Advertisement

ಪಾಕಿಸ್ಥಾನದ ಉಗ್ರತ್ವ ಮಟ್ಟ ಹಾಕಲು ಇದೇ ಸುಸಮಯ

05:10 PM May 07, 2022 | Team Udayavani |

ಉಗ್ರವಾದ ಮತ್ತು ಪಾಕಿಸ್ಥಾನ ಎಂಬುದು ಒಂದು ರೀತಿಯಲ್ಲಿ ಅನ್ವರ್ಥಕ ಪದಗಳಿದ್ದಂತೆ. ಈ ದೇಶದಲ್ಲಿ ಯಾರೇ ಆಡಳಿತಕ್ಕೆ ಬರಲಿ, ಉಗ್ರವಾದ ನಿಲ್ಲಿಸುವುದು ಮಾತ್ರ ಅಸಾಧ್ಯದ ಮಾತು. ಇಡೀ ಜಗತ್ತು ಬೇರೊಂದು ದಿಕ್ಕಿನಲ್ಲಿ ಸಾಗುತ್ತಿದ್ದರೆ, ಪಾಕಿಸ್ಥಾನ ಮಾತ್ರ ಇನ್ನೂ ಉಗ್ರರನ್ನು ಸಾಕಿ, ಬೆಳೆಸಿ ಭಾರತಕ್ಕೆ ನುಗ್ಗಿಸುವ ಕೆಲಸವನ್ನೇ ಮಾಡುತ್ತಿದೆ.

Advertisement

ಭಾರತದಲ್ಲಿನ ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದರೆ ಪಾಕಿಸ್ಥಾನದ ಈ ಕುತ್ಸಿತ ಬುದ್ಧಿಯ ಬಗ್ಗೆ ಅರಿವಾಗದೇ ಇರದು. ಏಳೆಂಟು ವರ್ಷಗಳ ಹಿಂದೆ, ಭಾರತದ ಮಹಾನಗರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದ ಪಾಕ್‌ ಉಗ್ರರಿಗೆ ಈ ಆಟ ಅಸಾಧ್ಯವೆನಿಸಿದೆ. ಇದಕ್ಕೆ ಕಾರಣ ಭಾರತದಲ್ಲಿನ ಭದ್ರತಾ ವ್ಯವಸ್ಥೆ ಆಧುನೀಕರಣಗೊಂಡಿರುವುದು, ಪೊಲೀಸ್‌ ವ್ಯವಸ್ಥೆ ಚುರುಕುಗೊಂಡಿರುವುದು. ಹೀಗಾಗಿಯೇ ಈಗ ಮಹಾನಗರಗಳಲ್ಲಿ ಸ್ಫೋಟಗಳಂಥ ಕೀಳು ಆಟವಾಡಲು ಪಾಕ್‌ ಉಗ್ರರಿಗೆ ಆಗುತ್ತಿಲ್ಲ. ಈಗ ಬೇರೊಂದು ವರಸೆ ಶುರು ಮಾಡಿಕೊಂಡಿರುವ ಉಗ್ರರು, ಭಾರತದಲ್ಲೇ ಯುವಕರನ್ನು ಆರಿಸಿ, ಇವರಿಗೆ ತರಬೇತಿ ನೀಡಿ, ಶಸ್ತ್ರಾಸ್ತ್ರ ನೀಡುವುದು, ಡ್ರಗ್ಸ್‌ ಸರಬರಾಜು ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ, ಪಂಜಾಬ್‌ನ ಗಡಿಯಲ್ಲಿ ಡ್ರೋನ್‌ ಮೂಲಕ ಬಂದ ಡ್ರಗ್ಸ್‌ ಮತ್ತು ಗುರುವಾರವಷ್ಟೇ ಬಂಧಿತರಾದ ಖಲಿಸ್ಥಾನಿ ಬೆಂಬಲಿತ ಉಗ್ರರು. ಇವರ ಬಳಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಒಂದು ಲೆಕ್ಕಾಚಾರದಲ್ಲಿ ಹೇಳುವುದಾದರೆ ಇದು ಆತಂಕದ ವಿಚಾರವೇ.

