ಬೆಂಗಳೂರು: ದೇಶದ ಮೊದಲ “ಡ್ರೋನ್ ರೇಸ್’ಗೆ 21ನೇ ಬೆಂಗಳೂರು ಟೆಕ್ ಸಮ್ಮಿಟ್ ಶುಕ್ರವಾರ ಸಾಕ್ಷಿಯಾಯಿತು. ಪಡುವಣದಲ್ಲಿ ನಿಧಾನವಾಗಿ ಇರುಳು ಕವಿಯುತ್ತಿದ್ದಂತೆ ಇತ್ತ ಅರಮನೆ ಅಂಗಳದಲ್ಲಿ ಮಿಂಚುಹುಳುಗಳಂತೆ ಗುಂಯ್ ಎನ್ನುತ್ತಾ ಒಂದೊಂದಾಗಿ ಡ್ರೋನ್‌ಗಳು ಮೇಲೆದ್ದವು. ಒಂದಕ್ಕಿಂತ ಮತ್ತೂಂದು ಹೆಚ್ಚು ಎನ್ನುವಂತೆ ಎತ್ತರಕ್ಕೆ ಹಾರುತ್ತಿದ್ದ ಡ್ರೋನ್‌ಗಳು ಸ್ವಲ್ಪ ದೂರ ಹೋಗುತ್ತಿದ್ದಂತೆ ಕತ್ತಲಿನಲ್ಲಿ ಸಣ್ಣ ಚುಕ್ಕೆಗಳಂತೆ ಕಾಣುತ್ತಿದ್ದವು. ನೆರೆದ ಮಕ್ಕಳು, ಹಿರಿಯರು ಇದಕ್ಕೆ ಮನಸೋತರು.
ಮೂರು ದಿನಗಳ ಟೆಕ್ ಸಮಿಟ್‌ನಲ್ಲಿ ಡ್ರೋನ್ ರೇಸ್ ಪ್ರಮುಖ ಆಕರ್ಷಣೆಯಾಗಿತ್ತು. ಯಾಕೆಂದರೆ, ದೇಶ-ವಿದೇಶಗಳಿಂದ ಬಂದ ಡ್ರೋನ್ ತಯಾರಕ ಕಂಪೆನಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ರೇಸ್‌ನಲ್ಲಿ ಕೇವಲ ನ್ಯಾನೋ ಡ್ರೋನ್‌ಗಳು ಅಂದರೆ 250 ಗ್ರಾಂಕ್ಕಿಂತ ಕಡಿಮೆ ತೂಕ ಇರುವಂತಹವುಗಳಿಗೆ ಮಾತ್ರ ಭಾಗವಹಿಸಲು ಅವಕಾಶ ಇತ್ತು. ಪ್ರತಿ ಡ್ರೋನ್‌ಗೆ 2ರಿಂದ 3 ನಿಮಿಷ ಕಾಲಾವಕಾಶ ನೀಡಲಾಗಿತ್ತು. ಅಷ್ಟರಲ್ಲಿ ಅವುಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಿ, ಪ್ರೇಕ್ಷಕರ ಮನಗೆಲ್ಲುತ್ತಿದ್ದವು.
ಸಾಮಾನ್ಯವಾಗಿ ಒಳಾಂಗಣದಲ್ಲಿ ಡ್ರೋನ್ ರೇಸ್ ನಡೆಯತ್ತದೆ. ಅದೂ ವಿದೇಶಗಳಲ್ಲಿ ಇವು ನಡೆದಿರುವ ಬಗ್ಗೆ ವರದಿಯಾಗಿವೆ. ಇದೇ ಮೊದಲ ಬಾರಿ ದೇಶದಲ್ಲಿ ನಡೆಯಿತು. ಗಂಟೆಗೆ ಸುಮಾರು 120 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಹಾರಾಟ ನಡೆಸಿದವು. ಒಂದೊಂದು ಡ್ರೋಣ್ ಹಾರಾಟ ಆರಂಭಿಸುತ್ತಿದ್ದಂತೆ ಕರತಾಡನ, ಕೇಕೆ ಮುಗಿಲುಮುಟ್ಟುತ್ತಿದ್ದವು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಒಂದು ಲಕ್ಷ ರೂ. ಹಾಗೂ ದ್ವಿತೀಯ ಸ್ಥಾನ ಪಡೆದ ಡ್ರೋನ್‌ಗೆ 50 ಸಾವಿರ ನಗದು ಬಹುಮಾನ ನೀಡಲಾಗಿದೆ.
ಸ್ವಿಡ್ಜರ್‌ಲ್ಯಾಂಡ್‌ನ ನಾಲ್ಕು ಕಂಪನಿಗಳು, ಇಸ್ರೇಲ್ ಮತ್ತು ಭಾರತದ ತಲಾ ಒಂದು ಕಂಪನಿಗಳು ಇದರಲ್ಲಿ ಭಾಗವಹಿಸಿದ್ದವು. ಡ್ರೋನ್ ರೇಸ್‌ಗೆ ದೇಶದ ವಿವಿಧ ರಾಜ್ಯಗಳಿಂದ ನೂರಾರು ಜನ ಭಾಗವಹಿಸಿದ್ದರೂ, ಕೊನೆಯ ದಿನದ ಸ್ಪರ್ಧೆಯಲ್ಲಿ 30 ಡ್ರೋನ್‌ಗಳು ಆಯ್ಕೆಗೊಂಡು ಹಾರಾಟ ನಡೆಸಿದವು. ಅದರಲ್ಲಿಯೂ ಪ್ರೌಢಶಾಲಾ ವಿದ್ಯಾರ್ಥಿಗಳು ತಯಾರಿಸಿರುವ ಡ್ರೋನ್‌ಗಳು ಈ ಹಂತ ತಲುಪಿದ್ದು ವಿಶೇಷವಾಗಿತ್ತು.