂದಿದ್ದಾಳೆ. ಇದನ್ನು ನೋಡಿ ನನಗೆ ತಕ್ಷಣ ಕೋಪಬರಬಹುದು. ನನ್ನ ಮಾತು ಕೇಳಲಿಲ್ಲ ಎನಿಸಬಹುದು. ನಮ್ಮ ಸಿಟ್ಟೇನಿದ್ದರೂ ಅರ್ಧ ಸತ್ಯ ಮಾತ್ರ. ಇನ್ನರ್ಧ ಸತ್ಯ, ಬೇರೇನೋ ಇರಬಹುದು. ಅವಳಿಗೆ ರಿಕ್ಷ ಸಿಗದಿರಬಹುದು. ಸಿಕ್ಕರೂ ಲೊಕೇಶನ್‌ ಎಲ್ಲಿದೆ ಎಂದು ಗೊತ್ತಾಗದಿರಬಹುದು. ಅವಳ ಜೊತೆಗೆ ಮಾತಾಡಿದರೆ ಪೂರ್ಣ ಸತ್ಯ ಗೊತ್ತಾಗುತ್ತದೆ. ಅದೇ ರೀತಿ ನಾವು ಎಷ್ಟೋ ವಿಷಯಗಳ ಬಗ್ಗೆ ಗೊತ್ತಿಲ್ಲದೆ ದುಡುಕುತ್ತೇವೆ. ಆದರೆ, ಸರಿಯಾಗಿ ವಿಮರ್ಶೆ ಮಾಡಿದರೆ, ತಾಳ್ಮೆಯಿಂದ ಯೋಚಿಸಿದರೆ ಸತ್ಯ ಗೊತ್ತಾಗುತ್ತದೆ’ ಎಂದು ಹೇಳಿದರು ಯತಿರಾಜ್‌.

Advertisement

ಇಲ್ಲಿ ಯಾವುದೇ ಫಿಲಾಸಫಿ ಇರುವುದಿಲ್ಲವಂತೆ. ಅದೇ ರೀತಿ ನಾಟಕೀಯತೆಯೂ ಇರುವುದಿಲ್ಲವಂತೆ. “ಚಿತ್ರ ನೋಡುತ್ತಿದ್ದರೆ ನಿಜ ಎನಿಸಬೇಕು. ಒಳ್ಳೆಯ ಮನಸ್ಸಿನಿಂದ ಬಂದು ಯಾರು ಚಿತ್ರ ನೋಡಿದರೂ ಅವರಿಗೆ ಇಷ್ಟವಾಗಬಹುದು. ಬ್ಲಾಸ್ಟ್‌ ಆಗಬಹುದು, ಫೈಟ್‌ ಇರಬಹುದು ಅಂತ ಬಂದರೆ
ಇಷ್ಟವಾಗದಿರಲೂಬಹುದು’ ಎಂದು ಹೇಳಿದರು.

ಇದೇ ಪೂರ್ಣ ಸತ್ಯ: ಯತಿರಾಜ್‌ ಎಷ್ಟೇ ಹೇಳಿದರೂ, ಪೂರ್ಣ ಸತ್ಯ ಹೇಳಿರಲಿಲ್ಲ. ಅರ್ಧ ಮಾತ್ರ ಹೇಳಿದ್ದರು. ಪೂರ್ಣ ಹೇಳಿದ್ದು ಅವರ ಮಗನ ಪ್ರಸ್ಥಾಪವಾದ ಮೇಲೆ. ಯತಿರಾಜ್‌ ಹೇಳುವಂತೆ ಈ ಚಿತ್ರಕ್ಕೆ ಮೂಲ ಕಥೆ ಕೊಟ್ಟಿದ್ದು, ಅವರ ಮಗ ಪೃಥ್ವಿರಾಜ್‌ ಅಂತೆ. ಪೃಥ್ವಿ, ಮರಳುಗಾಡು ಹಿನ್ನೆಲೆಯಲ್ಲಿ ಒಂದು ಕಥೆ ಮಾಡಿಕೊಂಡಿದ್ದನಂತೆ. ಅದನ್ನ ಬದಲಾಯಿಸಿಕೊಂಡು, “ಪೂರ್ಣ ಸತ್ಯ’ ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next