ಈ ಹಿಂದೆ ಮುಸ್ಲಿಂ ಯುವಕರ ತಲೆಕೆಡಿಸಿ, ಅವರಲ್ಲಿ ಜೆಹಾದ್‌ ಮನೋಭಾವ ತುಂಬಿ ಭಾರತಕ್ಕೆ ಕಳುಹಿಸಲಾಗುತ್ತಿತ್ತು. ಇಂಥವರೇ 2008ರಲ್ಲಿ ಮುಂಬಯಿ ಮೇಲೆ ದಾಳಿ ಮಾಡಿದ್ದರು. ಈಗ ಖಲಿಸ್ಥಾನಿ ಬೆಂಬಲಿತ ಯುವಕರನ್ನು ಆರಿಸಿಕೊಂಡು, ಅವರಿಗೆ ಪಾಕಿಸ್ಥಾನದಲ್ಲೇ ತರಬೇತಿ ನೀಡಿ ಭಾರತಕ್ಕೆ ಕಳುಹಿಸಲಾಗುತ್ತಿದೆ. ಹಾಗೆಯೇ ಇವರು ಪಂಜಾಬ್‌ನಲ್ಲಿ ಖಲಿಸ್ಥಾನಿ ಪರ ಮನಸ್ಸುಳ್ಳ ಯುವಕರನ್ನು ಗುರುತಿಸಿ ಅವರಿಗೆ ತರಬೇತಿ ನೀಡಿ, ಶಸ್ತ್ರಾಸ್ತ್ರ ಸರಬರಾಜು ಮತ್ತು ಡ್ರಗ್ಸ್‌ ರವಾನೆಗೆ ಬಳಸಿಕೊಳ್ಳಲಾಗುತ್ತಿದೆ. ಈ ಖಲಿಸ್ಥಾನಿ ಯುವಕರನ್ನು ಬಳಸಿಕೊಳ್ಳುವುದು ಐಎಸ್‌ಐನ ಹೊಸ ಮುಖ್ಯಸ್ಥರ ಸಂಚು. ಆದರೆ ಈ ಸಂಚು ಈಡೇರಲು ಭದ್ರತಾ ಪಡೆಗಳು ಎಂದಿಗೂ ಬಿಡಬಾರದು.

ಸದ್ಯ ಭಾರತದಲ್ಲಿ ಸ್ಫೋಟ ಮತ್ತು ಸ್ಫೋಟಕಗಳನ್ನು ಬಳಸಿ ದಾಳಿ ಮಾಡುವುದು ಕಷ್ಟದ ಕೆಲಸ. ಹೀಗಾಗಿಯೇ ಡ್ರಗ್ಸ್‌ ದಾರಿ ಹಿಡಿದಿರುವ ಉಗ್ರರು, ಇಲ್ಲಿನ ಯುವಕರನ್ನು ಹಾಳು ಮಾಡುವ ಉದ್ದೇಶದಿಂದಲೇ ಅಕ್ರಮವಾಗಿ ಹೆಚ್ಚಿನ ಪ್ರಮಾಣದ ಡ್ರಗ್ಸ್‌ ಕಳುಹಿಸುತ್ತಿದ್ದಾರೆ. ಈ ಜಾಲಕ್ಕೆ ಯುವಕರು ಮರುಳಾಗದಂತೆ ತಡೆಯುವ ಕೆಲಸವೂ ಪೊಲೀಸರ ಮೇಲಿದೆ. ಅಲ್ಲದೆ ಇಲ್ಲಿಗೆ ಡ್ರಗ್ಸ್‌ ಬರುವ ದಾರಿಯನ್ನೇ ಮುಚ್ಚಬೇಕಾದ ತುರ್ತು ಅಗತ್ಯವೂ ಭದ್ರತಾ ಪಡೆಗಳ ಮುಂದಿದೆ.

ಇದರ ಬೆನ್ನಲ್ಲೇ ಶುಕ್ರವಾರ ಭದ್ರತಾ ಪಡೆಗಳು ಮೂವರು ಪಾಕ್‌ ಮೂಲದ ಉಗ್ರರನ್ನು ಸದೆ ಬಡಿದಿವೆ. ಅಮರನಾಥ ಯಾತ್ರೆಗೆ ಇನ್ನೂ ಒಂದು ತಿಂಗಳು ಇರುವಂತೆಯೇ ಚುರುಕುಗೊಂಡಿರುವ ಭದ್ರತಾ ಪಡೆಗಳು ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯಲ್ಲಿ ಹಿಜ್‌ಬುಲ್‌ ಮುಜಾಹಿದ್ದೀನ್‌ನ ಮೂವರು ಉಗ್ರರನ್ನು ಹೊಡೆದುಹಾಕಿವೆ. ಇದೇ ರೀತಿಯಲ್ಲಿ ಭಾರತದ ಭದ್ರತೆಗೆ ಅಪಾಯ ತರುವಂಥ ಉಗ್ರರನ್ನು ಮುಲಾಜಿಲ್ಲದೇ ಹೊಡೆದುಹಾಕಿದರೆ ಮಾತ್ರ ಕಾಶ್ಮೀರದಲ್ಲಿ ಉಗ್ರರ ಆಟಾಟೋಪ ನಿಲ್ಲುತ್ತದೆ.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next